ಕರಾವಳಿ

ಓರ್ವ ವಿದ್ಯಾರ್ಥಿ ಸಹಿತ ಮೂವರು ಗಾಂಜಾ ಪೆಡ್ಲರ್‌ಗಳ ಬಂಧನ: 75 ಸಾವಿರ ಮೌಲ್ಯದ 1.5 ಕೆ.ಜಿ ಗಾಂಜಾ ವಶ

Pinterest LinkedIn Tumblr

ಉಡುಪಿ: ವಿದ್ಯಾರ್ಥಿ ಸೇರಿದಂತೆ ಮೂರು ಜನ ಗಾಂಜಾ ಪೆಡ್ಲರ್‌ಗಳನ್ನು ಬಂಧಿಸಿ ಸುಮಾರು 75,000 ರೂ.ಮೌಲ್ಯದ 1.5 ಕೆ.ಜಿ. ಗಾಂಜಾ ವಶಪಡಿಸಿಕೊಂಡ ಘಟನೆ ಮಣಿಪಾಲದಲ್ಲಿ ಬುಧವಾರ ನಡೆದಿದೆ.

ಹೆರ್ಗ ಗ್ರಾಮದ ಅಪಾರ್ಟ್‌ಮೆಂಟ್ ಮೇಲೆ ದಾಳಿ ಮಾಡಿ ಅಲ್ಲಿ ವಾಸವಾಗಿದ್ದ ವಿದ್ಯಾರ್ಥಿ ಶಶಾಂಕ (25) ಹಾಗೂ ಆತನ ಜತೆಗಿದ್ದ ಕಾರ್ಕಳದ ಪೆಡ್ಲರ್, ರಿಯಲ್ ಎಸ್ಟೇಟ್ ವ್ಯವಹಾರ ಮಾಡುತ್ತಿರುವ ಆದಿಲ್ (36)ನನ್ನು ಬಂಧಿಸಿ ಸುಮಾರು 300 ಗ್ರಾಂ ಗಾಂಜಾ ಜಪ್ತಿ ಮಾಡಲಾಗಿದೆ. ಅನಂತರ ಆದಿಲ್ ನೀಡಿದ ಮಾಹಿತಿಯ ಆಧಾರದ ಮೇಲೆ ಹಿರಿಯಡ್ಕ -ಕಾರ್ಕಳ ರಸ್ತೆಯಲ್ಲಿ ಕಾರ್ಕಳ ಮೂಲದ ನೌಶದ್(27)ನನ್ನು ವಶಕ್ಕೆ ಪಡೆದು ಆತನಿಂದ ಸುಮಾರು 1 ಕೆಜಿ 100 ಗ್ರಾಂ. ಗಾಂಜಾ ವಶ ಪಡಿಸಿಕೊಳ್ಳಲಾಗಿದೆ.

ವಿಚಾರಣೆಯಿಂದ ಆದಿಲ್ ಮತ್ತು ನೌಶದ್ ಎಂಬ ಗಾಂಜಾ ಪೆಡ್ಲರ್‌ಗಳು ಆತನ ಸ್ನೇಹಿತ ಕಾರ್ಕಳ ಮೂಲದ ಪ್ರಸ್ತುತ ವಿದೇಶದಲ್ಲಿರುವ ಇಮ್ರಾನ್ ಖಾನ್ ಶಕೀಲ್‌ನು ನೌಶದ್ ಮತ್ತು ಆದಿಲ್‌ನನ್ನು ಸಂಪರ್ಕಿಸಿ ಕಾಸರಗೋಡಿನ ಉಪ್ಪಳದಿಂದ ಗಾಂಜಾ ಮಾರಾಟ ಮಾಡುತ್ತಿರುವುದು ತನಿಖೆಯಿಂದ ಕಂಡು ಬಂದಿದೆ.

ಪ್ರಕರಣದ ಮುಖ್ಯ ಆರೋಪಿ ಇಮ್ರಾನ್ ಖಾನ್‌ನ ಪತ್ತೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಕೆ ಅಕ್ಷಯ್ ಮಚ್ಚೀಂದ್ರ ಅವರು ಮಣಿಪಾಲ ಪೊಲೀಸ್ ನಿರೀಕ್ಷಕರ ನೇತೃತ್ವದಲ್ಲಿ ತಂಡ ರಚಿಸಿ ಆತನ ವಿರುದ್ಧ ಲುಕ್ ಔಟ್ ನೊಟೀಸ್ ಹೊರಡಿಸಲು ಸೂಚಿಸಿದ್ದಾರೆ. ಮಾದಕ ವಸ್ತುಗಳ ಜಾಲದ ಬಗ್ಗೆ ತನಿಖೆ ಮುಂದುವರಿಸಲಾಗಿದೆ.

ವಾರದ ಹಿಂದೆ ಆದಿ ಉಡುಪಿಯ ಸುಮನ್ ಶೆಟ್ಟಿಗಾರ್ (25) ನನ್ನು ಬಂಧಿಸಿ 300 ಗ್ರಾಂ ಗಾಂಜಾವನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಲಾಗಿತ್ತು. ಮಾದಕ ವಸ್ತುಗಳ ವಿರುದ್ಧ ಸಮರ ಮುಂದುವರಿದಿದ್ದು, ಮಣಿಪಾಲ ಠಾಣಾ ವ್ಯಾಪ್ತಿಯಲ್ಲಿ ವಿದ್ಯಾರ್ಥಿಗಳು ಸೇರಿದಂತೆ ಅನೇಕರ ವಿರುದ್ಧ ಪ್ರಕರಣ ದಾಖಲಿಸಿ ಕಾನೂನು ಕ್ರಮಕೈಗೊಳ್ಳಲಾಗುತ್ತದೆ ಎಂದು ಎಸ್ಪಿ ತಿಳಿಸಿದ್ದಾರೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಮಾರ್ಗದರ್ಶನದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸಿದ್ಧಲಿಂಗಪ್ಪ ಟಿ.ಕೆ. ಅವರು ತಮ್ಮ ತಂಡದ ಸದಸ್ಯರಾದ ಉಡುಪಿ ಡಿವೈಎಸ್ಪಿ ದಿನಕರ ಕೆ.ಪಿ., ಮಣಿಪಾಲ ಠಾಣೆಯ ಪೊಲೀಸ್ ನಿರೀಕ್ಷಕ ದೇವರಾಜ ಟಿ.ವಿ., ಎಎಸ್‌ಐ ಶೈಲೇಶ್ ಕುಮಾರ್, ಎಚ್.ಸಿ.ಗಳಾದ ಸುಕುಮಾರ್ ಶೆಟ್ಟಿ, ಅಬ್ದುಲ್ ರಜಾಕ್, ಇಮ್ರಾನ್, ಪಿ.ಸಿ.ಗಳಾದ ಚೆನ್ನೇಶ್, ಆನಂದಯ್ಯ ಹಾಗೂ ತಂಡ ಕಾರ್ಯಾಚರಣೆ ನಡೆಸಿದ್ದಾರೆ.

 

Comments are closed.