(ವರದಿ- ಯೋಗೀಶ್ ಕುಂಭಾಸಿ)
ಕುಂದಾಪುರ: ಆಟೋ ಚಾಲಕರು-ಮಾಲಕರನ್ನು ಪುರಸಭೆ ಹಾಗೂ ಅಧಿಕಾರಿಗಳು ನಿರ್ಲಕ್ಷ್ಯ ಮಾಡುತ್ತಿದ್ದು ಮೂರ್ನಾಲ್ಕು ದಶಕಗಳಿಂದ ಸೂಕ್ತ ನಿಲ್ದಾಣ ಗುರುತಿಸಿಲ್ಲ, ಇರುವ ನಿಲ್ದಾಣಕ್ಕೆ ಮೂಲಸೌಕರ್ಯ ಒದಗಿಸಿಲ್ಲ. ಈ ಬಗ್ಗೆ ಸಂಬಂದಪಟ್ಟವರಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಸ್ಪಂದನೆಯಿಲ್ಲ. ನಮ್ಮ ಬೇಡಿಕೆ ಬಗೆಹರಿಸದಿದ್ದರೆ ಮುಂದಿನದಿನಗಳಲ್ಲಿ ಕುಂದಾಪುರದಲ್ಲಿ ರಿಲ್ಷಾ ಚಾಲಕರು ಬಂದ್ ನಡೆಸಲಿದ್ದೆವೆ ಎಂದು ಬಿಎಂಎಸ್ ಸ್ಥಾಪಕಾಧ್ಯಕ್ಷ ಶಂಕರ್ ಅಂಕದಕಟ್ಟೆ ಹೇಳಿದರು.
ಕುಂದಾಪುರ ತಾಲೂಕು ಆಟೋರಿಕ್ಷಾ ಮತ್ತು ವಾಹನ ಚಾಲಕರ ಸಂಘಟನೆಗಳ ಸಮನ್ವಯ ಸಮಿತಿ ಕುಂದಾಪುರದಿಂದ ಬುಧವಾರ ಇಲ್ಲಿನ ಪ್ರೆಸ್ ಕ್ಲಬ್‌ನಲ್ಲಿ ನಡೆಸಲಾದ ಸುದ್ಧಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕುಂದಾಪುರ ಪುರಸಭೆ ವ್ಯಾಪ್ತಿಯಲ್ಲಿ 34 ಆಟೋ, ಟ್ಯಾಕ್ಸಿ, ಗೂಡ್ಸ್ ವಾಹನ ನಿಲ್ದಾಣಗಳಿದ್ದು ಜನರಿಗೆ ಸೇವೆ ಒದಗಿಸುತ್ತಿದೆ. ಚಾಲಕರು-ಮಾಲಕರ ಕಷ್ಟದ ಜೀವನ ಅರಿಯದ ಸ್ಥಳೀಯಾಡಳಿತ ಬೇಜವಬ್ದಾರಿ ನೀತಿ ಅನುಸರಿಸುತ್ತಿದ್ದು ಇದನ್ನು ಕೊನೆಗಾಣಿಸಲು ಪಕ್ಷಬೇಧ ಮರೆತು ಮೂರು ಸಂಘಟನೆಗಳು ಒಂದಾಗಿದ್ದೇವೆ ಎಂದರು.
ಆಟೋರಿಕ್ಷಾ, ಟ್ಯಾಕ್ಸಿ, ಮೆಟಾಡೋರ್ ಡ್ರೈವರ್ಸ್ ಅಸೋಸಿಯೇಶನ್ (ಇಂಟಕ್) ಅಧ್ಯಕ್ಷ ಲಕ್ಷ್ಮಣ ಶೆಟ್ಟಿ ಮಾತನಾಡಿ, ರಿಕ್ಷಾ, ಟ್ಯಾಕ್ಸಿ, ಗೂಡ್ಸ್ ವಾಹನಗಳು ಬಡವರ್ಗದವರ ಬದುಕಿನ ದಾರಿ. ಕುಂದಾಪುರದಂತಹ ನಗರಗಳಲ್ಲಿ ನಿಲ್ದಾಣದಲ್ಲಿಯೇ ನಿಂತು ಬಾಡಿಗೆ ಕಾಯಬೇಕಿದೆ. ಆಡಳಿತ ಹಾಗೂ ಅಧಿಕಾರಿ ವ್ಯವಸ್ಥೆ ಅಟೋ ರಿಕ್ಷಾಗಳ ನಿಲ್ದಾಣಕ್ಕೆ ಸ್ಥಳ ನಿಗದಿಪಡಿಸುವಲ್ಲಿ ಇಚ್ಚಾಶಕ್ತಿ ತೋರುತ್ತಿಲ್ಲ. ನಿತ್ಯ ಜನರಿಗೆ ಸೇವೆ ನೀಡುವ ದುಡಿಯುವ ವರ್ಗಕ್ಕೆ ಸ್ಪಂದನೆಯಿಲ್ಲ. ವಿನಾಯಕ ರಿಕ್ಷಾ ನಿಲ್ದಾಣ ಸಹಿತ ಬಹುತೇಕ ಎಲ್ಲಾ ನಿಲ್ದಾಣಗಳು ಖಾಸಗಿ ಜಾಗದ ಎದುರಿಗಿದ್ದು ಎಲ್ಲರೂ ದಾವೆ ಹೂಡಿದರೆ ನಾವೆಲ್ಲಿ ಹೋಗಬೇಕು ಎಂದವರು ಪ್ರಶ್ನಿಸಿದರು.
ಕುಂದಾಪುರ ತಾಲೂಕು ಆಟೋರಿಕ್ಷಾ ಮತ್ತು ವಾಹನ ಚಾಲಕ ಸಂಘ (ಸಿಐಟಿಯು) ಅಧ್ಯಕ್ಷ ರಮೇಶ್ ವಿ. ಮಾತನಾಡಿ, ತಾಲೂಕಿನ ಪ್ರಸಿದ್ಧ ಕೋಡಿ ಪ್ರವಾಸಿ ತಾಣಕ್ಕೆ ಪ್ರವಾಸಿಗರು ತೆರಳಲು ವಿನಾಯಕ ರಿಕ್ಷಾ ನಿಲ್ದಾಣ ಅಗತ್ಯ. ಬದುಕು ಕಟ್ಟಿಕೊಂಡ ಇಲ್ಲಿನ 20-30 ರಿಕ್ಷಾ ಚಾಲಕರ ಬದುಕು ಅತಂತ್ರವಾಗಿದೆ. ಮೊದಲಿನ ಸ್ಥಳಕ್ಕೆ ಸಮೀಪದಲ್ಲದರೂ ಸ್ಥಳ ಗುರುತಿಸಿ ನಿಲ್ದಾಣ ನಿರ್ಮಾಣಕ್ಕೆ ಅವಕಾಶ ಕಲ್ಪಿಸಬೇಕು. ಗ್ರಂಥಾಲಯ ಸಮೀಪ ನಿಲ್ದಾಣಕ್ಕೆ ಸ್ಥಳ ಗುರುತಿಸುವುದು ಯಾವ ರೀತಿಯಲ್ಲೂ ಪೂರಕವಲ್ಲ. ಈ ಬಗ್ಗೆ ಸಹಾಯಕ ಕಮಿಷನರ್, ತಹಶಿಲ್ದಾರ್ ಹಾಗೂ ಪುರಸಭೆ ಮುಖ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ. ಇನ್ನು ಪುರಸಭೆ ವ್ಯಾಪ್ತಿಯಲ್ಲಿ ನಿರ್ದಿಷ್ಟ ರಿಕ್ಷಾ ನಿಲ್ದಾಣ ಗುರುತಿಸಬೇಕೆಂಬ ಹಲವು ವರ್ಷಗಳ ಬೇಡಿಕೆ ಕೂಡ ಈಡೇರಿಲ್ಲ ಎಂದರು.
ಭಾರತೀಯ ಮದ್ದೂರ್ ಸಂಘ (ಬಿಎಂಎಸ್) ಕುಂದಾಪುರದ ಅಧ್ಯಕ್ಷ ಮಂಜುನಾಥ್, ಆಟೋರಿಕ್ಷಾ, ಟ್ಯಾಕ್ಸಿ, ಮೆಟಾಡೋರ್ ಡ್ರೈವರ್ಸ್ ಅಸೋಸಿಯೇಶನ್ (ಇಂಟಕ್) ಕಾರ್ಯದರ್ಶಿ ಉದಯ್ ಕುಂದಾಪುರ ತಾಲೂಕು ಆಟೋರಿಕ್ಷಾ ಮತ್ತು ವಾಹನ ಚಾಲಕ ಸಂಘ (ಸಿಐಟಿಯು) ಪದಾಧಿಕಾರಿಗಳಿದ್ದರು.
ಚಂದ್ರಶೇಖರ್ ಸ್ವಾಗತಿಸಿದರು. ಬಿ.ಎಂ.ಎಸ್ ಗೌರವಾಧ್ಯಕ್ಷ ಸುರೇಶ್ ವಂದಿಸಿದರು.
Comments are closed.