ಕುಂದಾಪುರ: ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ತೆಕ್ಕಟ್ಟೆ ಗ್ರಾಮಪಂಚಾಯತ್ ವ್ಯಾಪ್ತಿಯ ಮಾಲಾಡಿ ಎಂಬಲ್ಲಿನ ಶ್ರೀ ನಂದಿಕೇಶ್ವರ ದೇವಸ್ಥಾನ ಹಾಗೂ ಅಂಗನವಾಡಿ, ಶಾಲೆ ಪಕ್ಕದ ತೋಪಿನಲ್ಲಿ ಅರಣ್ಯ ಇಲಾಖೆಯಿಟ್ಟ ಬೋನಿನಲ್ಲಿ ಗಂಡು ಚಿರತೆ ಶುಕ್ರವಾರ ಬೆಳಿಗ್ಗೆ ಸೆರೆಯಾಗಿದ್ದು ಅರಣ್ಯಾಧಿಕಾರಿಗಳು ಭೇಟಿ ನೀಡಿದ್ದಾರೆ. ಕಳೆದ 4 ವರ್ಷದಲ್ಲಿ ಈ ತೋಪಿನಲ್ಲಿಟ್ಟ ಬೋನಿಗೆ ಬಿದ್ದ 7 ನೇ ಚಿರತೆ ಇದಾಗಿದೆ.
ತೆಕ್ಕಟ್ಟೆ ಸಮೀಪದ ಮಾಲಾಡಿಯ ತೋಪಿನಿಂದ ಮುಂದೆ ಸಾಗಿದಾಗ ಸಿಗುವ ತೆಕ್ಕಟ್ಟೆ ಗ್ರಾ.ಪಂ ಅಧ್ಯಕ್ಷೆ ಮಮತಾ ದೇವಾಡಿಗರ ಪತಿ ಸುರೇಶ್ ದೇವಾಡಿಗರ ನಿವಾಸದ ಬಳಿ ಆಗ್ಗಾಗೆ ಚಿರತೆ ಪ್ರತ್ಯಕ್ಷವಾಗುತ್ತಿದ್ದು ಸಮೀಪದ ಶಾಲೆಗೆ ಬರುವ ವಿದ್ಯಾರ್ಥಿಗಳು ಕೂಡ ಚಿರತೆ ಕಾಟದಿಂದ ಭಯಭೀತರಾಗಿದ್ದರು. ನಿರಂತರ ಈ ಭಾಗದಲ್ಲಿ ಚಿರತೆ ಕಾಟವಿದ್ದರಿಂದ ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದು ಅರಣ್ಯ ಇಲಾಖೆ ಬೋನ್ ಇಟ್ಟು ಚಿರತೆ ಹಿಡಿಯುವ ಕಾರ್ಯಾಚರಣೆ ನಡೆಸಲು ಮುಂದಾಗಿತ್ತು. ಒಂದೂವರೆ ತಿಂಗಳ ಹಿಂದೆ ಬೋನು ಇಡಲಾಗಿದ್ದು ಅಂದಾಜು 4-5 ವರ್ಷ ಪ್ರಾಯದ ಗಂಡು ಚಿರತೆ ಸೆರೆಯಾಗಿದೆ.
ಕುಂದಾಪುರ ವಲಯ ಅರಣ್ಯಾಧಿಕಾರಿ ಕಿರಣ್ ಬಾಬು, ಉಪವಲಯ ಅರಣ್ಯಾಧಿಕಾರಿ ಉದಯ್, ಸ್ಥಳೀಯ ಪ್ರಮುಖರಾದ ಮಲ್ಯಾಡಿ ಶಿವರಾಮ ಶೆಟ್ಟಿ, ಸುರೇಶ್ ದೇವಾಡಿಗ, ಸತೀಶ್ ದೇವಾಡಿಗ, ತೆಕ್ಕಟ್ಟೆ ಗ್ರಾ.ಪಂ ಅಧ್ಯಕ್ಷೆ ಮಮತಾ ದೇವಾಡಿಗ, ಲಕ್ಷ್ಮಣ್ ಪೂಜಾರಿ, ಶರತ್ ಮೊದಲಾದವರು ಭೇಟಿ ನೀಡಿದ್ದಾರೆ.
4-5 ವರ್ಷದ ಅಂತರದಲ್ಲಿ 7 ಚಿರತೆ ಸೆರೆ…
ಮಾಲಾಡಿ ತೋಪಿನಲ್ಲಿ ಆಗಾಗ್ಗೆ ಕಾಣಿಸಿಕೊಳ್ಳುತ್ತಿದ್ದ ಚಿರತೆಯು ನಾಯಿ, ಜಾನುವಾರು ಸೇರಿದಂತೆ ಸಾಕುಪ್ರಾಣಿಗಳನ್ನು ಹೊತ್ತೊಯ್ದಿದೆ. ಅಲ್ಲದೆ ಹಾಡುಹಗಲೇ ಕಾಣಿಸಿಕೊಂಡು ಜನರಲ್ಲಿ ಭೀತಿ ಸೃಷ್ಟಿಸಿದೆ. ಈ ತೋಟದಲ್ಲಿ ಮೊದಲಿಗೆ 2018 ಆಗಸ್ಟ್ ತಿಂಗಳಲ್ಲಿ ಚಿರತೆಯೊಂದು ಬೋನಿಗೆ ಬಿದ್ದಿತ್ತು. ಬಳಿಕ 2019 ಅ.6, ಡಿ.12, 2019, ಡಿ.24 ,2019 ರಲ್ಲಿ ಹಾಗೂ 2022 ರ ಎಪ್ರಿಲ್ ತಿಂಗಳಿನಲ್ಲಿ, 2022 ಅ.2 ರಂದು ಹಾಗೂ 2023 ಮಾ.10ರಂದು ಚಿರತೆ ಬೋನಿಗೆ ಬಿದ್ದಿದೆ.
ವಲಯ ಅರಣ್ಯಾಧಿಕಾರಿ ಸ್ಪಂದನೆ..
ನಿರಂತರವಾಗಿ ಚಿರತೆ ಉಪಟಳವಿರುವ ಮಾಲಾಡಿ ತೋಟದ ಬಳಿಯೇ ಸರಕಾರಿ ಶಾಲೆ, ಅಂಗನವಾಡಿ, ದೇವಸ್ಥಾನ ಹಾಗೂ ವಸತಿ ಪ್ರದೇಶವಿದ್ದು 50ಕ್ಕೂ ಅಧಿಕ ಮನೆಗಳಿದೆ. ಕಳೆದೆರಡು ದಿನದ ಹಿಂದೆಯೂ ಸತೀಶ್ ದೇವಾಡಿಗ ಅವರ ಮನೆಯಂಗಳಕ್ಕೆ ಚಿರತೆ ಬಂದಿತ್ತು. ಈ ಬಗ್ಗೆ ಆತಂಕವನ್ನು ವಲಯ ಅರಣ್ಯಾಧಿಕಾರಿಗಳ ಬಳಿ ತಿಳಿಸಿದ್ದು ರಾತ್ರಿಯೇ ಅರಣ್ಯಾಧಿಕಾರಿಗಳು, ಸಿಬ್ಬಂದಿಗಳನ್ನು ಕಳಿಸಿ ಸ್ಥಳೀಯರಿಗೆ ಧೈರ್ಯ ತುಂಬುವ ಕೆಲಸ ಮಾಡಿದ್ದರು. ಶುಕ್ರವಾರ ಬೆಳಿಗ್ಗೆ ಚಿರತೆ ಬೋನಿಗೆ ಬಿದ್ದಿದ್ದು ಸ್ಥಳೀಯರು ಮಾಹಿತಿ ನೀಡುತ್ತಲೇ ಮುಂಜಾನೆ ಸೈಕ್ಲಿಂಗ್ ತೆರಳಿದ್ದ ಆರ್.ಎಫ್.ಒ ಕಿರಣ್ ಬಾಬು ಸೈಕಲ್ ನಲ್ಲೆ ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿ ಚಿರತೆ ರವಾನಿಸುವಲ್ಲಿ ಸಿಬ್ಬಂದಿಗಳೊಂದಿಗೆ ಕಾರ್ಯಪ್ರವೃತ್ತರಾದರು.
Comments are closed.