(ವರದಿ- ಯೋಗೀಶ್ ಕುಂಭಾಸಿ)
ಕುಂದಾಪುರ: ಶಿಕ್ಷಕರಾಗಿ ಸೇವೆ ಸಲ್ಲಿಸುವುದು ಪುಣ್ಯದ ವೃತ್ತಿ. ಬಾಲ್ಯದಲ್ಲಿಯೇ ವಿದ್ಯಾರ್ಥಿಗಳಿಗೆ ಸಂಸ್ಕೃತಿ, ಸಂಸ್ಕಾರ ಕಲಿಸಿ ತಿದ್ದುವುದು ಪೋಷಕರು ಹಾಗೂ ಶಿಕ್ಷಕರು ಜವಬ್ದಾರಿ. ತಿಂಗಳಿನಲ್ಲಿ ಒಂದೆರಡು ದಿನ ಶಿಕ್ಷಕರು ಮಕ್ಕಳೊಂದಿಗೆ ಬೆರೆತು ಮನಸ್ಥಿತಿ ಅರಿಯುವ ಕೆಲಸ ಮಾಡಬೇಕಿದೆ. ಶೈಕ್ಷಣಿಕ ಕ್ಷೇತ್ರಕ್ಕೆ ಕೊಡುಗೆ ನೀಡಿ ಸಮಾಜಸೇವೆಯಲ್ಲಿ ತೊಡಗಿಸಿಕೊಂಡು ಸರಕಾರಿ ಶಾಲೆಗಳ ರಕ್ಷಣೆಗೆ ಮುಂದಾಗುತ್ತಿರುವ ಕನ್ನಡ ಶಾಲಾಭಿಮಾನಿಗಳ ಕಾರ್ಯ ಶ್ಲಾಘನೀಯ ಎಂದು ಉಡುಪಿ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಅಬ್ದುಲ್ ರಹೀಮ್ ಹುಸೇನ್ ಶೇಖ್ ಹೇಳಿದರು.
ಕರ್ನಾಟಕ ರಾಜ್ಯ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ವೇದಿಕೆ ಉಡುಪಿ ಜಿಲ್ಲೆ ವತಿಯಿಂದ ಕುಂದಾಪುರ ತಾಲೂಕು ಕಾನೂನು ಸೇವೆಗಳ ಸಮಿತಿ, ಉಡುಪಿ ಜಿಲ್ಲಾ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕುಂದಾಪುರ ವಕೀಲರ ಸಂಘ, ಬಾರ್ ಅಸೋಸಿಯೇಷನ್, ಗೀತಾ ಹೆಚ್.ಎಸ್.ಎನ್ ಫೌಂಡೇಶನ್ ಕೋಟೇಶ್ವರ, ಸರಸ್ವತಿ ಕಲ್ಯಾಣ ಮಂದಿರ ಕೋಟೇಶ್ವರ, ಎಮ್.ಎಸ್ ಮಂಜ ಚಾರಿಟೇಬಲ್ ಟ್ರಸ್ಟ್ ಚಿತ್ತೂರು-ಮಾರಣಕಟ್ಟೆ, ಸಮನ್ವಯ ವೇದಿಕೆ ಮಹಾಪೋಷಕರು ಹಾಗೂ ಅಭಿವೃದ್ಧಿ ಶಿಕ್ಷಣ ತಜ್ಞರಾದ ಪ್ರೋ. ಡಾ. ನಿರಂಜನಾರಾಧ್ಯ ವಿ.ಪಿ, ಮಗು ಮತ್ತು ಕಾನೂನು ಕೇಂದ್ರ, ನ್ಯಾಶನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯುನಿವರ್ಸಿಟಿ ಬೆಂಗಳೂರು ಇವರ ಸಹಯೋಗದಲ್ಲಿ ಶಿಕ್ಷಕ ದಿನಾಚರಣೆ ಪ್ರಯುಕ್ತ ಕೋಟೇಶ್ವರದ ಸರಸ್ವತಿ ಕಲ್ಯಾಣ ಮಂದಿರದಲ್ಲಿ ನಡೆದ ‘ಮಕ್ಕಳ ಶಿಕ್ಷಣ ಮತ್ತು ಶಿಕ್ಷಣ ಹಕ್ಕು ಕಾಯ್ದೆ-2009 ಮಾಹಿತಿ ಕಾರ್ಯಗಾರ, ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಹಿರಿಯ ಸಿವಿಲ್ ನ್ಯಾಯಾಧೀಶರು, ಕುಂದಾಪುರ ತಾಲೂಕು ಕಾನೂನು ಸೇವೆಗಳ ಸಮಿತಿ ಅಧ್ಯಕ್ಷರಾದ ರಾಜು ಎನ್. ಮಾತನಾಡಿ, ಸರಕಾರಿ ಶಾಲೆಯಲ್ಲಿ ಓದುವ ವಿದ್ಯಾರ್ಥಿಗಳಿಗೆ ಗಟ್ಟಿತನದ ಶಿಕ್ಷಣ ನೀಡುವ ಮಹತ್ತರ ಜವಬ್ದಾರಿ ಉಳಿಸಿಕೊಂಡ ಕಾರಣಕ್ಕೆ ಸರ್ಕಾರಿ ಕನ್ನಡ ಶಾಲೆಗಳಿಗೆ ಮಕ್ಕಳನ್ನು ಪೋಷಕರು ಕಳಿಸುತ್ತಾರೆ. ಸಮಾಜದಲ್ಲಿ ಯಾವುದು ಒಳಿತು-ಕೆಡುಕು ಎನ್ನುವ ಶಿಕ್ಷಣ ಕಲಿಸುವ ಕೆಲಸವಾಗಬೇಕು ಎಂದರು.
ಉಡುಪಿ ಡಿಡಿಪಿಐ ಗಣಪತಿ ಕೆ., ಎಸ್.ಡಿ.ಎಂ.ಸಿ ಸಮನ್ವಯ ವೇದಿಕೆ ರಾಜ್ಯ ಉಪಾಧ್ಯಕ್ಷ ಗುನ್ನಳ್ಳಿ ರಾಘವೇಂದ್ರ, ರಾಜ್ಯ ಸಮಿತಿ ಸದಸ್ಯೆ ಶೋಭಾ ಭಾಸ್ಕರ್, ಜಿಲ್ಲಾ ಕಾರ್ಯದರ್ಶಿ ದೀಪಾ ಮಹೇಶ್, ಬ್ರಹ್ಮಾವರ ತಾಲೂಕು ಅಧ್ಯಕ್ಷ ಬಾಲಕೃಷ್ಣ ಪೂಜಾರಿ, ಕಾರ್ಕಳ ಅಧ್ಯಕ್ಷ ಪ್ರಕಾಶ್ ಕೋಟ್ಯಾನ್, ಕುಂದಾಪುರ ತಾಲೂಕು ಕಾರ್ಯದರ್ಶಿ ಪ್ರಮೋದಾ ಕೆ. ಶೆಟ್ಟಿ, ಬೈಂದೂರು ತಾಲೂಕು ಉಪಾಧ್ಯಕ್ಷ ರವಿ ಮರವಂತೆ, ನಿವೃತ್ತ ಮುಖ್ಯೋಪಾಧ್ಯಾಯ ಮಹಾಬಲ ಶೆಟ್ಟಿ, ಕೆನರಾ ಬ್ಯಾಂಕ್ ನಿವೃತ್ತ ಡಿಜಿಎಂ ಯು. ದಿನೇಶ್ ಪೈ, ಮಂಗಳೂರಿನ ಪಡಿ ಸಂಸ್ಥೆಯ ರೆನ್ನಿ ಡಿಸೋಜಾ, ಶಿಕ್ಷಣಾಭಿಮಾನಿ ಪ್ರಕಾಶ್ ಆಚಾರ್ಯ ಮೊದಲಾದವರಿದ್ದರು.
ಎಸ್.ಡಿ.ಎಂ.ಸಿ ಸಮನ್ವಯ ವೇದಿಕೆ ಕುಂದಾಪುರ ತಾಲೂಕು ಅಧ್ಯಕ್ಷ ಎಸ್.ವಿ . ನಾಗರಾಜ ಅಧ್ಯಕ್ಷತೆ ವಹಿಸಿದ್ದರು. ಉಡುಪಿ ಜಿಲ್ಲಾಧ್ಯಕ್ಷ ಅಬ್ದುಲ್ ಸಲಾಂ ಚಿತ್ತೂರು ಪ್ರಾಸ್ತಾವಿಕ ಮಾತನಾಡಿದರು. ಜಿಲ್ಲಾ ಕಾರ್ಯದರ್ಶಿ ದೀಪಾ ಮಹೇಶ್ ವಂದಿಸಿದರು. ಎಸ್.ಡಿ.ಎಂ.ಸಿ.ಸಮನ್ವಯ ವೇದಿಕೆ ಕುಂದಾಪುರ ತಾಲೂಕು ಉಪಾಧ್ಯಕ್ಷ ರಾಜಶೇಖರ್ ನಿರೂಪಿಸಿ, ಪತ್ರಿಕಾ ಕಾರ್ಯದರ್ಶಿ ಶಶಿ ಬಳ್ಕೂರು ನಿರ್ವಹಿಸಿ, ಕೋಶಾಧಿಕಾರಿ ಕೃಷ್ಣಾನಂದ ಶಾನುಭಾಗ್ ಪ್ರಾರ್ಥಿಸಿದರು. ಕುಂದಾಪುರ ಪುರಸಭಾ ಘಟಕಾಧ್ಯಕ್ಷ ಅಶ್ವಥ್ ಕುಮಾರ್ ಸ್ವಾಗತಿಸಿದರು.
ಸನ್ಮಾನ:
2023-24ನೇ ಸಾಲಿನ ‘ಜಿಲ್ಲಾ ಮಟ್ಟದ ಸರಕಾರಿ ಶಾಲೆಗಳ ಅಭಿವೃದ್ಧಿ ಹರಿಕಾರ ಪ್ರಶಸ್ತಿ’ಯನ್ನು ಎಮ್.ಎಸ್ ಮಂಜ ಚಾರಿಟೇಬಲ್ ಟ್ರಸ್ಟ್ ಚಿತ್ತೂರು-ಮಾರಣಕಟ್ಟೆ ಅಧ್ಯಕ್ಷ ಕೃಷ್ಣಮೂರ್ತಿ ಮಂಜ, ನಿವೃತ್ತ ಮುಖ್ಯೋಪಾಧ್ಯಾಯ, ನಡೂರು ರಜತಾದ್ರಿ ಶ್ರೀವಾಣಿ ಪ್ರೌಢಶಾಲೆಯ ವಿಶ್ವನಾಥ ಶೆಟ್ಟಿ ಅವರಿಗೆ ‘ಗುರುವಂದನೆ’, ಗೀತಾ ಹೆಚ್.ಎಸ್.ಎನ್ ಫೌಂಡೇಶನ್ ಕೋಟೇಶ್ವರದ ಅಧ್ಯಕ್ಷ ಶಂಕರ್ ಐತಾಳ ಅವರಿಗೆ ‘ಗ್ರಾಮೀಣ ಭಾಗದ ಸರಕಾರಿ ಶಾಲೆಗಳ ಅಭಿವೃದ್ಧಿ ಸಾಧಕ ಪ್ರಶಸ್ತಿ’ ಪ್ರದಾನಿಸಲಾಯಿತು. ಬೈಂದೂರು ಶೈಕ್ಷಣಿಕ ವಲಯದ ಎಂ. ನಾಗರಾಜ ಶೆಟ್ಟಿ, ಉಡುಪಿ ವಲಯದ ಪರಿಮಳ ಅವಭೃತ, ಕುಂದಾಪುರ ವಲಯದ ಪ್ರಭಾಕರ ಶೆಟ್ಟಿ, ಬ್ರಹ್ಮಾವರ ವಯಲದ ಆಶಲತಾ, ಕಾರ್ಕಳ ವಲಯದ ಪ್ರೀತೇಶ್ ಕುಮಾರ್ ಅವರಿಗೆ ‘ಉಡುಪಿ ಜಿಲ್ಲಾಮಟ್ಟದ ಅತ್ಯುತ್ತಮ ಸಮೂಹ ಸಂಪನ್ಮೂಲ ವ್ಯಕ್ತಿ ಪ್ರಶಸ್ತಿ’ ನೀಡಿ ಗೌರವಿಸಲಾಯಿತು.
Comments are closed.