ಕರಾವಳಿ

ವಿದೇಶಿ ಕರೆನ್ಸಿ ಹೆಸರಲ್ಲಿ ಅಮಾಯಕರ ವಂಚನೆ: ಆರು ಮಂದಿ ಅಂತಾರಾಜ್ಯ ವಂಚಕರ ಬಂಧಿಸಿದ ಉಡುಪಿ ಪೊಲೀಸರು

Pinterest LinkedIn Tumblr

ಉಡುಪಿ: ವಿದೇಶಿ ಕರೆನ್ಸಿ ನೀಡುವುದಾಗಿ ಹೇಳಿ ಜನರನ್ನು ವಂಚಿಸುತ್ತಿದ್ದ ಆರು ಮಂದಿ ಅಂತಾರಾಜ್ಯ ವಂಚಕರನ್ನು ಬಂಧಿಸುವಲ್ಲಿ ಉಡುಪಿ ಜಿಲ್ಲಾ ಪೊಲೀಸರ ತಂಡ ಯಶಸ್ವಿಯಾಗಿದೆ.

ಉತ್ತರ ಪ್ರದೇಶ ಮೂಲದ ದಿಲ್ಲಿ ಲಕ್ಷ್ಮೀನಗರದ ಮೊಹ್ಮದ್‌ ಪೊಲಾಶ್‌ ಖಾನ್‌ (42), ಮುಂಬಯಿ ಇಂದಿರಾನಗರದ ನಿವಾಸಿ ಮುಹಮ್ಮದ್‌ ಬಿಲಾಲ್‌ ಶೇಖ್‌ (43), ಪಶ್ಚಿಮ ಬಂಗಾಲ ಮೂಲದ ನಾರ್ಥ್ ಈಸ್ಟ್‌ ದಿಲ್ಲಿ ನಿವಾಸಿ ಮಹಮ್ಮದ್‌ ಫಿರೋಝ್ (30), ಹರಿಯಾಣ ರಾಜ್ಯದ ಫ‌ರೀದಾಬಾದ್‌ ನಿವಾಸಿ ನೂರ್‌ ಮುಹಮ್ಮದ್‌ (36) ಹಾಗೂ ಈಸ್ಟ್‌ ದಿಲ್ಲಿಯ ಮಿರಜ್‌ ಖಾನ್‌ (32), ಮುಹಮ್ಮದ್‌ ಜಹಾಂಗೀರ (60) ಬಂಧಿತರು. ಇವರಿಂದ 100 ದಿರಮ್ಸ್ ವಿದೇಶಿ ಕರೆನ್ಸಿ 32 ನೋಟುಗಳು, 19 ಮೊಬೈಲ್‌ ಫೋನ್‌, 6,29,000 ರೂ. ನಗದು, ಮೂರು ಬೈಕ್‌, 30 ಸಿಮ್‌ ಕಾರ್ಡ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಸಾವರ್ಜನಿಕರ ಬಳಿ ವಿದೇಶಿ ದಿರಮ್ಸ್ ಕರೆನ್ಸಿ ಬದಲಾವಣೆ ಮಾಡಿಕೊಡುವ ಬಗ್ಗೆ ವಿಚಾರಿಸುವ ನೆಪದಲ್ಲಿ ಪರಿಚಯಿಸಿಕೊಂಡು, ಮೊದಲಿಗೆ ಒಂದು ನೈಜ ವಿದೇಶಿ ಕರೆನ್ಸಿ ನೀಡಿ ನಂಬಿಸಿ, ಬಳಿಕ ತಮ್ಮ ಬಳಿ ಇನ್ನೂ ಇಂತಹ ನೈಜ ದಿರಮ್ಸ್ ಕರೆನ್ಸಿಗಳಿದ್ದು ಕಡಿಮೆ ಮೌಲ್ಯಕ್ಕೆ ನೀಡುವುದಾಗಿ ನಂಬಿಸಿ ತಾವು ಗುರುತುಪಡಿಸಿದ ಸ್ಥಳಗಳಿಗೆ ಹಣದೊಂದಿಗೆ ಸಾರ್ವಜನಿಕರನ್ನು ಕರೆಸಿಕೊಂಡು ಬಟ್ಟೆ ಮತ್ತು ಸೋಪು ಇರಿಸಿದ ಗಂಟು ಹಾಕಿದ ಚೀಲದಲ್ಲಿ ವಿದೇಶಿ ಕರೆನ್ಸಿ ಇರುವುದಾಗಿ ನಂಬಿಸಿ ಚೀಲವನ್ನು ನೀಡಿ ಸಾವರ್ಜನಿಕರು ಪರಿಶೀಲಿಸುವ ಮೊದಲೇ ಅವರ ಕೈಯಲ್ಲಿದ್ದ ಹಣದ ಚೀಲವನ್ನು ಸುಲಿಗೆ ಮಾಡಿ ಎಳೆದುಕೊಂಡು ಹೋಗಿದ್ದರು. ಈ ಬಗ್ಗೆ ಬ್ರಹ್ಮಾವರ ಮತ್ತು ಕೋಟ ಪೊಲೀಸ್‌ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿತ್ತು.

ಆರೋಪಿಗಳ ಪತ್ತೆ ಬಗ್ಗೆ ಎಸ್ಪಿ ಅಕ್ಷಯ್‌ ಎಂ. ಹಾಕೆ ಆದೇಶದಂತೆ ಬ್ರಹ್ಮಾವರ ವೃತ್ತ ನಿರೀಕ್ಷಕ ದಿವಾಕರ ಪಿ.ಎಂ. ನೇತೃತ್ವದಲ್ಲಿ ಬ್ರಹ್ಮಾವರ ಠಾಣಾ ಉಪನಿರೀಕ್ಷಕ ಮಹಾಂತೇಶ ಯು.ನಾಯಕ್‌ ಮತ್ತು ಕೋಟದ ಮಧು ಬಿ.ಇ. ಹಾಗೂ ಬ್ರಹ್ಮಾವರ ಠಾಣಾ ಸಿಬಂದಿ ವೆಂಕಟರಮಣ ದೇವಾಡಿಗ, ಪ್ರವೀಣ ಶೆಟ್ಟಿಗಾರ್‌, ಮಹಮದ್‌ ಅಜ್ರ, ಸಂತೋಷ ರಾಥೋಡ್‌, ಕೋಟ ಠಾಣಾ ಸಿಬಂದಿ ರವಿ ಕುಮಾರ್‌, ಎ.ಎಸ್‌.ಐ. ಮೋಹನ ಕೋತ್ವಾಲ್, ರಾಘವೇಂದ್ರ ಶೆಟ್ಟಿ, ಪ್ರಸನ್ನ, ವೃತ್ತ ಕಚೇರಿಯ ಸಿಬಂದಿ ಕೃಷ್ಣಪ್ಪ, ವಾಸು ಪೂಜಾರಿ, ಪ್ರದೀಪ ನಾಯ್ಕ್, ಕೃಷ್ಣ ಶೇರಿಗಾರ್‌ ಮತ್ತು ಜಿಲ್ಲಾ ಸಿಡಿಆರ್‌ ವಿಭಾಗದ ನಿತಿನ್‌, ದಿನೇಶ್‌ ಹಾಗೂ ಚಾಲಕ ಗೋಪಾಲ ನಾಯ್‌ ಅಣ್ಣಪ್ಪ ಮತ್ತು ಪ್ರಶಾಂತ ಪ್ರಮುಖ ಪಾತ್ರ ವಹಿಸಿರುತ್ತಾರೆ. ಪ್ರಕರಣವನ್ನು ಭೇದಿಸಿರುವುದಕ್ಕೆ ಜಿಲ್ಲಾ ಪೊಲೀಸ್‌ ಅಧೀಕ್ಷಕರಾದ ಅಕ್ಷಯ ಎಂ.ಎಚ್‌. ಐ.ಪಿ.ಎಸ್‌. ಅವರು ತಂಡವನ್ನು ಅಭಿನಂದಿಸಿದ್ದಾರೆ.

Comments are closed.