ಕರಾವಳಿ

ಕುಂದಾಪುರ ಶಾಸ್ತ್ರಿ ಪಾರ್ಕ್ ಉದ್ಘಾಟನೆ, ಮಾಜಿ ಪ್ರಧಾನಿ ಲಾಲ್‌ ಬಹದ್ದೂರ್ ಶಾಸ್ತ್ರಿ ಅವರ ನೂತನ ಪುತ್ಥಳಿ ಅನಾವರಣ

Pinterest LinkedIn Tumblr

ಕುಂದಾಪುರ: ಕುಂದಾಪುರ ನಗರದ ಪ್ರವೇಶದ್ವಾರದಲ್ಲಿ ನವೀಕೃತ ಶಾಸ್ತ್ರೀ ವೃತ್ತ ಉದ್ಘಾಟನೆ ಹಾಗೂ ಮಾಜಿ ಪ್ರಧಾನಿ ಲಾಲ್ ಬಹಾದ್ದೂರ್ ಶಾಸ್ತ್ರಿಗಳ ಕಂಚಿನ ಪ್ರತಿಮೆ ಲೋಕಾರ್ಪಣೆ ಕಾರ್ಯಕ್ರಮ ಶನಿವಾರ ಸಂಜೆ ನಡೆಯಿತು.

ಶಾಸ್ತ್ರಿಜಿ ಪ್ರತಿಮೆ ಅನಾವರಣಗೊಳಿಸಿ ಮಾತನಾಡಿದ ಕುಂದಾಪುರ ಪುರಸಭಾಧ್ಯಕ್ಷೆ ವೀಣಾ ಭಾಸ್ಕರ್ ಮೆಂಡನ್ ಅವರು, ಸಾರ್ವಜನಿಕರು, ಸಂಘ-ಸಂಸ್ಥೆಗಳು, ಪುರಸಭೆಯ ಸದಸ್ಯರ ಸಲಹೆಯಂತೆ ಈ ಸರ್ಕಲ್ ನವೀಕರಿಸಲಾಗಿದ್ದು, ಅದರೊಂದಿಗೆ ದೇಶ ಕಂಡ ಮಹಾನ್ ನಾಯಕರಲ್ಲಿ ಒಬ್ಬರಾದ ಲಾಲ್ ಬಹಾದ್ದೂರ್ ಶಾಸ್ತ್ರಿ ಅವರ ಈ ಹಿಂದೆ ಇದ್ದ ಪ್ರತಿಮೆಯನ್ನು ಬದಲಿಸಿ, ಹೊಸದಾಗಿ ನಿರ್ಮಿಸಲಾಗಿದೆ. ಈ ಹಿಂದೆ 1963ರಲ್ಲಿ ನಿರ್ಮಿಸಿದ್ದ ಸರ್ಕಲ್ ಹಾಗೂ ಪುತ್ಥಳಿಗೆ ಚಾರ್ಮಕ್ಕಿ ನಾರಾಯಣ ಶೆಟ್ಟರು ಸಹಕರಿಸಿದ್ದರು. ಈ ಬಾರಿಯೂ ಅವರ ಮನೆಯವರು ಕಂಚಿನ ಪ್ರತಿಮೆಯನ್ನು ಕೊಡುಗೆಯಾಗಿ ನೀಡಿದ್ದಾರೆ. ಇನ್ನು ಸರ್ಕಲ್ ರೂಪುಗೊಳ್ಳುವಲ್ಲಿ ಶಾಸಕರು, ಪುರಸಭೆಯ ಸದಸ್ಯರು, ಅಧಿಕಾರಿಗಳ ಸಹಕಾರ ಪ್ರಮುಖವಾದುದು ಎಂದರು.

ಪುರಸಭೆ ವಿಪಕ್ಷ ಸದಸ್ಯ ಚಂದ್ರಶೇಖರ್ ಖಾರ್ವಿ ಮಾತನಾಡಿ, ಸುಂದರ ಕುಂದಾಪುರಕ್ಕೆ ಈ ನವೀಕೃತ ಸರ್ಕಲ್ ಕಲಶಪ್ರಾಯವಿದ್ದಂತೆ. ನಾವೆಲ್ಲ ಅಂದುಕೊಂಡಂತೆಯೇ ಈ ಸರ್ಕಲ್ ರೂಪುಗೊಂಡಿದೆ ಎಂದರು.

ಪುರಸಭೆ ಹಿರಿಯ ಸದಸ್ಯ ಮೋಹನ್‌ದಾಸ್ ಶೆಣೈ ಮಾತನಾಡಿ, ಕುಂದಾಪುರಕ್ಕಿಂದು ಸೌಭಾಗ್ಯದ ದಿನ. ಈ ಸರ್ಕಲ್ ಹಾಗೂ ಪ್ರತಿಮೆ ಇಲ್ಲಿನ ಹೃದಯ ಭಾಗದ ಸೌಂದರ್ಯವನ್ನು ಹೆಚ್ಚಿಸಿದೆ. ಶಾಸ್ತ್ರಿಗಳ ನಡೆ- ನುಡಿ, ಆದರ್ಶ, ಧ್ಯೇಯ ಎಲ್ಲವೂ ನಮಗೆ ಮಾರ್ಗದರ್ಶನವಾಗಲಿ ಎಂದರು.

ಪುರಸಭೆ ಉಪಾಧ್ಯಕ್ಷ ಸಂದೀಪ್ ಖಾರ್ವಿ ಮಾತನಾಡಿದರು.

ಸನ್ಮಾನ..
ಸುಂದರ ಸರ್ಕಲ್ ರೂಪುಗೊಳ್ಳುವಲ್ಲಿ ಶ್ರಮಿಸಿದ ಪುರಸಭೆಯ ಹಿಂದಿನ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ, ಪ್ರತಿಮೆ ನಿರ್ಮಿಸಿದ ಶಿಲ್ಪಿ ಶ್ರೀತಿನ್ ಶೆಟ್ಟಿಗಾರ್ ಬಂಟ್ವಾಡಿ, ಗಾರ್ಡನ್ ನಿರ್ಮಿಸಿದ ವಿವೇಕ್ ಅವರನ್ನು ಸಮ್ಮಾನಿಸಲಾಯಿತು.

ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ವಿಜಯ ಎಸ್. ಪೂಜಾರಿ, ಪುರಸಭೆಯ ಸದಸ್ಯರು, ಮಾಜಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಅಧಿಕಾರಿಗಳು, ಸಿಬಂದಿ, ವಿವಿಧ ಪಕ್ಷಗಳ ಮುಖಂಡರು, ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.

ಪುರಸಭೆ ಮುಖ್ಯಾಧಿಕಾರಿ ಮಂಜುನಾಥ್ ಸ್ವಾಗತಿಸಿ, ಉಪನ್ಯಾಸಕ ಅಕ್ಷಯ್ ಹೆಗ್ಡೆ ಮೊಳಹಳ್ಳಿ ಕಾರ್‍ಯಕ್ರಮ ನಿರೂಪಿಸಿದರು.

 

 

Comments are closed.