ಕರಾವಳಿ

ಕೊಲ್ಲೂರು ಅರಶಿನಗುಂಡಿ ಜಲಪಾತದಿಂದ ಬಿದ್ದು ಕೊಚ್ಚಿಹೋದ ಯುವಕನ ಪತ್ತೆಗೆ 4ನೇ ದಿನವೂ ಮುಂದುವರಿದ ಶೋಧ

Pinterest LinkedIn Tumblr

(ವರದಿ- ಯೋಗೀಶ್ ಕುಂಭಾಸಿ)

ಕುಂದಾಪುರ: ರವಿವಾರ ಪ್ರವಾಸಕ್ಕೆಂದು ಸ್ನೇಹಿತನೊಂದಿಗೆ ಕೊಲ್ಲೂರು ಸಮೀಪದ ಅರಶಿನ ಗುಂಡಿ ಜಲಪಾತಕ್ಕೆ ಬಂದು ಫಾಲ್ಸ್ ವೀಕ್ಷಣೆಯಲ್ಲಿದ್ದಾಗ ಅಚಾನಕ್ ಕಾಲು ಜಾರಿ ಬಿದ್ದು ನೀರಿನಲ್ಲಿ ಕೊಚ್ಚಿಹೋದ ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನ ಕೆ.ಎಚ್ ನಗರ ಸುಣ್ಣದಹಳ್ಳಿ ನಿವಾಸಿ ಶರತ್ ಕುಮಾರ್ (23) ಅವರಿಗಾಗಿ ನಾಲ್ಕನೇ ದಿನವೂ ಶೋಧ ಮುಂದುವರೆದಿದೆ. ಇಂದು ಎನ್.ಡಿ.ಆರ್.ಎಫ್ ತಂಡವೂ ಆಗಮಿಸಿ ಹುಡುಕಾಟದ ಕಾರ್ಯಾಚರಣೆ ನಡೆಸಲಿದೆ.

ಭಾನುವಾರ ಘಟನೆ ನಡೆದ ಬಳಿಕ ಪೊಲೀಸ್, ಅರಣ್ಯ, ಅಗ್ನಿಶಾಮಕ ಹಾಗೂ ಮಾರನೇ ದಿನ ಈಶ್ವರ ಮಲ್ಪೆ ಸಹಿತ, ಮುಳುಗು ತಜ್ಞರು ಕಾರ್ಯಾಚರಣೆ ನಡೆಸಿದ್ದು ಮಂಗಳವಾರ ಬೆಳಿಗ್ಗೆನಿಂದಲೂ ಮತ್ತೆ ಶೋಧ ಕಾರ್ಯ ಬಿರುಸುಗೊಂಡಿತ್ತು. ಉಡುಪಿ ಎಸ್ಪಿ ಅಕ್ಷಯ್ ಹಾಕೆ ಮಾರ್ಗದರ್ಶನದಲ್ಲಿ, ಡಿವೈಎಸ್ಪಿ ಬೆಳ್ಳಿಯಪ್ಪ ಕೆ.ಯು, ಬೈಂದೂರು ತಹಶಿಲ್ದಾರ್, ಬೈಂದೂರು ವೃತ್ತನಿರೀಕ್ಷಕ ಸಂತೋಷ್ ಕಾಯ್ಕಿಣಿ, ಕೊಲ್ಲೂರು ಠಾಣೆ ಉಪನಿರೀಕ್ಷಕಿ ಜಯಶ್ರೀ, ಠಾಣೆಯ ಪೊಲೀಸ್ ಸಿಬ್ಬಂದಿಗಳು,‌ಅರಣ್ಯ ಇಲಾಖೆ, ಜ್ಯೋತಿರಾಜ್ ಅಲಿಯಾಸ್ ಕೋತಿರಾಜ್, ಎಸ್.ಡಿ.ಆರ್.ಎಫ್ ತಂಡ, ಉಡುಪಿ ಹಾಗೂ ಬೈಂದೂರು ಅಗ್ನಿಶಾಮಕ ತಂಡ, ಗಂಗೊಳ್ಳಿ ಜೀವರಕ್ಷಕ ತಂಡದ ದಿನೇಶ್ ಖಾರ್ವಿ ನೇತೃತ್ವದ ತಂಡ ಸಂಜೆ ತನಕ ಹುಡುಕಾಟದ ಕಾರ್ಯಾಚರಣೆ ನಡೆಸಿದೆ. ಇಂದು ಕೂಡ ಬೈಂದೂರು, ಕೊಲ್ಲೂರು ಪೊಲೀಸರು ಹಾಗೂ ಅಗ್ನಿಶಾಮಕ ದಳ ತಂಡ ಕಾರ್ಯಾಚರಣೆ ಕೈಗೊಂಡಿದೆ.

ದುರ್ಗಮ ಮಾರ್ಗ
ಕೊಲ್ಲೂರು-ನಿಟ್ಟೂರು ಮಾರ್ಗದ ದಳಿಯಿಂದ ದುರ್ಗಮ ಮಾರ್ಗದಲ್ಲಿ ಅರಶಿನಗುಂಡಿ ಜಲಪಾತವಿದೆ. ಇಲ್ಲಿಗೆ ತೆರಳಲು 3-4 ಕಿ.ಮಿ ನಡೆದು ಸಾಗಬೇಕು. ಒಂದೆಡೆ ವಿಪರೀತ ಮಳೆ, ಇಂಬಳ (ಜಿಗಣೆ) ಹುಳುಗಳು, ಕಡಿದಾದ ರಸ್ತೆಯಲ್ಲಿ ಸಾಗಿ ಕಾರ್ಯಾಚರಣೆ ನಡೆಸಲಾಗಿದೆ. ಮೊಬೈಲ್ ನೆಟ್ವರ್ಕ್ ಕೂಡ ಸಿಗದ ಸ್ಥಳ ಇದಾಗಿದೆ.

ಘಟನೆ ಹಿನ್ನೆಲೆ:
ಭಾನುವಾರದಂದು ಶರತ್‌ ಆತನ ಸ್ನೇಹಿತ ಗುರುರಾಜ ಎನ್ನುವರೊಂದಿಗೆ ಕಾರಿನಲ್ಲಿ ಭದ್ರಾವತಿಯಿಂದ ಹೊರಟು ಕೊಲ್ಲೂರಿಗೆ ಆಗಮಿಸಿ ಕೊಲ್ಲೂರು ಗ್ರಾಮದ ಅರಶಿನ ಗುಂಡಿ ಜಲಪಾತ (ಫಾಲ್ಸ್) ನೋಡಲು ಹೋಗಿದ್ದು ಮಧ್ಯಾಹ್ನ 3:30ರ ಸುಮಾರಿಗೆ ಜಲಪಾತ ಬಳಿ ಬಂಡೆಯ ಮೇಲೆ ನಿಂತಿದ್ದ ಶರತ್ ಆಕಸ್ಮಿಕವಾಗಿ ಕಾಲು ಜಾರಿ ಆಯತಪ್ಪಿ ಸೌಪರ್ಣಿಕ ನದಿ ನೀರಿನ ಸೆಳೆತಕ್ಕೆ ಸಿಕ್ಕಿ ಕೊಚ್ಚಿ ಹೋಗಿ ನಾಪತ್ತೆಯಾಗಿದ್ದಾರೆ.

Comments are closed.