ಕುಂದಾಪುರ: ಹಾಸ್ಟೆಲ್ನಿಂದ ಕಾಲೇಜಿಗೆ ತೆರಳುತ್ತಿದ್ದಾಗ ಹಿಂಬಾಲಿಸಿ ಬಂದು ಅಸಭ್ಯವಾಗಿ ವರ್ತಿಸಿ ಕಿರುಕುಳ ನೀಡಿದ ರೋಡ್ ರೋಮಿಯೋ ಯುವಕನಿಗೆ ವಿದ್ಯಾರ್ಥಿನಿ ಚಪ್ಪಲಿ ಏಟು ನೀಡಿ ಪೊಲೀಸರಿಗೆ ಒಪ್ಪಿಸಿದ ಘಟನೆ ಕುಂದಾಪುರ ತಾಲೂಕಿನ ವಕ್ವಾಡಿ ರಸ್ತೆಯಲ್ಲಿ ಶುಕ್ರವಾರ ಬೆಳಿಗ್ಗೆ ನಡೆದಿದೆ.
ಬಾರ್ಕೂರು ಮೂಲದ ಸದ್ಯ ಈ ಭಾಗದಲ್ಲಿ ಶ್ಯಾಮಿಯಾನ ಮೊದಲಾದ ಕೂಲಿ ಕೆಲಸ ಮಾಡಿಕೊಂಡು ಬಾಡಿಗೆ ಮನೆಯಲ್ಲಿ ವಾಸವಿರುವ ನಜೀರ್ (35) ಆರೋಪಿ.
ಘಟನೆ ವಿವರ: ವಿದ್ಯಾರ್ಥಿನಿಯೋರ್ವಳು ಬೀಜಾಡಿ-ವಕ್ವಾಡಿ ರಸ್ತೆಯಲ್ಲಿರುವ ಬಾಲಕಿಯರ ವಿದ್ಯಾರ್ಥಿನಿಲಯದಿಂದ ಬೆಳಿಗ್ಗೆ ಕಾಲೇಜಿಗೆ ಹೋಗುತ್ತಿದ್ದಾಗ ಹಿಂದಿನಿಂದ ಬಂದ ಆರೋಪಿ ನಜೀರ್ ಆಕೆಗೆ ಕಿರುಕುಳ ನೀಡಿ, ಅಸಭ್ಯವಾಗಿ ವರ್ತಿಸಿದ್ದು ಆಕೆ ಕೂಗಿಕೊಂಡಿದ್ದಾಳೆ. ಕೂಡಲೇ ಸ್ಥಳೀಯರು ಆಗಮಿಸಿ ಆರೋಪಿಯನ್ನು ಹಿಡಿದುಕೊಂಡಿದ್ದು ವಿಚಾರಿಸಿದಾಗ ವಿದ್ಯಾರ್ಥಿನಿ ನಡೆದ ಘಟನೆ ವಿವರಿಸಿದ್ದಾಳೆ. ನೊಂದ ವಿದ್ಯಾರ್ಥಿನಿ ಆರೋಪಿ ನಜೀರನಿಗೆ ಚಪ್ಪಲಿ ಏಟು ನೀಡಿದ್ದು ಸ್ಥಳೀಯರು ಆರೋಪಿಯನ್ನು ಪೊಲೀಸರಿಗೊಪ್ಪಿಸಿದ್ದಾರೆ.
ಕುಂದಾಪುರ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ವಿದ್ಯಾರ್ಥಿನಿಯಿಂದ ದೂರು ದಾಖಲು ಮಾಡಿಕೊಂಡಿದ್ದಾರೆ.
ಹಾಸ್ಟೆಲ್ ಸ್ಥಳಾಂತರಕ್ಕೆ ಒತ್ತಾಯ: ಕಳೆದ ವರ್ಷ (2022) ಮೇ ತಿಂಗಳಿನಲ್ಲಿ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯ ಉದ್ಘಾಟಿಸಲಾಗಿತ್ತು. ಆದರೆ ಈ ಭಾಗದಲ್ಲಿ ಹಾಸ್ಟೆಲ್ ಸೂಕ್ತವಲ್ಲ ಎಂಬುದು ಸ್ಥಳೀಯರ ಅಭಿಪ್ರಾಯವಾಗಿತ್ತು. ಒಂದಷ್ಟು ಸಣ್ಣಪುಟ್ಟ ಘಟನೆಗಳ ಬಳಿಕ ಪೊಲೀಸರು ಬೀಟ್ ವ್ಯವಸ್ಥೆ ಹೆಚ್ಚಿಸಿದ್ದರು. ಈ ಪ್ರದೇಶದಲ್ಲಿ ದಾರಿ ದೀಪ ವ್ಯವಸ್ಥೆಯೂ ಸರಿಯಾಗಿಲ್ಲ. ವ್ಯಸನಿಗಳ ಓಡಾಟ ಜಾಸ್ತಿಯಾಗಿದ್ದು ಈ ಪರಿಸರ ವಿದ್ಯಾರ್ಥಿನಿಯರ ಓಡಾಟಕ್ಕೆ ಪ್ರಶಸ್ತವಲ್ಲ. ಪೊಲೀಸ್ ಇಲಾಖೆ ಗಸ್ತು ವ್ಯವಸ್ಥೆ ಇನ್ನಷ್ಟು ಹೆಚ್ಚಿಸಬೇಕು ಎಂದು ದಲಿತ ಮುಖಂಡ ಅಣ್ಣಪ್ಪ ಬೆಟ್ಟಿನಮನೆ ಆಗ್ರಹಿಸಿದ್ದಾರೆ.
Comments are closed.