ಕರಾವಳಿ

ಉಡುಪಿ ಕೊಡಂಕೂರಿನಲ್ಲಿ ಮನೆ ಕಳವುಗೈದ ಆರೋಪಿಗೆ 10 ವರ್ಷ ಕಠಿಣ ಶಿಕ್ಷೆ, 10 ಸಾವಿರ ದಂಡ

Pinterest LinkedIn Tumblr

ಉಡುಪಿ: ಮನೆಗೆ ನುಗ್ಗಿ ನಗದು ಹಾಗೂ ಚಿನ್ನಾಭರಣ ಕಳವು ಮಾಡಿದ ಆರೋಪಿಗೆ ನಗರದ ಪ್ರಧಾನ ಸಿ.ಜೆ ಮತ್ತು ಸಿ.ಜೆ.ಎಮ್. ನ್ಯಾಯಾಲಯವು ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿದೆ.

2022 ಜೂನ್ 29 ರಂದು ರಾತ್ರಿ ಸುಖೇಶ್ ನಾಯ್ಕ್ ಎಂಬಾತನು ಉಡುಪಿ ತಾಲೂಕು ಪುತ್ತೂರು ಗ್ರಾಮದ ಕೊಡಂಕೂರು ಸಾಯಿಬಾಬ ನಗರದ ಅಡ್ಡ ರಸ್ತೆಯಲ್ಲಿರುವ ಸತ್ಯನಾರಾಯಣ ಹೆಗ್ಡೆ ಇವರ ಮನೆಗೆ ನುಗ್ಗಿ ಮನೆಯಲ್ಲಿದ್ದ ಚಿನ್ನಾಭರಣ, ನಗದು ಹಾಗೂ ಬೆಳ್ಳಿಯ ಪದಕಗಳನ್ನು ಕಳವು ಮಾಡಿರುವ ಹಿನ್ನೆಲೆ, ಉಡುಪಿ ನಗರ ಠಾಣೆಯ ಪೊಲೀಸ್ ನಿರೀಕ್ಷಕರು ಪ್ರಕರಣ ದಾಖಲಿಸಿಕೊಂಡು, ಆರೋಪಿಯ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣೆ ಪತ್ರ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ನಡೆದು ಆರೋಪ ಸಾಬೀತಾದ ಹಿನ್ನೆಲೆ, ನಗರದ ಪ್ರಧಾನ ಸಿ.ಜೆ ಮತ್ತು ಸಿ.ಜೆ.ಎಮ್. ನ್ಯಾಯಾಲಯದ ನ್ಯಾಯಾಧೀಶೆ ಶಕುಂತಲಾ ಅವರು ಆರೋಪಿ ಸುಖೇಶ್ ನಾಯ್ಕ್ಗೆ ಭಾ.ದಂ.ಸಂ.ಕಲಂ ಕಲಂ: 457 ರಡಿ 5 ವರ್ಷಗಳ ಕಠಿಣ ಸಜೆ ಮತ್ತು ರೂ. 5000 ದಂಡ, ಕಲಂ: 380 ರಡಿ 5 ವರ್ಷಗಳ ಕಠಿಣ ಸಜೆ ಮತ್ತು ರೂ. 5000 ದಂಡ ಸೇರಿದಂತೆ ಒಟ್ಟು 10,000 ರೂ. ದಂಡ ಹಾಗೂ 10 ವರ್ಷಗಳ ಕಠಿಣ ಕಾರಾಗೃಹ ವಾಸ ಶಿಕ್ಷೆ, ದಂಡ ಪಾವತಿಸಲು ತಪ್ಪಿದಲ್ಲಿ 1 ವರ್ಷದ ಸಾಧಾರಣಾ ಶಿಕ್ಷೆ ವಿಧಿಸಿ, ತೀರ್ಪು ನೀಡಿದ್ದಾರೆ.

ಸರ್ಕಾರದ ಪರವಾಗಿ ಹಿರಿಯ ಸಹಾಯಕ ಸರ್ಕಾರಿ ಅಭಿಯೋಜಕಿ ಜಯಂತಿ ಕೆ ವಾದ ಮಂಡಿಸಿರುತ್ತಾರೆ.

Comments are closed.