ಕರಾವಳಿ

ಮಕ್ಕಳ ವಿದ್ಯಾರ್ಥಿ ವೇತನದ ಹಣ ನುಂಗಲು ನಾಚಿಕೆ ಇಲ್ಲವೇ: ಸರಕಾರಗಳ ವಿರುದ್ಧ ಸುರೇಶ್ ಕಲ್ಲಾಗರ ಆಕ್ರೋಶ

Pinterest LinkedIn Tumblr

ಕುಂದಾಪುರ: ಕಟ್ಟಡ ಕಾರ್ಮಿಕರ ಮಂಡಳಿಯಲ್ಲಿ ಸಂಗ್ರಹವಾಗಿರುವ ಹಣ ಖರೀದಿಗೆ ಬಳಸಿಕೊಂಡು ವಿದ್ಯಾರ್ಥಿಗಳ ಶೈಕ್ಷಣಿಕ ಧನಸಹಾಯದಲ್ಲಿ ಕಮಿಷನ್ ನುಂಗುವ ಮಂತ್ರಿಗಳೇ ನಿಮಗೆ ನಾಚಿಕೆ ಇಲ್ಲವೇ ಎಂದು ಕುಂದಾಪುರ ತಾಲೂಕು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘದ ತಾಲೂಕು ಅಧ್ಯಕ್ಷ ಸುರೇಶ್ ಕಲ್ಲಾಗರ ಆಕ್ರೋಶ ವ್ಯಕ್ತಪಡಿಸಿದರು.

ಕಟ್ಟಡ ಕಾರ್ಮಿಕರ ಮಕ್ಕಳಿಗೆ ಶೈಕ್ಷಣಿಕ ಧನಸಹಾಯ ಅರ್ಜಿಗೆ ಹಣ ಬಿಡುಗಡೆ ಮಾಡದೇ ಇರುವುದನ್ನು ಖಂಡಿಸಿ ರಾಜ್ಯ ವ್ಯಾಪಿ ಕಟ್ಟಡ ಕಾರ್ಮಿಕರ ಹೋರಾಟದ ಅಂಗವಾಗಿ ಸೋಮವಾರ ಕುಂದಾಪುರದಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು.

ಬಿಜೆಪಿ ಸರ್ಕಾರದಿಂದ ಆರಂಭಗೊಂಡ ಕಲ್ಯಾಣ ಮಂಡಳಿಯ ಖರೀದಿಯ ಭ್ರಷ್ಟಾಚಾರ ಕಾಂಗ್ರೇಸ್ ಸರಕಾರದ ತನಕ ಮುಂದುವರಿದಿದೆ. ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರದ ಕಾರ್ಮಿಕ ಮಂತ್ರಿ ಇತ್ತೀಚೆಗೆ ಮಂಡಳಿ ಹಣವನ್ನು ವಿಧ್ಯಾರ್ಥಿಗಳಿಗೆ 7000 ಲ್ಯಾಪ್ ಟಾಪ್ ನ ಪ್ರತಿಯೊಂದರ ಬೆಲೆ ರೂ 71000ದಂತೆ ಖರೀದಿಸಿದೆ ಆದರೆ ಮಾರ್ಕೆಟ್ ನಲ್ಲಿ ಇದರ ನಿಜವಾದ ದರ ರೂ, 31000 ಆಗಿದೆ. ಇತ್ತೀಚೆಗೆ ಕಾರ್ಮಿಕ ಮಂತ್ರಿಗಳನ್ನು ಸಂಘಟನೆಗಳು ಭೇಟಿ ಮಾಡಿ ಕಳೆದ ಎರಡು ವರ್ಷಗಳಿಂದ ಶೈಕ್ಷಣಿಕ ಧನಸಹಾಯ ಬಿಡುಗಡೆಗೆ ಒತ್ತಾಯಿಸಲಾಯಿತು ಮಂತ್ರಿಗಳು ಹಣದ ಕೊರತೆ ನೆಪವೊಡ್ಡಿದ್ದರು ಆದರೆ ಈಗ ಕೆಲವೇ ಕೆಲವು ವಿದ್ಯಾರ್ಥಿಗಳಿಗೆ ಅತೀ ಹೆಚ್ಚು ಬೆಲೆಗೆ ಲ್ಯಾಪ್ ಟಾಪ್ ಖರೀದಿ ಮಾಡಿ ಮಕ್ಕಳ ಮಧ್ಯೆ ತಾರತಮ್ಯ ಮಾಡಲಾಗುತ್ತಿದೆ ಎಂದು ದೂರಿದರು.

ಶಾಸ್ತ್ರೀ ಸರ್ಕಲ್ ಬಳಿಯಿಂದ ನೂರಾರು ಕಾರ್ಮಿಕರು ಪೇಟೆ ಸುತ್ತ ಮೆರವಣಿಗೆ ಹೊರಟು ಕುಂದೇಶ್ವರ ಬಳಿ ಇರುವ ಕಾರ್ಮಿಕ ನಿರೀಕ್ಷಕ ಕಚೇರಿ ಎದುರು ಧರಣಿ ನಡೆಸಿ ಕೂಡಲೇ ಶೈಕ್ಷಣಿಕ ಧನಸಹಾಯ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದ್ದು ಇಲ್ಲವಾದಲ್ಲಿ ಅಕ್ಟೋಬರ್ 26-27 ಜಿಲ್ಲಾಧಿಕಾರಿ ಕಚೇರಿ ಎದುರು ಹಗಲು ರಾತ್ರಿ ಧರಣಿ ಸತ್ಯಾಗ್ರಹ ನಡೆಸಲು ನಿರ್ಧರಿಸಿದೆ ಎಂದರು.

ಸಂಘದ ಪ್ರಧಾನ ಕಾರ್ಯದರ್ಶಿ ಸಂತೋಷ್ ಹೆಮ್ಮಾಡಿ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು.ತಾಲೂಕು ಉಪಾಧ್ಯಕ್ಷ ಚಂದ್ರಶೇಖರ ವಿ ಮಾತನಾಡಿದರು.
ಪ್ರತಿಭಟನೆಯಲ್ಲಿ ಸಂಘದ ಗೌರವಾಧ್ಯಕ್ಷ ಚಿಕ್ಕ ಮೊಗವೀರ, ಸಿಐಟಿಯು ಜಿಲ್ಲಾ ಮುಖಂಡ ಎಚ್ ನರಸಿಂಹ, ಕೋಶಾಧಿಕಾರಿ ಜಗದೀಶ್ ಆಚಾರ್ ಮೊದಲಾದವರಿದ್ದರು.

ನಿರೀಕ್ಷಕ ಕಚೇರಿ ಸಿಬ್ಬಂದಿ ಸಹನ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

Comments are closed.