ಕುಂದಾಪುರ: ಕುಂದಾಪುರ ನಗರದಲ್ಲಿ ಭಾನುವಾರ ಸಂಜೆ ಚೂರಿ ಇರಿತಕ್ಕೊಳಗಾಗಿ ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಸೋಮವಾರ ಮೃತಪಟ್ಟಿದ್ದ ರಾಘವೇಂದ್ರ ಶೇರುಗಾರ್ (42) ಅಲಿಯಾಸ್ ಬನ್ಸ್ ರಾಘು ಕೊಲೆ ಪ್ರಕರಣದ ತನಿಖೆ ಚುರುಕುಗೊಂಡಿದ್ದು ಮೂರು ತಂಡ ರಚಿಸಲಾಗಿದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ವರರಿಷ್ಠಾಧಿಕಾರಿ ತಿಳಿಸಿದ್ದಾರೆ.
ಘಟನ ಸ್ಥಳಕ್ಕೆ ಸೋಮವಾರ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಕೆ. ಅವರು ಭೇಟಿ ನೀಡಿ ಮಾಹಿತಿ ಪಡೆದುಕೊಂಡಿದ್ದಾರೆ. ಡಿವೈಎಸ್ಪಿ ಬೆಳ್ಳಿಯಪ್ಪ, ವೃತ್ತ ನಿರೀಕ್ಷಕ ನಂದ ಕುಮಾರ್, ಉಪನಿರೀಕ್ಷಕರು, ಸಿಬಂದಿ ಭೇಟಿ ನೀಡಿದ್ದಾರೆ.
ಘಟನೆ ಹಿನ್ನೆಲೆ:
ಭಾನುವಾರ ಸಂಜೆ 7.10 ರ ಸುಮಾರಿಗೆ ಚಿಕ್ಕನ್‌ಸಾಲ್ ರಸ್ತೆಯ ಅಂಚೆ ಕಚೇರಿ ಸಮೀಪದ ಡೆಲ್ಲಿ ಬಜಾರ್ ಬಳಿ ರಾಘವೇಂದ್ರ ಹಾಗೂ ವ್ಯಾಗನರ್ ಕಾರಿನಲ್ಲಿ ಬಂದಿದ್ದ ಇನ್ನಿಬ್ಬರು ಅವಾಚ್ಯ ಶಬ್ದಗಳಿಂದ ಬೈದಾಡಿಕೊಂಡಿದ್ದು, ಆ ಪೈಕಿ ಓರ್ವ ರಾಘವೇಂದ್ರ ಅವರ ತೊಡೆಗೆ ಚೂರಿಯಿಂದ ಇರಿದು ಬಳಿಕ ಇಬ್ಬರೂ ಕಾರಿನಲ್ಲಿ ಪರಾರಿಯಾಗಿದ್ದಾರೆ. ಗಂಭೀರ ಗಾಯಗೊಂಡಿದ್ದ ಅವರನ್ನು ಕುಂದಾಪುರದ ಖಾಸಗಿ ಆಸ್ಪತ್ರೆಗೆ, ಬಳಿಕ ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವಿಪರೀತ ರಕ್ತಸ್ರಾವದಿಂದ ಸೋಮವಾರ ಬೆಳಗ್ಗೆ ಚಿಕಿತ್ಸೆಗೆ ಸ್ಪಂದಿಸದೆ ಬನ್ಸ್ ರಾಘು ಸಾವನ್ನಪ್ಪಿದ್ದರು. ಮೇಲ್ನೋಟಕ್ಕೆ ಯಾವುದೋ ಪೂರ್ವ ದ್ವೇಷದಿಂದಲೇ ರಾಘವೇಂದ್ರ ಅವರ ಹತ್ಯೆಗೆ ಸಂಚು ರೂಪಿಸಲಾಗಿದೆ ಎಂದು ಹೇಳಲಾಗುತ್ತಿದ್ದು, ಆರೋಪಿ ಶಿವಮೊಗ್ಗ ಮೂಲದವ ಎಂದು ತಿಳಿದುಬಂದಿದೆ.
ಕುಂದಾಪುರ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.
Comments are closed.