ಬಂಟ್ವಾಳ: ಪ್ರಯಾಣಿಕನೋರ್ವ ಚೀಲದಲ್ಲಿ ಕೋಳಿ ಮಾಂಸ ಹಿಡಿದುಕೊಂಡು ಬಸ್ ಹತ್ತಿದ ಕಾರಣಕ್ಕಾಗಿ ಆತನಿಗೆ ನಿರ್ವಾಹಕ ಅವ್ಯಾಚ್ಚ ಶಬ್ದದಿಂದ ಬೈದುದಲ್ಲದೆ, ಚಾಲಕ ಪ್ರಯಾಣಿಕರನ್ನು ಕೂರಿಸಿಕೊಂಡು ಪೋಲಿಸ್ ಠಾಣೆಗೆ ಕೊಂಡೊಯ್ದ ಘಟನೆ ನಡೆದಿದೆ.
ಸುರೇಶ್ ಎಂಬ ಪ್ರಯಾಣಿಕ ತುಂಬೆಯಲ್ಲಿ ಸ್ಟೇಟ್ ಬ್ಯಾಂಕ್ ಪುತ್ತೂರು ಕೆ.ಎಸ್.ಆರ್.ಟಿ.ಸಿ.ಬಸ್ ಹತ್ತಿದ್ದಾರೆ. ಈ ವೇಳೆ ವೇಳೆ ಬಸ್ ನಿರ್ವಾಹಕ ಟಿಕೆಟ್ ಪಡೆಯಲು ಬಂದಾಗ ಈತನ ಕೈಯಲ್ಲಿ ಚೀಲವೊಂದನ್ನು ಕಂಡು ಈ ಬಗ್ಗೆ ವಿಚಾರಿಸಿದ್ದಾನೆ. ಪ್ರಯಾಣಿಕ ಕೋಳಿ ಮಾಂಸ ಎಂದು ತಿಳಿಸಿದಾಗ ಪ್ರಯಾಣಿಕನನ್ನು ಬಸ್ ನಿಂದ ಇಳಿಯುವಂತೆ ಒತ್ತಾಯಿಸಿದ್ದಾನೆ. ಕೋಳಿ ಮಾಂಸ ಬಸ್ ನಲ್ಲಿ ತರಲು ಅವಕಾಶವಿಲ್ಲ ಎಂಬ ವಾದ ನಿರ್ವಾಹಕನದ್ದು, ಆದರೆ ಕೂಲಿ ಕಾರ್ಮಿಕ ಬಸ್ ನಿಂದ ಇಳಿಯಲು ಒಪ್ಪಲಿಲ್ಲ.ಇವರಿಬ್ಬರ ನಡುವೆ ಕೆಲ ಹೊತ್ತು ವಾಗ್ವಾದ ನಡೆದ ಬಳಿಕ ನಿರ್ವಾಹಕ ಪ್ರಯಾಣಿಕನಿಗೆ ನಿಂದಿಸಿದ್ದಾನೆ ಎಂದು ಹೇಳಲಾಗಿದೆ.
ಕಡೆಗೂ ಪ್ರಯಾಣಿಕ ಬಸ್ ನಿಂದ ಇಳಿಯದ ಕಾರಣಕ್ಕಾಗಿ ಚಾಲಕ ಪ್ರಯಾಣಿಕರು ತುಂಬಿದ್ದ ಬಸ್ಸನ್ನೇ ಪೋಲೀಸ್ ಠಾಣೆಗೆ ತಂದು ಪ್ರಯಾಣಿಕನನ್ನು ಎಳೆದು ಇಳಿಸಿದ್ದಾನೆ. ಈ ವೇಳೆ ಠಾಣೆಯಲ್ಲಿದ್ದ ಎಸ್.ಐ.ರಾಮಕೃಷ್ಣ ಅವರು ಕೆ.ಎಸ್. ಆರ್.ಟಿ.ಸಿ.ಬಸ್ ಚಾಲಕ ಮತ್ತು ನಿರ್ವಾಹಕನಿಗೆ ಬುದ್ದಿ ಮಾತು ಹೇಳಿದ್ದಾರೆ.
ಕೂಲಿ ಕಾರ್ಮಿಕರು ಬಸ್ ನಲ್ಲಿ ಮಾಂಸ, ಮೀನು ಕೊಂಡುಹೋಗಲು ಅವಕಾಶ ವಿಲ್ಲ ಎಂದಾದರೆ ಮತ್ತೆ ಹೇಗೆ ಕೊಂಡುಹೋಗುವುದು ಎಂಬ ಪ್ರಶ್ನೆಯನ್ನು ಪ್ರಯಾಣಿಕ ಮಾಡಿದ್ದಾನೆ. ಒಂದು ಕೆ.ಜಿ.ಕೋಳಿಗೋಸ್ಕರ ಕಾರು ,ರಿಕ್ಷಾ ಬಾಡಿಗೆ ಮಾಡಿಕೊಂಡು ಹೋಗಬೇಕಾ ಎಂಬ ಪ್ರಶ್ನೆಯನ್ನು ಕೇಳಿದ್ದಾರೆ. ಬಡವರು ಕೋಳಿ ಮಾಂಸ ಕೊಂಡು ಹೋದರೆ ಅವರನ್ನು ಪೋಲೀಸ್ ಠಾಣೆಗೆ ಕರೆದುಕೊಂಡು ಹೋಗುವುದು ಎಷ್ಟು ಸರಿ ಎಂಬ ಪ್ರಶ್ನೆ ಸಾರ್ವಜನಿಕರದ್ದಾಗಿದೆ. ನಿರ್ವಾಹಕ ಚಾಲಕರ ಇಂತಹ ನಡೆಯ ಬಗ್ಗೆ ಅಕ್ರೋಶಗಳು ವ್ಯಕ್ತವಾಗಿದೆ.
ಬಸ್ ನಲ್ಲಿ ಕೋಳಿ, ಮೀನು ಮಾಂಸ ತರುವಂತಿಲ್ಲ. ಮಾಂಸ ಇತರರಿಗೆ ವಾಸನೆ ಬರುತ್ತದೆ, ಇತರ ಪ್ರಯಾಣಿಕರಿಗೆ ತೊಂದರೆಯಾಗುತ್ತದೆ ಎಂಬ ನಿಟ್ಟಿನಲ್ಲಿ ನಿಗಮ ಅದೇಶ ಮಾಡಿದೆ ಎಂದು ಕೆ.ಎಸ್.ಆರ್.ಟಿ.ಸಿ. ಬಂಟ್ವಾಳ ವಿಭಾಗದ ವಿಭಾಗೀಯ ಅಧಿಕಾರಿ ಶ್ರೀಶ ಭಟ್ ಅವರು ಮಾಹಿತಿ ನೀಡಿದ್ದಾರೆ.
Comments are closed.