ಕುಂದಾಪುರ: ಕಾಲೇಜಿಗೆ ತೆರಳುತ್ತಿದ್ದ ವಿದ್ಯಾರ್ಥಿಯೋರ್ವ ಬಸ್ಸಿನಿಂದ ಕೆಳಗೆ ಇಳಿಯುವ ಸಂದರ್ಭದಲ್ಲಿ ಆಯತಪ್ಪಿ ಬಸ್ ಚಕ್ರದಡಿ ಸಿಲುಕಿ ಮೃತಪಟ್ಟ ಘಟನೆ ಶನಿವಾರ ಬೆಳಿಗ್ಗೆ ಹೆಮ್ಮಾಡಿಯ ಜಂಕ್ಷನ್ ನಲ್ಲಿ ನಡೆದಿದೆ.
ಹೆಮ್ಮಾಡಿ ಸಮೀಪದ ಕಟ್ ಬೇಲ್ತೂರು ನಿವಾಸಿ, ಕೋಟೇಶ್ವರ ಕಾಗೇರಿಯಲ್ಲಿರುವ ವರದರಾಜ ಎಂ
ಶೆಟ್ಟಿ ಪ್ರಥಮ ದರ್ಜೆ ಕಾಲೇಜಿನ ಅಂತಿಮ ವರ್ಷದ ಬಿಕಾಂ ವಿದ್ಯಾರ್ಥಿ ಸುದೀಪ್ ಪೂಜಾರಿ (20) ಮೃತ ದುರ್ದೈವಿ.
ಶನಿವಾರ ಬೆಳಿಗ್ಗೆ ಕುಂದಾಪುರಕ್ಕೆ ತೆರಳುವ ಖಾಸಗಿ ಬಸ್ ನಲ್ಲಿ ಸುದೀಪ್ ಸಂಚರಿಸುತ್ತಿದ್ದು ಹೆಮ್ಮಾಡಿ ಜಂಕ್ಷನ್ ಹಿಂದಿನ ನಿಲ್ದಾಣವಾದ ಕಟ್ ಬೇಲ್ತೂರಿನಲ್ಲಿ ಬಸ್ ಹತ್ತಿದ್ದ. ಹೆಮ್ಮಾಡಿಯಲ್ಲಿ ಬಸ್ ನಿಲ್ಲಿಸಿ ಪ್ರಯಾಣಿಕರನ್ನು ಇಳಿಸಿ ಮತ್ತೆ ಹತ್ತಿಸಿಕೊಳ್ಳಲಾಗಿದ್ದು ಬಸ್ ಮತ್ತೆ ಚಲಿಸಲು ಪ್ರಾರಂಭಿಸುತ್ತಿದ್ದ ವೇಳೆ ಮಹಿಳೆಯೊಬ್ಬರು ಇಳಿಯದ ಹಿನ್ನೆಲೆ ಮತ್ತೆ ಅವರನ್ನು ಇಳಿಸಲು ಬಸ್ ನಿಲ್ಲಿಸುತ್ತಿದ್ದಾಗ ಸುದೀಪ್ ಹಠಾತ್ತನೆ ಆಯತಪ್ಪಿ ಕೆಳಗೆ ಬಿದ್ದಿದ್ದಾನೆ. ಬಸ್ ಮುಂಬದಿಯ ಬಾಗಿಲಲ್ಲಿ ನಿಂತಿದ್ದ ಸುದೀಪ್ ಬಸ್ ನ ಮುಂದಿನ ಚಕ್ರದಡಿಯಲ್ಲಿ ಸಿಲುಕಿದ್ದಾನೆ. ಆತನ ಸೊಂಟದ ಮೇಲೆ ಚಕ್ರ ಹರಿದ ಪರಿಣಾಮ ಗಂಭೀರ ಗಾಯಗೊಂಡ ಸುದೀಪ್ ಮೃತಪಟ್ಡಿದ್ದಾನೆ. ಮೃತದೇಹವನ್ನು ಕುಂದಾಪುರ ಸರ್ಕಾರಿ ಆಸ್ಪತ್ರೆ ಶವಾಗಾರದಲ್ಲಿರಸಲಾಗಿದ್ದು ಸಹಪಾಠಿಗಳು, ಬೋಧಕರು ಆಗಮಿಸಿ ಅಂತಿಮ ದರ್ಶನ ಪಡೆಯುತ್ತಿದ್ದಾರೆ.
ಕುಂದಾಪುರ ಸಂಚಾರಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Comments are closed.