(ವರದಿ- ಯೋಗೀಶ್ ಕುಂಭಾಸಿ)
ಕುಂದಾಪುರ: ಇಲ್ಲಿನ ಚಿಕ್ಕನ್‌ಸಾಲ್ ರಸ್ತೆಯ ಅಂಚೆ ಕಚೇರಿ ಸಮೀಪದ ಡೆಲ್ಲಿ ಬಜಾರ್ ಬಳಿ ರವಿವಾರ ಸಂಜೆ ಚೂರಿ ಇರಿದು ಕುಂದಾಪುರದ ನಿವಾಸಿ ರಾಘವೇಂದ್ರ ಶೇರುಗಾರ್ (42) ಅಲಿಯಾಸ್ ಬನ್ಸ್ ರಾಘು ಎನ್ನುವರನ್ನು ರವಿವಾರ ಸಂಜೆ ಇರಿದು ಕೊಲೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು ಶುಕ್ರವಾರ ಕುಂದಾಪುರ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಶಿವಮೊಗ್ಗ ಮೂಲದ ಶಫಿವುಲ್ಲಾ (40) ಹಾಗೂ ಇಮ್ರಾನ್ (43) ಬಂಧಿತ ಆರೋಪಿಗಳು. ಪ್ರಕರಣದ ಹೆಚ್ಚಿನ ತನಿಖೆಗಾಗಿ ಆರೋಪಿಗಳನ್ನು ಪೊಲೀಸ್ ಕಸ್ಟಡಿಗೆ ನೀಡುವಂತೆ ಪೊಲೀಸರು 2ನೇ ಹೆಚ್ಚುವರಿ ಸಿವಿಲ್ ಮತ್ತು ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಮನವಿ ಮಾಡಿದ ಹಿನ್ನೆಲೆ ಮೂರು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿ ನ್ಯಾಯಾಧೀಶರು ಆದೇಶಿಸಿದ್ದಾರೆ.
ಕುಂದಾಪುರ ಠಾಣೆ ನಿರೀಕ್ಷಕ ನಂದಕುಮಾರ್, ಅಪರಾಧ ವಿಭಾಗದ ಪಿಎಸ್ಐ ಪ್ರಸಾದ್, ಪಿಎಸ್ಐ ವಿನಯ್ ಕೊರ್ಲಹಳ್ಳಿ ಹಾಗೂ ಸಿಬ್ಬಂದಿಗಳ ತಂಡ ಆರೋಪಿಗಳನ್ನು ಮೊದಲಿಗೆ ಕುಂದಾಪುರ ಸಾರ್ವಕನಿಕ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೊಳಪಡಿಸಿ ನಂತರ ನ್ಯಾಯಾಲಯಕ್ಕೆ ಹಾಜರುಪಡಿಸಿದರು.
ಘಟನೆ ಹಿನ್ನೆಲೆ:
ರವಿವಾರ ಸಂಜೆ ಕೃತ್ಯ ನಡೆದ ತಕ್ಷಣವೇ ಪೊಲೀಸ್ ಇಲಾಖೆ ಆರೋಪಿ ಬಂಧನಕ್ಕೆ ಕಾರ್ಯಪ್ರವೃತ್ತರಾಗಿದ್ದು ತದನಂತರ ಉಡುಪಿ ಎಸ್ಪಿ ಡಾ. ಅರುಣ್ ಕೆ. ಅವರು ಮೂರು ವಿಶೇಷ ತನಿಖಾ ತಂಡ ರಚಿಸಿದ್ದರು. ಪೊಲೀಸರ ತಂಡಗಳು ವಿವಿಧ ಆಯಾಮಗಳಲ್ಲಿ ತನಿಖೆ ಮುಂದುವರಿಸಿದ್ದು ಸಿಸಿ ಟಿವಿ ದೃಶ್ಯಾವಳಿ ಸಹಿತ ಅಗತ್ಯ ದಾಖಲೆಗಳನ್ನು ಪರಿಶೀಲಿಸಿದ್ದು ಪ್ರತ್ಯಕ್ಷದರ್ಶಿಗಳಿಂದ ಮಾಹಿತಿ ಕಲೆಹಾಕಿ ಆರೋಪಿಗಳ ಪತ್ತೆಗೆ ಶಿವಮೊಗ್ಗ, ಬೆಂಗಳೂರು ಸಹಿತ ವಿವಿಧ ಕಡೆಗಳಿಗೆ ತನಿಖಾ ತಂಡ ತೆರಳಿತ್ತು.
Comments are closed.