ಪ್ರಮುಖ ವರದಿಗಳು

ಬಿಹಾರದಲ್ಲಿ ಹಳಿ ತಪ್ಪಿದ ದೆಹಲಿ-ಕಾಮಾಕ್ಯ ರೈಲು: ನಾಲ್ವರು ಮೃತ್ಯು, 70ಕ್ಕೂ ಅಧಿಕ ಮಂದಿಗೆ ಗಾಯ

Pinterest LinkedIn Tumblr

ಬಿಹಾರ: ಬಿಹಾರದಲ್ಲಿ ರಾತ್ರಿ ರೈಲಿನ 6 ಭೋಗಿ ಹಳಿ ತಪ್ಪಿದ್ದು ನಾಲ್ಕು ಮಂದಿ ಸಾವನ್ನಪ್ಪಿದ್ದು, 70 ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಬಿಹಾರದ ಬಕ್ಸರ್ ಜಿಲ್ಲೆಯ ಬಳಿ ದೆಹಲಿಯಿಂದ ಗುವಾಹಟಿಗೆ ಹೊರಟಿದ್ದ ನಾರ್ತ್ ಈಸ್ಟ್ ಎಕ್ಸ್ ಪ್ರೆಸ್‌ ರೈಲು 12506 ನಂಬರಿನ ರೈಲು ಹಳಿ ತಪ್ಪಿದೆ.

ಬಿಹಾರದ ರಘುನಾಥಪುರ ರೈಲು ನಿಲ್ದಾಣದ ಬಳಿ ಬುಧವಾರ ರಾತ್ರಿ ಈ ಘಟನೆ ನಡೆದಿದೆ. ಈ ಅಪಘಾತದಲ್ಲಿ 70ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿದ್ದು, ದುರಾದೃಷ್ಟವಶಾತ್ ನಾಲ್ವರು ಸಾವನ್ನಪ್ಪಿದ್ದಾರೆ ಎಂದು ರೈಲ್ವೇ ಇಲಾಖೆ ತಿಳಿಸಿದೆ.

ದೆಹಲಿಯ ಆನಂದ್ ವಿಹಾರ್‌ ನಿಲ್ದಾಣದಿಂದ ರೈಲು ಅಸ್ಸಾಂನ ಗುವಾಹಟಿಯ ಕಾಮಾಖ್ಯ ಜಂಕ್ಷನ್ ತೆರಳುವ ಸಂದರ್ಭದಲ್ಲಿ ಅವಘಡ ಸಂಭವಿಸಿ, ಆರು ಎಸಿ ಬೋಗಿಗಳು ಪಲ್ಟಿಯಾಗಿ ರೈಲ್ವೇ ಹಳಿ ಮೇಲೆ ಬಿದ್ದಿದೆ. ತಕ್ಷಣವೇ ರೈಲ್ವೆ ಮತ್ತು ನಿರ್ವಹಣಾ ಅಧಿಕಾರಿಗಳೊಂದಿಗೆ ವೈದ್ಯಕೀಯ ತಂಡ ಸ್ಥಳಕ್ಕೆ ತೆರಳಿದ್ದು, ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸ್ಥಳೀಯ ಬಕ್ಸರ್ ಸಂಸದರೂ ಆಗಿರುವ ಕೇಂದ್ರ ಸಚಿವ ಅಶ್ವಿನಿ ಕುಮಾರ್ ಚೌಬೆ ಅವರು ರೈಲು ಹಳಿತಪ್ಪಿದ ಘಟನಾ ಸ್ಥಳಕ್ಕೆ ಹೋಗಿ ಮಾಹಿತಿ ಪಡೆದಿದ್ದಾರೆ.

ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದ್ದು, ತಕ್ಷಣವೇ ಹಳಿಯನ್ನು ಮೊದಲಿನ ಸ್ಥಿತಿಗೆ ತರಲಾಗುವುದು. ಹಳಿ ತಪ್ಪಲು ಮೂಲ ಕಾರಣವೇನೆಂದು ತಿಳಿಯುತ್ತೇವೆಂದು ರೈಲ್ವೇ ಸಚಿವ ಅಶ್ವಿನ್ ವೈಷ್ಣವ್ ಟ್ವೀಟ್ ಮಾಡಿದ್ದಾರೆ.

Comments are closed.