ಬೆಂಗಳೂರು: ಇವತ್ತಿನಿಂದ ನನ್ನ ಬೆಂಬಲ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರಕ್ಕೆ, ಮಂಡ್ಯ ಜಿಲ್ಲೆಗೆ ಈಗ ಬದಲಾವಣೆಯ ಅಗತ್ಯವಿದೆ. ಕಳೆದ ನಾಲ್ಕು ವರ್ಷಗಳಲ್ಲಿ ಕೇಂದ್ರದಿಂದ ಮತ್ತು ರಾಜ್ಯದಲ್ಲಿ ಬಿಜೆಪಿಯಿಂದ ನನ್ನ ಕ್ಷೇತ್ರದ ಕೆಲಸ ಕಾರ್ಯಗಳಿಗೆ ಸಂಪೂರ್ಣ ಸಹಕಾರ ಸಿಕ್ಕಿದೆ. ಹೀಗಾಗಿ ಇಂದು ರಾಜಕೀಯದಲ್ಲಿ ಈ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದೇನೆ ಎಂದು ಮಂಡ್ಯ ಕ್ಷೇತ್ರದ ಸಂಸದೆ ಸುಮಲತಾ ಅಂಬರೀಷ್ ಪ್ರಕಟಿಸಿದ್ದಾರೆ.
ಶುಕ್ರವಾರ ಮಂಡ್ಯದ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸ್ವತಂತ್ರ ಸಂಸದೆಯಾಗಿ ಬೇರೆ ಪಕ್ಷಕ್ಕೆ ಸೇರಲು ಸಂಸದೀಯ ಕಾನೂನು ತೊಡಕುಗಳಿವೆ. ಚುನಾವಣೆಯಲ್ಲಿ ಗೆದ್ದ ಆರು ತಿಂಗಳೊಳಗೆ ಸೇರಬೇಕು. ಇಲ್ಲದಿದ್ದರೆ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಹೀಗಾಗಿ ಬಿಜೆಪಿಗೆ ಬೆಂಬಲ ನೀಡುತ್ತೇನೆ ಹೊರತು ಆ ಪಕ್ಷಕ್ಕೆ ಸೇರಲ್ಲ ಎಂದರು.
ನಾನು ನನ್ನ ಪತಿ ಅಂಬರೀಷ್ ಹೆಸರು ಹಾಳುಮಾಡುವುದಿಲ್ಲ, ಸ್ವಾಭಿಮಾನಿಯಾಗಿಯೇ ಬದುಕುತ್ತೇನೆ. ಸ್ವಾಭಿಮಾನ ಎಲ್ಲಿ ಹೋಯಿತು ಎಂದು ಪ್ರಶ್ನಿಸುತ್ತಾರೆ, ಬೆಂಗಳೂರಿನಲ್ಲಿ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ಕೇಳುತ್ತೇನೆ ಎಂದೆಲ್ಲ ಬರುತ್ತಿದೆ. ನಾನು ಸಾಯುವವರೆಗೂ ಮಂಡ್ಯ ಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
Comments are closed.