ಕರಾವಳಿ

ಕುಂದಾಪುರದಲ್ಲಿ ಕಾಂಗ್ರೆಸ್ ಮಹಿಳಾ ಸಮಾವೇಶ | ಓಟ್ ಬ್ಯಾಂಕಿಗಾಗಿ ಧರ್ಮ, ಜಾತಿ ವಿಚಾರದಲ್ಲಿ ಬಿಜೆಪಿಯಿಂದ ರಾಜಕೀಯ: ಪ್ರತಿಭಾ ಕುಳಾಯಿ

Pinterest LinkedIn Tumblr

ಕುಂದಾಪುರ: ಬಿಜೆಪಿ ಮತ ಬ್ಯಾಂಕಿಗಾಗಿ ಧರ್ಮ, ಜಾತಿ ಆಧಾರದಲ್ಲಿ ರಾಜಕೀಯ ಮಾಡಿ ಹಿಂದುತ್ವದ ಹೆಸರಿನಲ್ಲಿ ಹಿಜಾಬ್, ಹಲಾಲ್ ಎಂದು ಆತಂಕ ಸೃಷ್ಟಿಸಿ ಮತಪಡೆಯುತ್ತಿದೆ ಎಂದು ಕಾಂಗ್ರೆಸ್ ನಾಯಕಿ, ಮಾಜಿ ಕಾರ್ಪೋರೇಟರ್ ಪ್ರತಿಭಾ ಕುಳಾಯಿ ಆರೋಪಿಸಿದರು.

ಮಹಿಳಾ ಬ್ಲಾಕ್ ಕಾಂಗ್ರೆಸ್ ಸಮಿತಿ ಕುಂದಾಪುರದ ವತಿಯಿಂದ ರವಿವಾರ ಕೋಟೇಶ್ವರ ಸಮೀಪದ ಅಂಕದಕಟ್ಟೆ ಸಹನಾ ಕನ್ವೆನ್ಷನ್ ಸೆಂಟರ್‌ನಲ್ಲಿ ನಡೆದ ಮಹಿಳಾ ಸಮಾವೇಶದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಓಟ್ ಬ್ಯಾಂಕಿಗಾಗಿ ನಡೆಯುತ್ತಿರುವ ಕೋಮು ಗಲಭೆಯಲ್ಲಿ ನಾಯಕರ ಮಕ್ಕಳಿಗೆ ಸಮಸ್ಯೆಯಿಲ್ಲ. ಬದಲಾಗಿ ಬಡವರ ಮನೆ ಮಕ್ಕಳು ಬೀದಿಯಲ್ಲಿ ಸಾಯುತ್ತಿದ್ದಾರೆ. ಸಾಯುವ ಮನಸ್ಸಿದ್ದರೆ ಬಿಜೆಪಿ ಪಕ್ಷಕ್ಕೆ ಮತ ಹಾಕಿ ಎಂಬ ಕಾಲ ಬಂದಿದೆ. ಬಿಜೆಪಿ ಶವ ರಾಜಕೀಯ ಮಾಡುತ್ತಾ, ಜನರ ಭಾವನೆಗಳೊಂದಿಗೆ ಆಟವಾಡುತ್ತಿದೆ. ಪ್ರತಿ ಚುನಾವಣೆಗಳು ಬಂದಾಗ ಕೊಲೆಗಳು‌ ನಡೆಯುತ್ತದೆ. ಬೇಟಿ ಬಚಾವೋ, ಬೇಟಿ ಪಡಾವೋ ಕೇವಲ ಹೇಳಿಕೆಗೆ ಸೀಮಿತವಾಗಿದ್ದು ಮಹಿಳೆಯರಿಗೆ ರಕ್ಷಣೆ ಇಲ್ಲವಾಗಿದೆ. ಡಬ್ಬಲ್ ಇಂಜಿನ್ ಸರಕಾರದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂದವರು ಆರೋಪಿಸಿದರು.

ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೀತಾ ವಾಗ್ಳೆ ಮಹಿಳಾ ಸಮಾವೇಶ ಉದ್ಘಾಟಿಸಿ ಮಾತನಾಡಿ, ಮಹಿಳಾ ಸಂಘಟನೆ ಬಲವಾದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಲು ಸಹಕಾರಿಯಾಗುತ್ತದೆ. ಕಾಂಗ್ರೆಸ್ ಎಂದಿಗೂ ಬಡವರ ಪರವಾಗಿರುತ್ತದೆ ಎನ್ನುವುದಕ್ಕೆ ಸಿದ್ದರಾಮಯ್ಯ ಅವರ ಸರಕಾರದಲ್ಲಿ ನೀಡಿದ ಭಾಗ್ಯಗಳು ಸಾಕ್ಷಿಯಾಗಿದೆ. ಬಿಜೆಪಿಯು ಪಕ್ಷದ ಹೆಸರಿನಲ್ಲಿ ಮತ ಕೇಳದೆ ಮೋದಿ ಹೆಸರಿನಲ್ಲಿ ಮತ ಪಡೆಯುತ್ತಿದೆ ಎಂದವರು ಲೇವಡಿ ಮಾಡಿದರು.

ಮಹಿಳಾ ಕಾಂಗ್ರೆಸ್ ಜಿಲ್ಲಾ ಪ್ರತಿನಿಧಿ ಜ್ಯೋತಿ ಪುತ್ರನ್ ಪ್ರಸ್ತಾವನೆಗೈದರು. ಕೆಪಿಸಿಸಿ ವಕ್ತಾರರಾದ ವೆರೋನಿಕಾ ಕರ್ನೆಲಿಯೋ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎ ಗಫೂರ್, ಕೋಟ ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ರೇಖಾ ಪೂಜಾರಿ, ಕುಂದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ ಕಾನ್ಮಕ್ಕಿ, ಕೋಟ ಬ್ಲಾಕ್ ಅಧ್ಯಕ್ಷ ಶಂಕರ್ ಕುಂದರ್, ಜಿಲ್ಲಾ ಕಾಂಗ್ರೆಸ್ ವಕ್ತಾರ ವಿಕಾಸ ಹೆಗ್ಡೆ, ಕುಂದಾಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳಾದ ದಿನೇಶ್ ಹೆಗ್ಡೆ ಮೊಳಹಳ್ಳಿ, ಶ್ಯಾಮಲಾ ಭಂಡಾರಿ, ಕಿಶನ್ ಹೆಗ್ಡೆ ಕೊಳ್ಕೆಬೈಲು, ಅಶೋಕ್‌ ಪೂಜಾರಿ ಬೀಜಾಡಿ, ಪಕ್ಷದ ಮುಖಂಡರಾದ ಮಲ್ಯಾಡಿ ಶಿವರಾಮ ಶೆಟ್ಟಿ, ಸತೀಶ್ ಕಿಣಿ ಬೆಳ್ವೆ, ಕೆದೂರು ಸದಾನಂದ ಶೆಟ್ಟಿ, ಕೃಷ್ಣದೇವ ಕಾರಂತ, ಪುರಸಭೆ ಸದಸ್ಯರಾದ ಪ್ರಭಾವತಿ ಶೆಟ್ಟಿ, ಲಕ್ಷ್ಮೀಬಾಯಿ, ಶ್ರೀಧರ ಶೇರುಗಾರ, ಚಂದ್ರಶೇಖರ್ ಖಾರ್ವಿ, ಗ್ರಾ.ಪಂ‌ ಚುನಾಯಿತ ಪ್ರತಿನಿಧಿಗಳು ಇದ್ದರು.

ಕುಂದಾಪುರ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ದೇವಕಿ ಸಣ್ಣಯ್ಯ ಅಧ್ಯಕ್ಷತೆ ವಹಿಸಿದ್ದು ಸ್ವಾಗತಿಸಿದರು. ಅಕ್ಷಯ ಹೆಗ್ಡೆ ಮೊಳಹಳ್ಳಿ ನಿರೂಪಿಸಿದರು. ಆಶಾ ಕರ್ವಲ್ಲೋ ವಂದಿಸಿದರು. ಸಹಸ್ರಾರು ಸಂಖ್ಯೆಯಲ್ಲಿ ಸಮಾವೇಶದಲ್ಲಿ ಮಹಿಳೆಯರು ಪಾಲ್ಗೊಂಡರು.

ಬಿಜೆಪಿ ಅಧಿಕಾರಕ್ಕೋಸ್ಕರ ಬಡವರು, ದಲಿತರು, ಹಿಂದುಳಿದ ಸಮುದಾಯದವರ ಮನೆ ಮಕ್ಕಳನ್ನು ಬೀದಿಗಿಳಿಸಿ ಅವರ ಸಾವಿನ ಮೇಲೆ ರಾಜಕಾರಣ ಮಾಡುತ್ತಿದೆ. ಜಾತಿ-ಧರ್ಮದ ಹೆಸರಿನಲ್ಲಿ ವಿಷಬೀಜ ಬಿತ್ತುವ ಕೆಲಸ ಬಿಜೆಪಿ ಮಾಡುತ್ತಿದೆ. ಶಾಂತಿ, ಸುವ್ಯವಸ್ಥೆ, ಸಹಬಾಳ್ವೆ ಜೀವನ ನಡೆಸಲು ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಬರೆದ ಸಂವಿಧಾನದ ಆಶಯಗಳನ್ನು ಅರಿಯಬೇಕು.
– ವಿಕಾಸ್ ಹೆಗ್ಡೆ (ಜಿಲ್ಲಾ ಕಾಂಗ್ರೆಸ್ ವಕ್ತಾರ)

Comments are closed.