ಕುಂದಾಪುರ: ಬ್ರಹ್ಮಾವರ ತಾಲೂಕಿನ ಶಿರಿಯಾರ ಗ್ರಾ.ಪಂ ವ್ಯಾಪ್ತಿಯ ಸಕ್ಕಟ್ಟು ಎಂಬಲ್ಲಿ ಸಂಪರ್ಕ ರಸ್ತೆ, ಕಿಂಡಿಅಣೆಕಟ್ಟು, ಸೇತುವೆ ಮೊದಲಾದ ಅಭಿವೃದ್ಧಿ ಕಾಮಗಾರಿಗಳಿಗೆ 2 ಕೋಟಿ ಅಂದಾಜು ಅನುದಾನ ಲಭಿಸಿದ್ದು ಬಹುತೇಕ ಎಲ್ಲಾ ಕಾಮಗಾರಿಗಳು ಮುಗಿದು ಸೇತುವೆ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದೆ.
ಶಿರಿಯಾರದ ಸಕ್ಕಟ್ಟಿನಿಂದ ಕಾಸನಗುಂದಿನವರೆಗೆ 30 ಲಕ್ಷ ಅನುದಾನದಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣವಾಗಿದ್ದು ಸ್ಥಳೀಯ ಗ್ರಾ.ಪಂ ಅಧ್ಯಕ್ಷ ಸುಧೀಂದ್ರ ಕುಮಾರ್ ಶೆಟ್ಟಿ ಉಪಸ್ಥಿತಿಯಲ್ಲಿ ಗ್ರಾಮಸ್ಥರೇ ರಸ್ತೆಯನ್ನು ಲೋಕಾರ್ಪಣೆಗೊಳಿಸಿದರು. ಈ ಸಂದರ್ಭ ಹಿರಿಯ ನಾಗರಿಕ ಸೋಮ ಪೂಜಾರಿ ಮಾತನಾಡಿ, ಕಳೆದ 2-3 ದಶಕಗಳಿಂದ ಈ ರಸ್ತೆ ಬೇಡಿಕೆಯಾಗಿದ್ದು 40ಕ್ಕೂ ಅಧಿಕ ಮನೆಗಳಿಗೆ ಸಂಪರ್ಕಕ್ಕೆ ಮೊದಲು ಅತೀವ ಕಷ್ಟ ಪಡಬೇಕಿತ್ತು. ಗದ್ದೆಯಲ್ಲಿಯೇ ನಡೆದಾಡಬೇಕಿತ್ತು. ಬೇಸಾಯ ಮಾಡುವ ರೈತಾಪಿ ವರ್ಗದವರು ಕೃಷಿ ಬೆಳೆಗಳನ್ನು ತಲೆ ಮೇಲೆ ಹೊತ್ತು ಸಾಗಬೇಕಾದ ಅನಿವಾರ್ಯತೆಯಿತ್ತು. ಇದೀಗಾ ಸುಸಜ್ಜಿತ ರಸ್ತೆ ನಿರ್ಮಾಣವಾಗಿದ್ದು ಬವಣೆ ತಪ್ಪಿದಂತಾಗಿದೆ.ಸಕ್ಕಟ್ಟು ರಸ್ತೆ ನಿರ್ಮಾಣದ ಹಿಂದೆ ಈ ಭಾಗದ ಹಲವರ ಹೋರಾಟವಿದೆ ಎಂದರು.
ಸ್ಥಳೀಯ ಹಿರಿಯರಾದ ಸೋಮ ಪೂಜಾರಿ, ಶೇಖರ್ ಸುವರ್ಣ, ಉಮೇಶ ಬಂಗೇರ, ಮಾಣಿಗೋಪಾಲ, ಮಹಾಬಲ ಪೂಜಾರಿ, ಪಾರ್ವತಿ ಶೆಟ್ಟಿ ಮೊದಲಾದವರಿದ್ದರು.
ಶಾಸಕರ ಸ್ಪಂದನೆ:
ಶಿರಿಯಾರದ ಸಕ್ಕಟ್ಟು ಭಾಗದಲ್ಲಿ ರಸ್ತೆ, ಸೇತುವೆ, ಕಿಂಡಿ ಅಣೆಕಟ್ಟು ನಿರ್ಮಾಣವಾಗಿದೆ. 50 ಲಕ್ಷ ವೆಚ್ಚದಲ್ಲಿ ಸೇತುವೆ ಕಾಮಗಾರಿ ನಡೆಯುತ್ತಿದೆ. ಹಲವು ವರ್ಷಗಳ ರೈತಾಪಿ ಜನರ ಸಮಸ್ಯೆಗೆ ಕುಂದಾಪುರ ಶಾಸಕರು ಸ್ಪಂದನೆ ನೀಡಿದ್ದಾರೆ. 1 ಕೊಟಿ ವೆಚ್ಚದಲ್ಲಿ ಕಿಂಡಿ ಅಣೆಕಟ್ಟು ನಿರ್ಮಿಸಿದ್ದರಿಂದ ಕೃಷಿಕರಿಗೆ ಅನುಕೂಲವಾಗಿದೆ.
– ಸುಧೀಂದ್ರ ಕುಮಾರ್ ಶೆಟ್ಟಿ (ಗ್ರಾ.ಪಂ ಅಧ್ಯಕ್ಷ)
Comments are closed.