ಕುಂದಾಪುರ/ಬೈಂದೂರು: ಜಿಲ್ಲೆಯ ಕುಂದಾಪುರ ಹಾಗೂ ಬೈಂದೂರು ತಾಲೂಕಿನಾದ್ಯಂತ ಶನಿವಾರದಿಂದ ಗಾಳಿ ಸಹಿತ ಮಳೆ ಹೆಚ್ಚಿದ್ದು ಭಾನುವಾರವೂ ಮುಂದುವರಿದಿದೆ. ಭಾನುವಾರ ಮುಂಜಾನೆ ವೇಳೆ ಬೀಸಿದ ಗಾಳಿಯಿಂದ ವಿವಿದೆಡೆ ಆಸ್ತಿ-ಪಾಸ್ತಿ ನಷ್ಟವಾದ ವರದಿಯಾಗಿದೆ.
ಕಳೆದ ವಾರದ ಆರಂಭದಲ್ಲಿ ಒಂದೆರಡು ದಿನ ಬಿಸಿಲಿನ ವಾತಾವರಣವಿದ್ದು, ನಂತರ ಒಂದೆರೆಡು ದಿನ ಬಿಸಿಲು-ಮಳೆ ಬಂದಿತ್ತು. ಶುಕ್ರವಾರದಿಂದ ಮಳೆ ಉಭಯ ತಾಲೂಕುಗಳಲ್ಲಿ ಹೆಚ್ಚಿದ್ದು ಶನಿವಾರವಿಡೀ ದಿನ ಹಾಗೂ ಭಾನುವಾರವೂ ಮಳೆಯಾಗಿದೆ. ರಾಷ್ಟ್ರೀಯ ಹೆದ್ದಾರಿಯ ಹಲವೆಡೆ ಕೃತಕ ಕೆರೆ ಸೃಷ್ಟಿಯಾಗಿದ್ದು ವಾಹನ ಸಂಚಾರಕ್ಕೆ ಅಡಚಣೆಯಾಗಿದೆ. ಶನಿವಾರ ಬೀಸಿದ ಗಾಳಿ ಸಹಿತ ಮಳೆಯ ಕಾರಣ ಮರ ಬಿದ್ದು ವಿವಿದೆಡೆ ಸಂಜೆ ವೇಳೆ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು ಭಾನುವಾರ ಸಂಜೆ ತನಕ ವಿದ್ಯುತ್ ಸಂಪರ್ಕವಿಲ್ಲದೆ ಜನರಿಗೆ ಸಮಸ್ಯೆಯಾಗಿದೆ.
ಕುಂಭಾಶಿಯಲ್ಲಿ ಮನೆಗೆ ಹಾನಿ
ಕುಂದಾಪುರ ಕರಾವಳಿ ಭಾಗದಲ್ಲಿ ಗಾಳಿ-ಮಳೆ ಹೆಚ್ಚಿದೆ. ಕುಂಭಾಶಿ ಪಣಹತ್ವಾರ್ ಬೆಟ್ಟು ನಿವಾಸಿ ಗೋವಿಂದ ಪೂಜಾರಿ, ಪತ್ನಿ, ಪುತ್ರನಿದ್ದ ಮನೆ ಮೇಲೆ ಭಾನುವಾರ ಮುಂಜಾನೆ ವೇಳೆ ತೆಂಗಿನ ಮರಬಿದ್ದು ಮನೆ ಮೇಲ್ಮಾಡು ಸಂಪೂರ್ಣ ಹಾನಿಯಾಗಿ ಲಕ್ಷಾಂತರ ನಷ್ಟ ಸಂಭವಿಸಿದೆ. ಮನೆಯಲ್ಲಿದ್ದ ಮೂವರು ಹಾಲ್ನಲ್ಲಿ ಮಲಗಿದ್ದು ಶಬ್ದದಿಂದ ಎಚ್ಚರಗೊಂಡಿದ್ದರಿಂದ ಅದೃಷ್ಟವಶಾತ್ ಸಂಭಾವ್ಯ ಅವಘಡ ತಪ್ಪಿದೆ. ಹಾಬಿಗೀಡಾದ ಮನೆಗೆ ಕುಂಭಾಶಿ ಗ್ರಾ.ಪಂ ಪಿಡಿಒ ಜಯರಾಮ ಶೆಟ್ಟಿ, ಗ್ರಾಮ ಲೆಕ್ಕಾಧಿಕಾರಿ ನಾಗರಾಜ, ಅಧ್ಯಕ್ಷೆ ಶ್ವೇತಾ, ಸದಸ್ಯರಾದ ರಾಧಾದಾಸ್, ಸುಕನ್ಯಾ, ಕುಂಭಾಶಿ ಗ್ರಾ.ಪಂ ಮಾಜಿ ಉಪಾಧ್ಯಕ್ಷರಾದ ರಾಮಕೃಷ್ಣ ಹೇರ್ಳೆ, ಮಹಾಬಲೇಶ್ವರ ಆಚಾರ್, ಕಾಂಗ್ರೆಸ್ ಮುಖಂಡರಾದ ಮಲ್ಯಾಡಿ ಶಿವರಾಮ ಶೆಟ್ಟಿ, ದಿನೇಶ್ ಹೆಗ್ಡೆ ಮೊಳಹಳ್ಳಿ, ಅಣ್ಣಯ್ಯ ಪುತ್ರನ್ ಭೇಟಿ ನೀಡಿದರು
Comments are closed.