(ವರದಿ- ಯೋಗೀಶ್ ಕುಂಭಾಸಿ)
ಕುಂದಾಪುರ: ಕಳೆದೆರಡು ದಿನಗಳ ಹಿಂದೆ ಆಹಾರವರಸಿ ನಾಡಿಗೆ ಬಂದು ಮನೆಯೊಂದರ ಬಾವಿಗೆ ಬಿದ್ದಿದ್ದ ಚಿರತೆಯನ್ನು ಎರಡು ದಿನಗಳ ಕಾಲ ಅರಣ್ಯ ಇಲಾಖೆಯವರು ನಡೆಸಿದ ಕಾರ್ಯಾಚರಣೆಯಲ್ಲಿ ರಕ್ಷಿಸಲಾಗಿದೆ.
ಚಿತ್ತೂರು ಗ್ರಾ.ಪಂ ವ್ಯಾಪ್ತಿಯ ನೈಕಂಬ್ಳಿ ಹೊಸ್ಮನೆ ಶೀನಪ್ಪ ಶೆಟ್ಟಿ ಎನ್ನುವರ ಬಾವಿಗೆ ಜೂ.7 ರಂದು ಚಿರತೆಯೊಂದು ಬಿದ್ದ ಬಗ್ಗೆ ಅರಣ್ಯಾಧಿಕಾರಿಗಳಿಗೆ ಮಾಹಿತಿ ತಿಳಿದುಬಂದಿದ್ದು ಅದರಂತೆಯೇ ಜೂ.8 ಗುರುವಾರ ಮುಂಜಾನೆಯಿಂದ ಚಿರತೆ ರಕ್ಷಣೆ ಕಾರ್ಯಾಚರಣೆ ಆರಂಭಿಸಿದ್ದು ಬೃಹತ್ ಗಾತ್ರದ ಬಾವಿಯೊಳಕ್ಕೆ ಮಟ್ಟುಗಳು (ಪೊಟರೆ) ಇದ್ದ ಕಾರಣ ಚಿರತೆ ಅದರೊಳಕ್ಕೆ ಅವಿತುಕೂತಿದ್ದರಿಂದ ಕಾರ್ಯಾಚರಣೆ ವಿಳಂಭವಾಗಿತ್ತು. ಶುಕ್ರವಾರವೂ ಕಾರ್ಯಾಚರಣೆ ಮುಂದುವರೆಸಿದ್ದು ಬಾವಿಯ ಒಳಕ್ಕೆ ಬೋನು ಬಿಟ್ಟು ಚಿರತೆ ಬೋನಿನೊಳಕ್ಕೆ ಹೋಗುವಂತೆ ಮಾಡಿ ನಾಜೂಕಾಗಿ ಮೇಲಕ್ಕೆತ್ತಿ ರಕ್ಷಣೆ ಮಾಡಲಾಗಿದೆ. ಸತತ ಎರಡು ದಿನಗಳ ಕಾಲ ಈ ಕಾರ್ಯಾಚರಣೆ ನಡೆದಿದ್ದು ಶುಕ್ರವಾರ ರಾತ್ರಿ ಚಿರತೆ ರಕ್ಷಿಸಲಾಗಿದೆ. ಚಿರತೆಯನ್ನೂ ಮೂಕಾಂಬಿಕಾ ಅಭಯಾರಣ್ಯಕ್ಕೆ ಬಿಟ್ಟಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಕುಂದಾಪುರ ಉಪವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಉದಯ ಎಂ. ನಾಯಕ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕ್ಲಿಪರ್ಡ್ ಲೊಬೋ, ಕುಂದಾಪುರ ವಲಯ ಅರಣ್ಯಾಧಿಕಾರಿ ಟಿ. ಕಿರಣ್ ಬಾಬು ಅವರ ಮಾರ್ಗದರ್ಶನದಲ್ಲಿ ಉಪ ವಲಯ ಅರಣ್ಯಾಧಿಕಾರಿ ಆನಂದ ಬಳೆಗಾರ ನೇತೃತ್ವದಲ್ಲಿ ಡಿ.ಆರ್.ಎಫ್.ಓ ದಿಲೀಪ್, ಶರತ್, ಸುನೀಲ್, ಉದಯ್ ಕುಮಾರ್, ಗಸ್ತು ಅರಣ್ಯ ಪಾಲಕರಾದ ರಾಘವೇಂದ್ರ, ರಂಜಿತ್, ಅಶೋಕ್, ದೀಪಶ್ರೀ, ವಿಜಯ್, ಉದಯ್ ಶೆಟ್ಟಿ ಈ ಕಾರ್ಯಾಚರಣೆಯಲ್ಲಿದ್ದರು.
Comments are closed.