ಉಡುಪಿ: ಹಲವಾರು ವರ್ಷಗಳಿಂದ ತಪ್ಪಿಸಿಕೊಂಡು ತಲೆಮರೆಸಿಕೊಂಡಿದ್ದ 24 ಅಪರಾಧಿಗಳನ್ನು ಬಂಧಿಸುವಲ್ಲಿ ಉಡುಪಿ ಜಿಲ್ಲಾ ಪೊಲೀಸರ ವಿಶೇಷ ತಂಡದವರು ಯಶಸ್ವಿಯಾಗಿದ್ದಾರೆ.
24 ಆರೋಪಿಗಳ ಪೈಕಿ ಒಬ್ಬನನ್ನು ಭಾರತ-ನೇಪಾಳ ಗಡಿಯಲ್ಲಿ, ಮೂವರನ್ನು ಕೇರಳದಿಂದ, ನಾಲ್ವರನ್ನು ಹೊರ ಜಿಲ್ಲೆಗಳಿಂದ ಮತ್ತು ಉಳಿದವರು ಉಡುಪಿಯಲ್ಲೇ ಸಿಕ್ಕಿಬಿದ್ದಿದ್ದಾರೆ.
ಬಂಧಿತ ಆರೋಪಿಗಳು ಲೂಟಿ, ಸರಕಾರಿ ನೌಕರರ ಮೇಲೆ ಹಲ್ಲೆ, ಕಳ್ಳತನ, ಅಪಹರಣ, ಲೈಂಗಿಕ ದೌರ್ಜನ್ಯ, ಭೀಕರ ರಸ್ತೆ ಅಪಘಾತಗಳು ಮತ್ತು ಚೆಕ್ ಬೌನ್ಸ್ ಪ್ರಕರಣಗಳಲ್ಲಿ ಬೇಕಾಗಿದ್ದವರು.
ಲೂಟಿ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿದ್ದ ಪ್ರಕಾಶ್ ಏಳು ವರ್ಷಗಳ ಕಾಲ ತಲೆಮರೆಸಿಕೊಂಡ ಬಳಿಕ ಬಂಧಿತನಾಗಿದ್ದಾನೆ. ಚೆಕ್ ಬೌನ್ಸ್ ಪ್ರಕರಣದ ಆರೋಪಿ ಒಲಿವರ್ ಗ್ಲಾಡ್ಸನ್ ವಿಲ್ಸನ್ ಐದು ವರ್ಷಗಳ ಕಾಲ ತಲೆಮರೆಸಿಕೊಂಡಿದ್ದ. ಹಲ್ಲೆ ಪ್ರಕರಣದಲ್ಲಿ ಬೇಕಾಗಿದ್ದ ರಾಜೀವ ಶೆಟ್ಟಿ ಐದು ವರ್ಷಗಳ ನಂತರ ಬಂಧಿತನಾಗಿದ್ದಾನೆ, ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದ ಗುರುಪ್ರಸಾದ್ ನಾಲ್ಕು ವರ್ಷಗಳ ನಂತರ ಸಿಕ್ಕಿ ಬಿದ್ದಿದ್ದಾನೆ.
ಬಲವಂತದ ಅಪಹರಣ ಮತ್ತು ಸುಲಿಗೆ ಪ್ರಕರಣದಲ್ಲಿ ಆರೋಪಿಯಾಗಿದ್ದ ಉಮರ್ ಹತ್ತು ವರ್ಷಗಳ ಕಾಲ ಕಾನೂನಿನ ಕೈಯಿಂದ ತಪ್ಪಿಸಿಕೊಂಡು ಸಿಕ್ಕಿಬಿದ್ದಿದ್ದಾನೆ. ಕಳ್ಳತನ ಪ್ರಕರಣದಲ್ಲಿ ಬೇಕಾಗಿದ್ದ ಸುದರ್ಶನ್ ಮೂರು ವರ್ಷಗಳಿಂದ ತಲೆಮರೆಸಿಕೊಂಡಿದ್ದ.
ಪೋಕ್ಸೋ ಅತ್ಯಾಚಾರ ಪ್ರಕರಣದ ಆರೋಪಿ ಜೀತೇಂದ್ರ ಶಾರ್ಕಿಯನ್ನು ಎರಡು ವರ್ಷಗಳ ನಂತರ ಭಾರತ-ನೇಪಾಳ ಗಡಿ ಪ್ರದೇಶದಿಂದ ಬಂಧಿಸಲಾಗಿದೆ. ಭೀಕರ ರಸ್ತೆ ಅಪಘಾತದಲ್ಲಿ ಭಾಗಿಯಾದ ಬಾಬು, ಕೃಷ್ಣನ್ ಕುಟ್ಟಿ ಮತ್ತು ಸುನೀಲ್ ಕುಮಾರ್ ಕೇರಳ ಮತ್ತು ಕುಂದಾಪುರದಲ್ಲಿ ಸಿಕ್ಕಿಬಿದ್ದಿದ್ದಾರೆ.
Comments are closed.