ಕುಂದಾಪುರ: ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳ ತಪಾಸಣೆ ನಡೆಸುತ್ತಿದ್ದ ಪೊಲೀಸರಿಗೆ ದ್ವಿಚಕ್ರ ವಾಹನವನ್ನು ಡಿಕ್ಕಿ ಹೊಡೆಸಲು ಯತ್ನಿಸಿದ ಅಪರಿಚಿತ ವ್ಯಕ್ತಿಗಳು ವಾಹನದೊಂದಿಗೆ ಪರಾರಿಯಾದ ಘಟನೆ ಮೇ 24ರಂದು ಸಂಜೆ ಸಾಲಿಗ್ರಾಮದಲ್ಲಿ ನಡೆದಿದೆ.
ಕೋಟ ಪೊಲೀಸ್ ಠಾಣೆಯ ತನಿಖಾ ವಿಭಾಗದ ಸಬ್ ಇನ್ಸ್‌ಪೆಕ್ಟರ್ ನರೇಂದ್ರ ಅವರು ಬುಧವಾರ ಸಂಜೆ 6 ಗಂಟೆಯ ಹೊತ್ತಿಗೆ ಸಾಲಿಗ್ರಾಮ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಿಬಂದಿಗಳೊಂದಿಗೆ ವಾಹನಗಳ ತಪಾಸಣೆ ನಡೆಸುತ್ತಿದ್ದರು. ಉಡುಪಿ ಕಡೆಯಿಂದ ಕುಂದಾಪುರದ ಕಡೆಗೆ ವೇಗವಾಗಿ ಬರುತ್ತಿದ್ದ ಬೈಕೊಂದನ್ನು ತಡೆದರೂ ನಿಲ್ಲಿಸಲಿಲ್ಲ. ನಾಲ್ವರು ಸವಾರಿ ಮಾಡಿಕೊಂಡು ಅತಿ ವೇಗವಾಗಿ ಬರುತ್ತಿದ್ದ ಬೈಕ್ ಚಾಲಕ ಹೆಲ್ಮೆಟ್ ಕೂಡ ಧರಿಸದೇ ಇದ್ದು ಪೊಲೀಸರು ನಿಲ್ಲಿಸುವ ಸೂಚಿಸಿದರೂ ಕೂಡ ಬೈಕಿನ ವೇಗ ಹೆಚ್ಚಿಸಿ ಪೋಲೀಸರ ಮೈ ಮೇಲೆರಗಿ ಬಂದಂತೆ ಚಲಾಯಿಸಿಕೊಂಡು ಪರಾರಿಯಾದರು. ಕೂದಲೆಳೆಯ ಅಂತರದಿಂದ ಪೊಲೀಸರು ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳದಿಬಂದಿದೆ.
ಕೆ.ಎ 20 ವಿ 9992 ನೇ ನೋಂದಣಿ ಸಂಖ್ಯೆಯ ಈ ದ್ವಿಚಕ್ರ ವಾಹನ ಸವಾರರ ವಿರುದ್ಧ ಕರ್ತವ್ಯ ನಿರತ ಪೊಲೀಸರ ದೈಹಿಕ ಸುರಕ್ಷತೆ ಮತ್ತು ಪ್ರಾಣಕ್ಕೆ ಅಪಾಯವಾಗುವಂತೆ ಸಾರ್ವಜನಿಕ ರಸ್ತೆಯಲ್ಲಿ ಅತಿವೇಗ ಮತ್ತು ನಿರ್ಲಕ್ಷ್ಯದಿಂದ ವಾಹನ ಚಲಾಯಿಸಿದ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಕೋಟ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.
Comments are closed.