ಮೈಸೂರು: ವಿಶ್ವವಿಖ್ಯಾತ 414ನೇ ಮೈಸೂರು ದಸರಾ ಮಹೋತ್ಸವಕ್ಕೆ ಅ.15 ಭಾನುವಾರ ಅದ್ಧೂರಿ ಚಾಲನೆ ಸಿಕ್ಕಿದೆ. ಶುಭ ವೃಶ್ಚಿಕ ಲಗ್ನದಲ್ಲಿ ನಾಡದೇವಿ ತಾಯಿ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸುವ ಮೂಲಕ ಸಂಗೀತ ನಿರ್ದೇಶಕ ಹಂಸಲೇಖ ಚಾಲನೆ ನೀಡಿದ್ದಾರೆ.
ಇದಕ್ಕೂ ಮೊದಲು ಹಂಸಲೇಖ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ ಮಹದೇವಪ್ಪ, ಸಂಸದ ಪ್ರತಾಪ್ ಸಿಂಹ ಸೇರಿದಂತೆ ಹಲವಾರು ಗಣ್ಯರು ಅಲಂಕೃತ ಬೆಳ್ಳಿ ರಥದಲ್ಲಿ ಆಸೀನಳಾಗಿದ್ದ ಪಂಚಲೋಹದ ಚಾಮುಂಡೇಶ್ವರಿ ದೇವಿಯ ಉತ್ಸವ ಮೂರ್ತಿಗೆ ಪುಷ್ಪಾರ್ಚನೆ ಸಲ್ಲಿಸಿದರು.
ಬಳಿಕ ಸಭಾ ಕಾರ್ಯಕ್ರಮದಲ್ಲಿ ದೀಪ ಬೆಳಗಿಸುವ ಮೂಲಕ ಸಂಗೀತ ನಿರ್ದೇಶಕ ಹಂಸಲೇಖ ಅವರು ದಸರಗೆ ಚಾಲನೆ ನೀಡಿದರು. ಈ ವೇಳೆ ನಾಡಗೀತೆಯನ್ನು ಹಾಡಿ ಗೌರವ ಸಲ್ಲಿಸಲಾಯಿತು. ಸಚಿವರಾದ ಕೆ. ವೆಂಕಟೇಶ್ ,ಕೆ. ಜೆ. ಜಾರ್ಜ್, ಶಿವರಾಜ್ ತಂಗಡಗಿ, ಸಂಸದ ಪ್ರತಾಪ್ ಸಿಂಹ, ಮೈಸೂರು ಮೇಯರ್ ಶಿವಕುಮಾರ್, ಶಾಸಕ ಜಿ.ಟಿ. ದೇವೇಗೌಡ ಸೇರಿದಂತೆ ಇತರ ಗಣ್ಯರು ಭಾಗಿಯಾಗಿದ್ದರು. ಉದ್ಘಾಟನಾ ಕಾರ್ಯಕ್ರಮಕ್ಕೂ ಮೊದಲು ಚಾಮುಂಡಿ ಪೂಜೆ, ಕಂಕಣಧಾರಣೆ ಮೊದಲಾದ ವಿಧಿವಿಧಾನಗಳು ನಡೆದವು.
ಮೈಸೂರಿನ ಚಾಮುಂಡಿಬೆಟ್ಟದಲ್ಲಿ ವಿಶ್ವವಿಖ್ಯಾತ ದಸರಾಗೆ ಚಾಲನೆ ನೀಡಿದ ಬಳಿಕ ಮಾತನಾಡಿದ ಹಂಸಲೇಖ, ಪೂಜ್ಯ ಕನ್ನಡಕ್ಕೆ, ಪೂಜ್ಯ ಕನ್ನಡಿಗರಿಗೆ ನನ್ನ ನಮನ. ಈ ಅವಕಾಶಕ್ಕಾಗಿ ನಾನು ಸಾವಿರ ಮೆಟ್ಟಿಲು ಹತ್ತಿ ಬಂದಿದ್ದೇನೆ ಎಂದರು. ಯಾರು ಯಾರನ್ನು ನೆನೆಯೋಣಾ? ಯಾರು ಯಾರನ್ನು ನೆನೆಯಲಿ, ಕನ್ನಡ ದೀಪ, ಸಮೃದ್ದಿ ಅಭಿವೃದ್ಧಿ ಶಾಂತಿ ಸಮೃದ್ದಿಯ ನನ್ನ ಮಾತಿನ ಪರಿವಿಧಿ. ಪೂಜ್ಯ ಕನ್ನಡಿಗರಿಗೆ ಪೂಜ್ಯ ಕನ್ನಡಕ್ಕೆ ಈ ದೇವಾಲಯ ಪ್ರೇಮಾಲಯಕ್ಕೆ ಸಾವಿರದ ಶರಣುಗಳು ಎಂದು ಹೇಳಿದರು.
ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ ಇಂದಿನಿಂದ ಅ.24ರವರೆಗೂ ನಡೆಯಲಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಕಾನೂನು ಸುವ್ಯವಸ್ಥೆ ಕೈಗೊಳ್ಳಲಾಗಿದೆ.
Comments are closed.