ಕುಂದಾಪುರ: ಮೋದಿ, ಬಿಜೆಪಿ ಎಂದರೆ ಅಭಿವೃದ್ಧಿ ಎಂಬುದು ಜನರಿಗೆ ಅರಿವಾಗಿದೆ. ಕಾಂಗ್ರೆಸ್ ಅಲೆ ಕೊಚ್ಚಿಹೋಗಿದೆ. ವಾರೆಂಟಿಯಿಲ್ಲದ ಗ್ಯಾರೆಂಟಿ ಕಾರ್ಡ್ ಮಾತ್ರ ಅವರ ಬದುಕು. ಇಂತಹ ಪೊಳ್ಳು ಭಾಷಣಕ್ಕೆ ಯಾರು ಮರಳಾಗುವುದಿಲ್ಲ. ಡೆಲ್ಲಿಯಿಂದ ಹಳ್ಳಿ ತನಕ ಕಾಂಗ್ರೆಸ್ ಸರಕಾರವಿದ್ದಾಗ ಜನರಿಗೆ ಉಪಯೋಗವಾಗುವ ಅಭಿವೃದ್ಧಿ ಕೆಲಸ ಮಾಡಿಲ್ಲ. 10 ವರ್ಷದಲ್ಲಿ ಮನಮೋಹನ್ ಸಿಂಗ್ ಸರ್ಕಾರ ಮಾಡಿದ್ದೇನು ಎಂಬುದನ್ನು ಜನರಿಗೆ ತಿಳಿಸಲಿ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.
ಕುಂದಾಪುರ ಪುರಸಭಾ ವ್ಯಾಪ್ತಿಯಲ್ಲಿ ಬಿಜೆಪಿ ಅಭ್ಯರ್ಥಿ ಕಿರಣ್ ಕುಮಾರ್ ಕೊಡ್ಗಿ ಅವರ ಪರ ಪ್ರಚಾರ ಸಂಬಂಧ ಸಂಗಮ್ ಸಮೀಪ ನಡೆಸಿದ ಸಭೆಯಲ್ಲಿ ಅವರು ಮಾತನಾಡಿದರು.
ಈ ಹಿಂದೆ ರಾಜ್ಯದಲ್ಲೂ ಆಡಳಿತಕ್ಕೆ ಬಂದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಟಿಪ್ಪು ಜಯಂತಿ, ಶಾದಿ ಭಾಗ್ಯದ ಮೂಲಕ ಸಮಾಜ ಒಡೆಯುವುದು, ಧರ್ಮ ಒಡೆಯುವುದು ಮಾಡಿದ್ದಾರೆ. ಒಂದು ಸಮುದಾಯದ ಓಲೈಕೆ ಮೂಲಕ ಓಟ್ ಬ್ಯಾಂಕ್ ರಾಜಕಾರಣ ಮಾಡುತ್ತಿದೆ. ಮೋದಿಯವರನ್ನು ದೂಷಿಸುವುದು, ಅವಮಾನಿಸುವುದು ಕಾಂಗ್ರೆಸ್ ಅಜೆಂಡವಾಗಿದ್ದು ನಮ್ಮದು ಅಭಿವೃದ್ಧಿ ಮತ್ತು ಡಬ್ಬಲ್ ಇಂಜಿನ್ ಸರ್ಕಾರ ತರುವ ಧ್ಯೇಯ ಎಂದರು.
ರಾಜ್ಯದಲ್ಲಿ ಬಿಜೆಪಿ ಪರವಾದ ವಾತಾವರಣ ಕಂಡುಬರುತ್ತಿದೆ. ರಾಜ್ಯ-ಕೇಂದ್ರದ ನಾಯಕರು ರಾಜ್ಯಾದ್ಯಂತ ಪ್ರವಾಸ ಮಾಡುತ್ತಿದ್ದಾರೆ. ಮೋದಿಯವರ ಕೈ ಬಲಪಡಿಸುವ ಕಾರ್ಯವಾಗಬೇಕಿದೆ. ರಾಜ್ಯದಲ್ಲಿ 130ಕ್ಕೂ ಅಧಿಕ ಶಾಸಕರು ಬಿಜೆಪಿಯಿಂದ ಗೆಲ್ಲುವ ವಿಶ್ವಾಸವಿದೆ. ಅಭಿವೃದ್ಧಿ ಮಾಡುವ ಸರ್ಕಾರದ ಬಗ್ಗೆ ಜನರಿಗೆ ಒಲವಿದೆ. ಉಡುಪಿ ಜಿಲ್ಲೆಯಲ್ಲಿ 5 ಕ್ಷೇತ್ರ ಬಿಜೆಪಿ ತೆಕ್ಕೆಗೆ ಬರಲಿದೆ. ಕುಂದಾಪುರ ಬಿಜೆಪಿ ಅಭ್ಯರ್ಥಿ ಕಿರಣ್ ಕುಮಾರ್ ಕೊಡ್ಗಿ ಅವರು ಹಾಲಾಡಿ ಶ್ರೀನಿವಾಸ ಶೆಟ್ಟಿಯವರ ನೇತೃತ್ವದಲ್ಲಿ ಅತ್ಯಧಿಕ ಅಂತರದಿಂದ ಗೆದ್ದು ಬರಲಿದ್ದಾರೆ ಎಂಬುದು ಕಾರ್ಯಕರ್ತರ ಉತ್ಸಾಹದಿಂದ ಕಂಡುಬರುತ್ತದೆ ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ಅಭ್ಯರ್ಥಿ ಕಿರಣ್ ಕುಮಾರ್ ಕೊಡ್ಗಿ, ಮುಖಂಡರಾದ ಶ್ಯಾಮಲಾ ಕುಂದರ್, ಮೋಹನದಾಸ್ ಶೆಣೈ, ಕಾಡೂರು ಸುರೇಶ್ ಶೆಟ್ಟಿ, ಭಾಸ್ಕರ್ ಪುತ್ರನ್ ಇದ್ದರು.
Comments are closed.