ಕರಾವಳಿ

ಅರಣ್ಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳಿಗೆ ಬೆಂಕಿ ಅವಘಡ ನಿರ್ವಹಣೆ ಬಗ್ಗೆ ಮಾಹಿತಿ, ಪ್ರಾತ್ಯಕ್ಷಿಕೆ

Pinterest LinkedIn Tumblr

ಕುಂದಾಪುರ: ಬೇಸಿಗೆಯಲ್ಲಿ ಕಾಡ್ಗಿಚ್ಚು ಮೊದಲಾದ ಬೆಂಕಿ ಅವಘಢಗಳು ಸಂಭವಿಸುತ್ತಿದ್ದು ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಬೆಂಕಿ ನಂದಿಸುವ ಕಾರ್‍ಯದ ಜತೆಗೆ ತಮ್ಮ ಸುರಕ್ಷತೆಗೂ ಆದ್ಯತೆ ಕೊಡಬೇಕು. ಈ ಸಮಯದಲ್ಲಿ ಅಜಾಗರೂಕತೆ ಅಥವಾ ನಿರ್ಲಕ್ಷ್ಯ ವಹಿಸಬಾರದು. ಆಧುನಿಕ ತಂತ್ರಜ್ಞಾನಗಳ ಬಳಕೆಯಿಂದ ಬೆಂಕಿ ಹತೋಟಿಗೆ ತರುವ ಮಾರ್ಗೋಪಾಯಗಳನ್ನು ಅರಿಯಬೇಕಿದೆ. ಇಂತಹ ತರಬೇತಿ, ಪ್ರಾತ್ಯಕ್ಷಿಕೆಗಳ ಮೂಲಕವಾಗಿ ಸಂಭವ್ಯ ಪರಿಸ್ಥಿತಿಯನ್ನು ಎದುರಿಸಲು ಸಹಕಾರಿಯಾಗಬಲ್ಲದು ಎಂದು ಕುಂದಾಪುರದ ಉಪ ಅರಣ್ಯ ಸಂರಕ್ಷಣಾಧಿಕಾರಿ ಉದಯ ಎಂ. ನಾಯಕ್ ಹೇಳಿದರು.

ಅವರು ಅರಣ್ಯ ಇಲಾಖೆಯ ಮಂಗಳೂರು ವೃತ್ತ, ಕುಂದಾಪುರ ಅರಣ್ಯ ವಿಭಾಗ ಹಾಗೂ ಉಪ ವಿಭಾಗದ ಸಂಯುಕ್ತ ಆಶ್ರಯದಲ್ಲಿ ಕುಂದಾಪುರ ವಿಭಾಗದ ಉಪ ಅರಣ್ಯಾಧಿಕಾರಿಗಳ ಕಚೇರಿಯಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು, ಸಿಬಂದಿಗೆ ಫೆ.27 ಸೋಮವಾರ ಆಯೋಜಿಸಿದ ಬೆಂಕಿ ಅವಘಢ ನಿರ್ವಹಣೆ ಕುರಿತು ತರಬೇತಿ ಹಾಗೂ ಪ್ರಾತ್ಯಕ್ಷಿಕೆ ಕಾರ್‍ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಉಡುಪಿ ವಲಯದ ಅರಣ್ಯಾಧಿಕಾರಿ ಸುಬ್ರಹ್ಮಣ್ಯ ಆಚಾರ್ ಮಾತನಾಡಿ, ಅರಣ್ಯ ಇಲಾಖೆಯ ಕೆಲಸ ಸವಾಲಿನದ್ದಾಗಿದೆ. ಅದರಲ್ಲೂ ಕಾಡಿನಲ್ಲಿ ಬೆಂಕಿ ಅವಘಢದಂತಹ ಘಟನೆಗಳು ಸಂಭವಿಸಿದಾಗ ಅಧಿಕಾರಿಗಳು ಹಾಗೂ ಸಿಬಂದಿ ಸ್ವಯಂ ರಕ್ಷಣೆ, ಸುರಕ್ಷತೆಗೆ ಆದ್ಯತೆ ಕೊಡಬೇಕು. ಅರಣ್ಯ ಉಳಿಸುವುದು ನಮ್ಮ ಆದ್ಯತೆಯಾಗಿದ್ದರೂ, ಜೀವ ರಕ್ಷಣೆಯೂ ಮುಖ್ಯ ಎಂದರು.

ಕುಂದಾಪುರ ವಿಭಾಗದ ಉಪ ಅರಣ್ಯಾಧಿಕಾರಿಗಳ ಕಚೇರಿ ವ್ಯವಸ್ಥಾಪಕ ಉದಯ ಕುಮಾರ್ ಟಿ. ಉದ್ಘಾಟಿಸಿದರು.

ಕುಂದಾಪುರ ಅಗ್ನಿ ಶಾಮಕ ದಳದ ಠಾಣಾಧಿಕಾರಿ ಬಾಬು ಶೆಟ್ಟಿ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡು, ಬೆಂಕಿ ಅವಘಢದಂತಹ ಸಂದರ್ಭದಲ್ಲಿ ಕೈಗೊಳ್ಳಬೇಕಾದ ಕಾರ್‍ಯಾಚರಣೆ, ಅನುಸರಿಸಬೇಕಾದ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಅನ್ನುವುದರ ಬಗ್ಗೆ ಮೂಲಕ ಮಾಹಿತಿ ನೀಡಿದರು. ಆರೋಗ್ಯ ಇಲಾಖೆಯ ಅನ್ನಪೂರ್ಣ ಹಾಗೂ ಸಿಬಂದಿಗಳು ಬೆಂಕಿ ಅವಘಡದ ಸಂದರ್ಭ ಕೈಗೊಳ್ಳುವ ತುರ್ತುಚಿಕಿತ್ಸೆ ಬಗ್ಗೆ ಮಾಹಿತಿ ನೀಡಿದರು. ತರಬೇತಿ ಬಳಿಕ ಕೋಣಿಯ ಅಗ್ನಿ ಶಾಮಕ ಠಾಣೆಯಲ್ಲಿ ಬಾಬು ಶೆಟ್ಟಿಯವರ ನೇತೃತ್ವದಲ್ಲಿ ಅಗ್ನಿಶಾಮಕ ಸಿಬ್ಬಂದಿಗಳು ಬೆಂಕಿ ನಂದಿಸುವ ಕಾರ್ಯಾಚರಣೆ ಬಗ್ಗೆ ಪ್ರಾತ್ಯಕ್ಷಿಕೆ ನೀಡಿದರು.

ಸಕಲೇಶಪುರದಲ್ಲಿ ಕಾಡಿನ ಬೆಂಕಿ ನಂದಿಸುವ ಕಾರ್‍ಯಾಚರಣೆ ವೇಳೆ ದುರದೃಷ್ಟವಶಾತ್ ಸಾವನ್ನಪ್ಪಿದ ಅರಣ್ಯ ಇಲಾಖೆಯ ಎಸ್.ಕೆ. ಸುಂದರೇಶ್ ಅವರಿಗೆ ಪುಷ್ಪ ನಮನದ ಮೂಲಕ ಗೌರವ ಸಲ್ಲಿಸಲಾಯಿತು.

ಕುಂದಾಪುರ ವಲಯ ಅರಣ್ಯಾಧಿಕಾರಿ ಕಿರಣ್ ಬಾಬು, ಶಂಕರನಾರಾಯಣ ವಲಯ ಅರಣ್ಯಾಧಿಕಾರಿ ಸಂದೇಶ್ ಐಸಿಟಿ ವಲಯ ಅರಣ್ಯಾಧಿಕಾರಿ ರವೀಂದ್ರ ಆಚಾರ್, ಅರಣ್ಯ ಇಲಾಖೆಯ ಅಧಿಕಾರಿಗಳು, ಸಿಬಂದಿ, ಅರಣ್ಯ ರಕ್ಷಕರು, ಗ್ರಾಮ ಅರಣ್ಯ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.

ಉಪ ವಲಯ ಅರಣ್ಯಾಧಿಕಾರಿ ದಿಲೀಪ್ ಸ್ವಾಗತಿಸಿ, ಕಾರ್‍ಯಕ್ರಮ ನಿರೂಪಿಸಿದರು. ಅರಣ್ಯ ಪಾಲಕ ಕೇಶವ ಪೂಜಾರಿ ಪರಿಚಯಿಸಿದರು.

ಬಿಸಿಲು ಕಾಲದಲ್ಲಿ ಕಾಡ್ಗಿಚ್ಚು ಸಮಸ್ಯೆಗಳು ಜಾಸ್ತಿಯಾಗಿದ್ದು ಕಾಡನ್ನು, ಜೀವ ಸಂಕುಲಗಳನ್ನು ಉಳಿಸುವ ಕೆಲಸ ಮಾಡುವಾಗ ಸಿಬ್ಬಂದಿಗಳು ಅಗತ್ಯ ಮಾಹಿತಿ ಹೊಂದಿರಬೇಕು. ಈ ನಿಟ್ಟಿನಲ್ಲಿ ಪ್ರಾತ್ಯಕ್ಷಿಕೆ ಮತ್ತು ಕಾರ್ಯಾಗಾರದ ಮೂಲಕ ಅಧಿಕಾರಿ, ಸಿಬ್ಬಂದಿಗಳಿಗೆ ಮಾಹಿತಿ ನೀಡಿ ಸೂಕ್ಷ್ಮತೆ ಬಗ್ಗೆ ಅರಿವು ಮೂಡಿಸಲಾಗಿದೆ.
– ಕಿರಣ್ ಬಾಬು, ಕುಂದಾಪುರ ವಲಯ ಅರಣ್ಯಾಧಿಕಾರಿ

Comments are closed.