ಕುಂದಾಪುರ: ಭಗವಂತನನ್ನು ಕೇಂದ್ರೀಕರಿಸಿಕೊಂಡು ಬದುಕನ್ನು ಕಟ್ಟಿಕೊಳ್ಳಬೇಕು ಎಂದು ಉಡುಪಿಯ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದಂಗಳವರು ಹೇಳಿದರು.
ಅವರು ಶ್ರೀ ಮೈಲಾರೇಶ್ವರ ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶೋತ್ಸವದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು.
ಅನೇಕ ಬಾಹ್ಯ ಶತ್ರುಗಳು ನಮ್ಮ ಕಣ್ಣಿಗೆ ಕಾಣುತ್ತಾರೆ. ಆದರೆ ನಮ್ಮೊಳಗಿನ ನಿಜ ಶತ್ರುಗಳಾದ ಅರಿಷಡ್ವರ್ಗಗಳನ್ನು ನಾವು ಜಯಸುವುದರಿಂದ ದೇವರಿಗೆ ಸಮೀಪವಾಗುತ್ತೇವೆ. ಜೀವನದಲ್ಲಿ ದುರಿತ ಕಾರ್ಯಗಳ ಆಲೋಚನೆಯನ್ನೂ ಕೈಬಿಡಬೇಕು ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಬಸ್ರೂರು ಮಹತೋಬಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಬಿ.ಅಪ್ಪಣ್ಣ ಹೆಗ್ಡೆ ಅವರು, ತಂತ್ರಜ್ಞಾನದ ವ್ಯತಿರಿಕ್ತ ಪ್ರಭಾವಗಳು ತಂದೆ-ತಾಯಿ, ಕುಟುಂಬದ ಅಮೂಲ್ಯ ಸಂಬಂಧಗಳನ್ನೆ ಕಸಿಯುತ್ತಿದೆ. ಎಳೆವೆಯಲ್ಲಿಯೇ ಮಕ್ಕಳಿಗೆ ಸಂಸ್ಕೃತಿಯ ಬಗ್ಗೆ ತಿಳಿಸಿ, ಸಂಸ್ಕಾರ ಕಲಿಸಬೇಕು. ಪುರಾಣದ ಕಥೆಗಳನ್ನು ಸಂಪ್ರದಾಯ ಹಾಗೂ ಸೌಜನ್ಯದ ನಡೆಗಳನ್ನು ತಿಳಿಸುತ್ತದೆ. ದೇವಸ್ಥಾನಗಳು ನಮ್ಮ ಸಂಸ್ಕಾರ ಮತ್ತು ಸಂಸ್ಕೃತಿಯನ್ನು ಉಳಿಸುವಲ್ಲಿ ಮಹತ್ತರ ಪಾತ್ರವಹಿಸುವುದರಿಂದ, ನಾವು ದೇವಸ್ಥಾನಕ್ಕೆ ಹೋಗುವ ಅಭ್ಯಾಸ ರೂಢಿಸಿಕೊಂಡು ಮನಃಶಾಂತಿ ಪಡೆದುಕೊಳ್ಳಬೇಕು ಎಂದರು.
ಮೈಲಾರೇಶ್ವರ ದೇವಸ್ಥಾನದ ವಸ್ಥಾಪನಾ ಸಮಿತಿ ಅಧ್ಯಕ್ಷ ಕೆ. ರಮೇಶ್ ಬಿಲ್ಲವ, ಕುಂಭಾಸಿ ಚಂಡಿಕಾ ದುರ್ಗಾ ಪರಮೇಶ್ವರಿ ದೇವಸ್ಥಾನದ ಆಡಳಿತ ಧರ್ಮದರ್ಶಿ ದೇವರಾಯ ಎಂ ಶೇರುಗಾರ್, ರಕ್ಷಾ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಸುರೇಶ್ ಬೆಟ್ಟಿನ್, ಉದ್ಯಮಿ ಎನ್.ವಿ.ದಿನೇಶ್ ನೇರಂಬಳ್ಳಿ, ಮುಂಬೈ ರಾಮರಾಜ ಕ್ಷತ್ರೀಯ ಸಂಘಟನೆಯ ಅಧ್ಯಕ್ಷ ಗಣಪತಿ ಬೆತ್ತಯ್ಯ ಬ್ರಹ್ಮಕಲಶೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಸೂರ್ಯಕಾಂತ್, ಕಾರ್ಯದರ್ಶಿಗಳಾದ ಸಿ.ಎಚ್.ಗಣೇಶ್, ಕೆ.ಪಿ.ಅರುಣ್, ಕೋಶಾಧಿಕಾರಿ ನಾಗರಾಜ್ ಅನುಪಮ್ ಇದ್ದರು.
ಅಷ್ಟಬಂಧ – ಬ್ರಹ್ಮಕಲಶೋತ್ಸವಕ್ಕೆ ನೆರವು ನೀಡಿದವರನ್ನು ಗೌರವಿಸಲಾಯಿತು. ಸ್ವಾಮೀಜಿಯವರಿಂದ ಫಲ-ಮಂತ್ರಾಕ್ಷತೆ ವಿತರಣೆ ನಡೆಯಿತು.
ಮೈಲಾರೇಶ್ವರ ದೇವಸ್ಥಾನದ ಅಷ್ಟಬಂಧ-ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಅಶೋಕ್ ಬೆಟ್ಟಿನ್ ಸ್ವಾಗತಿಸಿದರು. ಸಾಂಸ್ಕೃತಿಕ ಕಾರ್ಯದರ್ಶಿ, ಡಿ.ಸತೀಶ್ ಪ್ರಾಸ್ತಾವಿಕವಾಗಿ ಮಾತನಾಡಿದರು, ಸೂರ್ಯಕಾಂತ್ ವಂದಿಸಿದರು, ರಾಜೇಶ್ ಕೆ.ಸಿ ಹಾಗೂ ಪೂರ್ಣಿಮಾ ಆಚಾರ್ಯ ನಿರೂಪಿಸಿದರು.
ಸಭಾ ಕಾರ್ಯಕ್ರಮದ ಬಳಿಕ ಪುತ್ತೂರು ಜಗದೀಶ್ ಆಚಾರ್ಯ ಮತ್ತು ಬಳಗದವರಿಂದ ಭಕ್ತಿ ಗಾಯನ ನಡೆಯಿತು.
Comments are closed.