ಕುಂದಾಪುರ: ಕೆಲಸ ಮಾಡುವಾಗ ಆಕಸ್ಮಿಕವಾಗಿ ಬಿದ್ದು ಬೆನ್ನು ಹುರಿ ಮುರಿದು ಹಾಸಿಗೆ ಹಿಡಿದ ಯಜಮಾನ.
ನಿತ್ಯವೂ ಕಣ್ಣೀರಲ್ಲಿ ಕೈ ತೊಳೆಯುತ್ತಿದೆ ಈ ಬಡ ಕುಟುಂಬವೀಗ ಸಹೃದಯಿ ದಾನಿಗಳ ನೆರವಿನ ನಿರೀಕ್ಷೆಯಲ್ಲಿದೆ.
ಕುಂದಾಪುರ ತಾಲೂಕಿನ ಕಟ್ಕೆರೆ ಜನತಾ ಕಾಲನಿಯ ಪುಟ್ಟ ಮನೆಯೊಂದರಲ್ಲಿ ವಾಸವಿರುವ ಬಡ ಕುಟುಂಬವಿದು. ಇರುವ ಐದು ಸೆಂಟ್ಸ್ ಜಾಗದಲ್ಲೇ ಪುಟ್ಟದೊಂದು ಮನೆ. ಆ ಮನೆಯ ಕೋಣೆಯೊಂದರ ಮೂಲೆಯಲ್ಲಿ ದಯನೀಯ ಸ್ಥಿತಿಯಲ್ಲಿ ಒರಗಿ ಮಲಗಿರುವ ಯಜಮಾನ. ತನ್ನ ಪತಿಯನ್ನು ಶತಾಯಗತಾಯ ಗುಣಪಡಿಸಲೇಬೇಕೆನ್ನುವ ಉದ್ದೇಶದಿಂದ ದಿನದ ಸಂಪೂರ್ಣ ಸಮಯವನ್ನು ಪತಿಯ ಆರೈಕೆಯಲ್ಲಿ ತೊಡಗಿರುವ ಪತ್ನಿ. ಏಳಲಾಗದ ಸ್ಥಿತಿಯಲ್ಲಿ ಹಾಸಿಗೆಯಲ್ಲಿ ಮಲಗಿದವರ ಹೆಸರು ಸುರೇಶ್ ಮೊಗವೀರ. ಕಳೆದ ಇಪ್ಪತ್ತು ವರ್ಷಗಳಿಂದ ಸೆಂಟ್ರಿಂಗ್ ಕೆಲಸ ಮಾಡಿಕೊಂಡು ತಮ್ಮ ಸಂಸಾರವನ್ನು ನಿಭಾಯಿಸುತ್ತಿದ್ದವರು. ಹೀಗೆ ನಾಲ್ಕು ತಿಂಗಳ ಹಿಂದೆ ಸಾಲಿಗ್ರಾಮದ ಸಮೀಪ ಸೆಂಟ್ರಿಂಗ್ ಕೆಲಸ ಮಾಡುತ್ತಿದ್ದಾಗ ಆಯತಪ್ಪಿ ಬಿದ್ದ ಸುರೇಶ್ ಆ ಬಳಿಕ ಎದ್ದು ನಿಂತಿದ್ದೇ ಇಲ್ಲ.
ಬೆನ್ನು ಹುರಿ ಮುರಿತಕ್ಕೊಳಗಾಗಿ 15 ದಿನಗಳ ಕಾಲ ಮಣಿಪಾಲ ಆಸ್ಪತ್ರೆಗೆ ದಾಖಲಾಗಿ ಶಸ್ತ್ರ ಚಿಕಿತ್ಸೆಗೊಳಪಡಿಸಿಕೊಂಡರೂ ಯಾವುದೇ ಪ್ರಯೋಜನವಾಗಿಲ್ಲ. ಸೊಂಟಕ್ಕಿಂತ ಕೆಳಭಾಗದ ಸಂಪೂರ್ಣ ಸ್ವಾಧೀನತೆ ಕಳೆದುಕೊಂಡಿರುವ ಸುರೇಶ್ ಇದೀಗ ಹಾಸಿಗೆಯಲ್ಲೇ ದಿನದೂಡುವಂತಾಗಿದೆ. ಸರಿಯಾಗಿ ಕೂರಲೂ ಸಾಧ್ಯವಿಲ್ಲ. ತನ್ನ ಪತಿ ಮೊದಲಿನಂತೆ ಸರಿಯಾಗಿ ನಡೆದಾಡಬೇಕು ಎನ್ನುವ ಹಂಬಲದಿಂದ ತನ್ನಲ್ಲಿರುವ ಅಷ್ಟಿಷ್ಟೋ ಒಡವೆಗಳನ್ನೆಲ್ಲಾ ಅಡಮಾನವಿಟ್ಟು ಪತ್ನಿ ಸುಮಿತ್ರಾ ಚಿಕಿತ್ಸೆ ಕೊಡಿಸಿದ್ದಾರೆ. ಮನೆಯ ಜವಾಬ್ದಾರಿಗಳನ್ನ ಹೊತ್ತ ಪತಿ ಹಾಸಿಗೆ ಹಿಡಿದ ಬಳಿಕ ಮನೆಯ ನಿರ್ವಹಣೆ, ಇಬ್ಬರು ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಸಾಲ ಮಾಡಿಕೊಂಡಿದ್ದು, ನಿತ್ಯ ಬದುಕಿಗೂ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಮೊದಲು ಜೀವನ ನಿರ್ವಹಣೆಗಾಗಿ ಬಟ್ಟೆ ಹೊಲಿಯುತ್ತಿದ್ದ ಪತ್ನಿ ಸುಮಿತ್ರಾ ಪತಿ ಹಾಸಿಗೆ ಹಿಡಿದ ಬಳಿಕ ಆ ಕೆಲಸವೂ ಬಿಟ್ಟು ಪತಿಯ ಆರೈಕೆಯಲ್ಲಿಯೇ ಕಾಲ ಕಳೆಯುವಂತಾಗಿದೆ. ಹಾಸಿಗೆ ಹಿಡಿದ ಪತಿಯ ಎಲ್ಲ ಬೇಕು ಬೇಡಿಕೆಗಳನ್ನ ಈಡೇರಿಸಲು ಪತ್ನಿ ಪಕ್ಕದಲ್ಲೇ ಇದ್ದು ಆರೈಕೆ ಮಾಡಬೇಕು ಅವರ ಅಜ್ಜಿಯೂ ಹಾಸಿಗೆ ಹಿಡಿದಿದ್ದು, ಅವರ ಚಾಕರಿಯೂ ಸುಮಿತ್ರಾ ಅವರ ಮೇಲಿದೆ. ಇನ್ನು ಸುಮಿತ್ರಾ ಅವರ ತಾಯಿ ಅವರಿವರ ಮನೆಯ ಕೆಲಸಕ್ಕೆ ಹೋಗಿ ಕುಟುಂಬ ನಿರ್ವಹಣೆಗೆ ತಮ್ಮಿಂದಾದಷ್ಟು ಸಹಾಯ ಮಾಡುತ್ತಿದ್ದಾರೆ. ಇಬ್ಬರು ಹೆಣ್ಣು ಮಕ್ಕಳು ಪ್ರಾಥಮಿಕ ಹಾಗೂ ಪ್ರೌಢ ಶಾಲೆಯಲ್ಲಿ ವಿದ್ಯಾಭ್ಯಾಸ ನಡೆಸುತ್ತಿದ್ದಾರೆ.
ಅಲ್ಲಿಲ್ಲಿ ಸಾಲ ಮಾಡಿ ಸುರೇಶ್ ಅವರಿಗೆ ಚಿಕಿತ್ಸೆ ನೀಡಿದರೂ ಇನ್ನೂ ಸಹ ಗುಣಮುಖರಾಗಿಲ್ಲ, ಇವುಗಳ ಮಧ್ಯೆ ದೂರದ ಊರುಗಳಿಗೆ ಹೆಚ್ಚಿನ ಚಿಕಿತ್ಸೆಗೆ ಹೋಗಬೇಕೆಂದರೆ ಸಾಧ್ಯವಾಗುತ್ತಿಲ್ಲ. ಹೀಗಾಗಿ ದಾನಿಗಳು ತಮ್ಮ ಪತಿಯ ಚಿಕಿತ್ಸೆಗಾಗಿ ಅನುಕೂಲ ಮಾಡಿಕೊಡಬೇಕೆನ್ನುತ್ತಾರೆ ಪತ್ನಿ ಸುಮಿತ್ರಾ.
ನೆರವು ನೀಡುವ ಸಹೃದಯಿಗಳು ಸಂಪರ್ಕಿಸಬಹುದು:
Name : Sumithra Mogaveera
Account No : 3842500100323401
IFSC Code : KARB0000384
Bank : Karnataka Bank
Branch : Koni
PhonePe : 9620968224
Comments are closed.