ಕರಾವಳಿ

ಪಡುಕೋಣೆ: ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಎಸ್.ಎಸ್.ಎಲ್.ಸಿ ವಿದ್ಯಾರ್ಥಿನಿ

Pinterest LinkedIn Tumblr

ಕುಂದಾಪುರ: ಕುಂದಾಪುರ ಹಾಸ್ಟೆಲ್’ನಲ್ಲಿ ತಂಗಿದ್ದು ಹತ್ತನೇ ತರಗತಿ ಓದುತ್ತಿದ್ದ ವಿದ್ಯಾರ್ಥಿನಿ ಮನೆಗೆಂದು ಬಂದಿದ್ದು ನೇಣಿಗೆ ಶರಣಾದ ಘಟನೆ ಗಂಗೊಳ್ಳಿ ಠಾಣೆ ವ್ಯಾಪ್ತಿಯ ಪಡುಕೋಣೆ ಎಂಬಲ್ಲಿ ಆ.31 ಗುರುವಾರ ಬೆಳಿಗ್ಗೆ ನಡೆದಿದೆ.

ಪಡುಕೋಣೆ ನಿವಾಸಿ ಪ್ರಶಾಂತ್, ಸುನಂದಾ ದಂಪತಿ ಪುತ್ರಿ ಸಿಂಧು (16) ಆತ್ಮಹತ್ಯೆಗೆ ಶರಣಾದವರು.

ಘಟನೆ ವಿವರ: ಈ ವರ್ಷದ ಶೈಕ್ಷಣಿಕ ಆರಂಭ ವರ್ಷದಿಂದ (ಜೂನ್) ಸಿಂಧು ಕುಂದಾಪುರದ ವಡೇರಹೋಬಳಿಯಲ್ಲಿರುವ ಬಾಲಕಿಯರ ವಸತಿ ನಿಲಯದಲ್ಲಿದ್ದು ಸಮೀಪದ ಸರಕಾರಿ ಶಾಲೆಯಲ್ಲಿ ಎಸ್.ಎಸ್.ಎಲ್‌.ಸಿ ಓದುತ್ತಿದ್ದರು. ಕಳೆದೆರಡು ದಿನಗಳ ಹಿಂದೆ ಅನಾರೋಗ್ಯವೆಂದು ತನ್ನ ಮನೆಗೆ ಹೋಗಿದ್ದ ಸಿಂಧುವನ್ನು ಬುಧವಾರ ತಾಯಿ ಆಸ್ಪತ್ರೆಗೆ ಕರೆದೊಯ್ದಿದ್ದರು. ಬಳಿಕ ರಾತ್ರಿ ಮನೆಯಲ್ಲಿ ಚೆನ್ನಾಗಿಯೇ ಇದ್ದ ಆಕೆ ಪಕ್ಕದ ಅಜ್ಜಿಮನೆಯಲ್ಲಿ ಟಿವಿ ನೋಡಿ ವಾಪಾಸ್ಸಾಗಿದ್ದರು. ಗುರುವಾರ ಶಾಲೆಗೆ ಬರಬೇಕಿದ್ದರಿಂದ ತಂದೆ ಕುಂದಾಪುರಕ್ಕೆ ಬಿಡುವುದಾಗಿ ಹೇಳಿದ್ದು ಆದರೆ ಆಕೆ ತಾನು ಬಸ್ಸಿಗೆ ಹೋಗುವುದಾಗಿ ತಿಳಿಸಿದ್ದಳು. ಇದಾದ ಸ್ವಲ್ಪ ಸಮಯದ ನಂತರ ಮನೆಯವರು ಗಮನಿಸಿದಾಗ ನೇಣು ಬಿಗಿದ ಸ್ಥಿತಿಯಲ್ಲಿ ಸಿಂಧು ಮೃತದೇಹ ಪತ್ತೆಯಾಗಿದೆ. ಮೊದಲಿಗೆ ಮನೆಯವರು ಮೃತದೇಹವನ್ನು ಕುಂದಾಪುರ ಸರಕಾರಿ ಆಸ್ಪತ್ರೆಗೆ ಕೊಂಡೊಯ್ದಿದ್ದು ಕೂಲಂಕುಷ ಮರಣೋತ್ತರ ಪರೀಕ್ಷೆಗಾಗಿ ಮಣಿಪಾಲ‌ ಕೆ.ಎಂ.ಸಿ ಆಸ್ಪತ್ರೆಗೆ ಪೊಲೀಸರು ಮೃತದೇಹ ರವಾನಿಸಿದ್ದಾರೆ.

ಮೃತಳ ತಂದೆ ಪ್ರಶಾಂತ್ ಕುಂದಾಪುರ ಪುರಸಭೆಯಲ್ಲಿ ಪೌರಕಾರ್ಮಿಕರಾಗಿದ್ದಾರೆ. ಘಟನಾ ಸ್ಥಳಕ್ಕೆ ಗಂಗೊಳ್ಳಿ ಪಿಎಸ್ಐ ಹರೀಶ್ ಆರ್. ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದ್ದಾರೆ. ನಾಡಾ ಗ್ರಾ.ಪಂ ಸದಸ್ಯರಾದ ಮಮತಾ, ಶೋಭಾ, ಕೊರಗ ಸಂಘಟನೆ ಪ್ರಮುಖರಾದ ಶ್ರೀಧರ್ ನಾಡ, ಸುದರ್ಶನ ಕೋಟ‌ ಮನೆಗೆ ಭೇಟಿ ನೀಡಿದ್ದಾರೆ. ಕೊರಗ ಶ್ರೆಯೋಭಿವೃದ್ಧಿ ಸಂಘದ ಕುಂದಾಪುರ ತಾಲೂಕು ಅಧ್ಯಕ್ಷ ಗಣೇಶ್ ವಿ. ಕುಂದಾಪುರ, ಗಣೇಶ್ ಬಾರ್ಕೂರು, ಜಿಲ್ಲಾ ದೌರ್ಜನ್ಯ ತಡೆ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸದಸ್ಯ ವಾಸುದೇವ ಮುದೂರು, ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ಮುಖಂಡರಾದ ರಾಜು ಬೆಟ್ಟಿನಮನೆ, ಸುರೇಶ್ ಹಕ್ಲಾಡಿ, ದಸಂಸ ಭೀಮಘರ್ಜನೆ ಸಂಘಟನೆಯ ವಿಜಯ ಕೆ.ಎಸ್ ಆಸ್ಪತ್ರೆಗೆ ಭೇಟಿ ನೀಡಿದ್ದರು‌.

Comments are closed.