ಕರಾವಳಿ

ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತಗುಲಿ ದಂಪತಿ ದಾರುಣ ಮೃತ್ಯು | ಕುಂದಾಪುರದ ಹೆಮ್ಮಾಡಿ ಸುಳ್ಸೆಯಲ್ಲಿ ದುರ್ಘಟನೆ

Pinterest LinkedIn Tumblr

ಪತಿ ಉಳಿಸಲು ಹೋಗಿ ಪತ್ನಿಯೂ ಸಾವು | ಮೆಸ್ಕಾಂ ವಿರುದ್ಧ ಸ್ಥಳೀಯರ ಆಕ್ರೋಷ

ಕುಂದಾಪುರ: ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ಪತಿ ಮೃತಪಟ್ಟಿದ್ದು ಅವರ ರಕ್ಷಣೆಗೆಂದು ಹೋದ ಪತ್ನಿಗೂ ವಿದ್ಯುತ್ ತಗುಲಿ ಇಬ್ಬರು ದಾರುಣವಾಗಿ ಮೃತಪಟ್ಟ ಘಟನೆ ಕುಂದಾಪುರ ತಾಲೂಕಿನ ಹೆಮ್ಮಾಡಿ ಸಮೀಪದ ಸುಳ್ಸೆ ಎಂಬಲ್ಲಿ ಶುಕ್ರವಾರ ನಡೆದಿದೆ.

ಇಲ್ಲಿನ ಸುಳ್ಸೆಯರ ಮನೆ ನಿವಾಸಿ ಮಹಾಬಲ ದೇವಾಡಿಗ (55), ಅವರ ಪತ್ನಿ ಲಕ್ಷ್ಮೀ ದೇವಾಡಿಗ (48) ಮೃತರು.

ಕಟ್ ಬೆಲ್ತೂರು ಗ್ರಾ‌ಪಂ ವ್ಯಾಪ್ತಿಯ ಸುಳ್ಸೆ ನಿವಾಸಿ ಮಹಾಬಲ ಅವರು ಕೂಲಿ ಕಾರ್ಮಿಕರಾಗಿದ್ದು ಮನೆ ಸಮೀಪದ ಕರಣಿಕರಮನೆ ಎಂಬಲ್ಲಿನ ಮನೆಯೊಂದಕ್ಕೆ ಶುಕ್ರವಾರ ಕೆಲಸಕ್ಕೆ ತೆರಳಿದ್ದರು. ಮಧ್ಯಾಹ್ನ 3 ಗಂಟೆಯಾದರೂ ಮನೆಗೆ ಬಾರದಿದ್ದಾಗ ಪತ್ನಿ ಲಕ್ಷ್ಮೀ ಕರಣಿಕರಮನೆ ದಾರಿಯಲ್ಲಿ ಬಂದಿದ್ದು ಈ ವೇಳೆ ಕಾಲು ಹಾದಿ ಬಳಿಯ ತೋಡಿನಲ್ಲಿ ಮಹಾಬಲ‌ ಅವರು ವಿದ್ಯುತ್ ತಂತಿ ಹಿಡಿದುಕೊಂಡ ಸ್ಥಿತಿಯಲ್ಲಿ ಬಿದ್ದುಕೊಂಡಿದ್ದರು. ಲಕ್ಷ್ಮೀ ಕೂಗಿಕೊಂಡು ನೆರೆಕೆರೆಯವರನ್ನು ಕರೆದಿದ್ದು ಅವರು ಬರುವಷ್ಟರೊಳಗೆ ಒದ್ದೆಯಾಗಿದ್ದ ಮರದ ಕೋಲು ಹಿಡಿದು ಗಂಡನನ್ನು ವಿದ್ಯುತ್ ಶಾಕಿ್ನಿಂದ ತಪ್ಪಿಸಲು ಹೋದಾಗ ಮಹಿಳೆಗೂ ವಿದ್ಯುತ್ ಪ್ರವಹಿಸಿ ಸಮೀಪದ ಕೆರೆ ಬಳಿ ಎಸೆಯಲ್ಪಟ್ಟು ಮೃತಪಟ್ಟಿದ್ದಾರೆ. ಮಹಿಳೆ ಸ್ಥಳಕ್ಕೆ ಹೋಗದಂತೆ ಸ್ಥಳೀಯರು ಕೂಗಿಕೊಂಡರು ಕೂಡ ಕ್ಷಣಮಾತ್ರದಲ್ಲಿ ಈ ದುರ್ಘಟನೆ ಸಂಭವಿಸಿದೆ. ತಕ್ಷಣವೇ ನಿವಾಸಿಗಳು ಮೆಸ್ಕಾಂಗೆ ಕರೆ ಮಾಡಿ ವಿದ್ಯುತ್ ಸಂಪರ್ಕ ಕಡಿತಗೊಳಿಸಲು ಮಾಹಿತಿ ನೀಡಿದ ಬಳಿಕ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದಾರೆಂದು ತಿಳಿದುಬಂದಿದೆ. ಮೃತ ದಂಪತಿಗೆ ಇಬ್ಬರು ಮಕ್ಕಳಿದ್ದು, ಓರ್ವ ಪುತ್ರ ಬೆಂಗಳೂರಿನಲ್ಲಿ ಕೆಲಸ‌ ಮಾಡುತ್ತಿದ್ದು, ಓರ್ವ ಪುತ್ರಿ‌ ಮನೆಯಲ್ಲಿದ್ದಾರೆ.

ಮಾಜಿ ಶಾಸಕ ಭೇಟಿ:
ಘಟನಾ ಸ್ಥಳಕ್ಕೆ ಕುಂದಾಪುರ ಡಿವೈಎಸ್ಪಿ ಬೆಳ್ಳಿಯಪ್ಪ ಕೆ.ಯು., ಕುಂದಾಪುರ ವೃತ್ತನಿರೀಕ್ಷಕ ಜಯರಾಮ ಗೌಡ, ಕುಂದಾಪುರ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಸ್ಥಳಕ್ಕೆ ಬೈಂದೂರು ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಭೇಟಿ ನೀಡಿದ್ದು ಕುಟುಂಬಿಕರಿಗೆ ಸಾಂತ್ವಾನ ಹೇಳಿದರು.‌ ಸ್ಥಳದಲ್ಲಿಯೇ ಮೆಸ್ಕಾಂ ಹಿರಿಯ ಅಧಿಕಾರಿಗಳ ಜೊತೆ ದೂರವಾಣಿ ಮೂಲಕ ಮಾತನಾಡಿ, ಇಬ್ಬರ ಸಾವಿಗೆ ನ್ಯಾಯಕೊಡಿಸಿ. ಘಟನೆ ಬಗ್ಗೆ ತನಿಖೆ ನಡೆಸುವುದಲ್ಲದೆ ಸೂಕ್ತ ಪರಿಹಾರ ನೀಡಲು ಸೂಚನೆ ನೀಡಿದರು. ಗ್ರಾ.ಪಂ ಮಾಜಿ ಅಧ್ಯಕ್ಷ ನಾಗರಾಜ ಪುತ್ರನ್, ಸದಸ್ಯರಾದ ಶರತ್ ಕುಮಾರ್ ಶೆಟ್ಟಿ ಬಾಳಿಕೆರೆ, ಸುಮತಿ, ಸ್ಥಳೀಯರಾದ ಶೇಖರ್ ಬಳೆಗಾರ ಭೇಟಿ ನೀಡಿದರು.

ಮೆಸ್ಕಾಂ ವಿರುದ್ಧ ಆಕ್ರೋಷ
ಮಹಾಬಲ ದೇವಾಡಿಗರು ಕೆಲಸ ಮಾಡುವ ಕರಣಿಕರ ಮನೆಯಲ್ಲಿ ಗುರುವಾರ ಅನಂತ ಚತುರ್ದಶಿಯ ಪೂಜಾ‌ ಕೈಂಕರ್ಯಗಳಿದ್ದ ಹಿನ್ನೆಲೆ ಶುಕ್ರವಾರ ಮನೆ ಶುಚಿಗೊಳಿಸಿ ತಮ್ಮ ಮನೆಗೆ ವಾಪಾಸಾಗುತ್ತಿದ್ದಾಗ ಈ ಘಟನೆ ನಡೆದಿದೆ ಎನ್ನಲಾಗಿದೆ. ಶುಕ್ರವಾರ ಬೆಳಿಗ್ಗೆನಿಂದ ಗಾಳಿ-ಮಳೆಯೂ ಇದ್ದು ನಾದುರಸ್ಥಿಯಲ್ಲಿದ್ದ ವಿದ್ಯುತ್ ತಂತಿ ತುಂಡಾಗಿ ಬಿದ್ದಿತ್ತು. ಮೆಸ್ಕಾಂ ಇಲಾಖೆಯ ನಿರ್ಲಕ್ಷವೇ ಈ ದುರಂತಕ್ಕೆ ಕಾರಣ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ‌. ಮಹಾಬಲ ದೇವಾಡಿಗ ಅವರು ಸಾವನ್ನಪ್ಪಿದ ಕಾಲು ದಾರಿಯ ಮೇಲ್ಭಾಗದಲ್ಲಿ ವಿದ್ಯುತ್ ತಂತಿ ಹಾದು ಹೋಗಿದ್ದು, ಅನೇಕ ಕಡೆಗಳಲ್ಲಿ ತುಂಡಾದ ತಂತಿಗಳನ್ನು ಜೋಡಿಸಲಾಗಿದೆ. ಮೆಸ್ಕಾಂ ಇಲಾಖೆಯ ನಿರ್ಲಕ್ಷವನ್ನು ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ನೀಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ. ಇನ್ನು ಇದೆ ದಾರಿಯಲ್ಲಿ ಸುಳ್ಸೆಯಿಂದ ಶಾಲಾ-ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳೂ ಕೂಡ ನಿತ್ಯ ಸಂಚರಿಸುತ್ತಾರೆ ಎಂದು ಸ್ಥಳೀಯರು ಮಾಹಿತಿ ನೀಡಿದರು.

 

Comments are closed.