ಕುಂದಾಪುರ: ಅಂಗವಿಕಲರ ಪ್ರಮಾಣಪತ್ರ, ಮಾಸಾಶನ, ಚಿಕಿತ್ಸೆ, ತಪಾಸಣೆ ಸೇರಿದಂತೆ ಯಾವುದೇ ವಿಷಯದ ಕುರಿತು ಅಧಿಕಾರಿಗಳು ನಿರ್ಲಕ್ಷ್ಯ, ಅಸಡ್ಡೆ ಮಾಡಬಾರದು. ಅಂಗವಿಕಲರಿಗೆ ಸಂಬಂಧಪಟ್ಟ ಕಡತಗಳ ವಿಲೇವಾರಿ ಶೀಘ್ರಗತಿಯಲ್ಲಿ ನಡೆಯಬೇಕು ಎಂದು ಶಾಸಕ ಎ. ಕಿರಣ್ ಕುಮಾರ್ ಕೊಡ್ಗಿ ಹೇಳಿದ್ದಾರೆ.
ಅವರು ಸೋಮವಾರ ಕುಂದಾಪುರ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಕುಂದಾಪುರ ಹಾಗೂ ಬೈಂದೂರು ಕ್ಷೇತ್ರದ ಅಂಗವೈಕಲ್ಯ ಇರುವ ಮಕ್ಕಳ ಪಾಲಕರ ಸಮಾಲೋಚನಾ ಸಭೆಯಲ್ಲಿ ಮಾತನಾಡಿದರು.
ಯಾವುದೇ ಲೋಪದಿಂದ ಸರಕಾರಿ ವ್ಯವಸ್ಥೆಯಲ್ಲಿ ಕೆಲವು ಅರ್ಹರಿಗೆ ಸೌಲಭ್ಯ ದೊರೆಯದಂತಾಗಬಾರದು. ಜಿಲ್ಲಾ ಅಂಗವಿಕಲ ಪುನರ್ವಸತಿ ಕೇಂದ್ರ ಮೂಲಕ ನೀಡುತ್ತಿದ್ದ ಚಿಕಿತ್ಸೆಯನ್ನು ಮುಂದುವರಿಸಬೇಕು. ಥೆರಫಿ ಸೆಂಟರ್‌ನಲ್ಲಿ ಸಮಯ ನಿಗಧಿ ಮಾಡಿಕೊಂಡು ಕೆಲಸ ಮಾಡಬೇಕು. ದೂರದಿಂದ ಬರುವವರಿಗೆ ವೈದ್ಯರಿಲ್ಲ ಎಂದು ಎನ್ನುವಂತಾಗಬಾರದು. ಆರೋಗ್ಯ, ಶಿಕ್ಷಣ ವಿಕಲಚೇತನ ಇಲಾಖೆ ಸಭೆ ನಡೆಸಿ, ಅಂಗವಿಕಲ ಮಕ್ಕಳ ಸಮಸ್ಯೆ ಪರಿಹಾರ ಮಾಡುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಬೇಕು ಎಂದರು.
ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಮಾತನಾಡಿ, ಬೈಂದೂರು ಕ್ಷೇತ್ರದಲ್ಲಿ ಅಂಗವಿಕಲರು ಇರುವ ಎರಡು ಮನೆಗಳಿಗೆ ಹೊಳೆ ದಾಟಲು ಸಮಸ್ಯೆ ಅನುಭವಿಸುತ್ತಿರುವ ವಿಚಾರ ಗಮನಕ್ಕೆ ಬಂದಿದೆ. ಅಲ್ಲಿಗೆ ಸೇತುವೆ ನಿರ್ಮಾಣಕ್ಕೆ ಪ್ರಯತ್ನ ನಡೆದಿದೆ ಎಂದರು.
ತಾಲೂಕು ಆರೋಗ್ಯಾಧಿಕಾರಿ ಡಾ. ಪ್ರೇಮಾನಂದ, ಅಂಗವಿಕಲ ಮಕ್ಕಳಿಗೆ ಅಗತ್ಯವಿರುವ ಔಷಧಗಳ ಚೀಟಿಯಲ್ಲಿ ಜೆನೆರಿಕ್ ಹೆಸರು ಬರೆಸಿದರೆ ಅಂತಹ ಔಷಧಗಳನ್ನು ಸರಕಾರಿ ಆಸ್ಪತ್ರೆಯಿಂದ ನೀಡಲಾಗುತ್ತದೆ. ಲಭ್ಯವಿಲ್ಲದಿದ್ದರೆ ಖರೀದಿಸಿ ನೀಡಲು ಅವಕಾಶ ಇದೆ ಎಂದರು.
ಜಿಲ್ಲಾ ಆರೋಗ್ಯಾಧಿಕಾರಿ ಡಾ. ನಾಗಭೂಷಣ ಉಡುಪ, ಅಂಗವಿಕಲರನ್ನು ಚಿಕಿತ್ಸೆಗೆ, ತಪಾಸಣೆಗೆ ಕರೆತರಲು ೧೦೮ ಅಂಬುಲೆನ್ಸ್ ಸೌಲಭ್ಯ ಬಳಸಿಕೊಳ್ಳಬಹುದು. ಈ ಬಗ್ಗೆ ಸೂಚನೆ ನೀಡಲಾಗಿದೆ. ಎಂಡೋ ಬಾಧಿತರು ಯಾವುದೇ ಖಾಸಗಿ ವೈದ್ಯರು, ಖಾಸಗಿ ಆಸ್ಪತ್ರೆಯಲ್ಲಿ ತಪಾಸಣೆ ನಡೆಸಿದರೂ ಬಿಲ್‌ಗೆ ಸರಕಾರಿ ಆಸ್ಪತ್ರೆ ವೈದ್ಯರ ಬಳಿ ದೃಢೀಕರಣ ಪಡೆದರೆ ಅದನ್ನು ಸರಕಾರದಿಂದ ಪಾವತಿಸಲಾಗುವುದು. ಫಿಸಿಯೋಥೆರಪಿಗೆ ಜಿಲ್ಲೆಯ ೧೮ ಕಡೆ ಕೇಂದ್ರಗಳನ್ನು ತೆರೆಯಲಾಗುವುದು. ತಲಶ್ಶೇಮಿಯಾಕ್ಕೆ ಬೆಂಗಳೂರಿನಲ್ಲಿ ಮಾತ್ರ ತಪಾಸಣೆ ನಡೆಸಲಾಗುತ್ತಿತ್ತು. ಈಗ ಕೆಎಂಸಿ ಜತೆ ಮಾತುಕತೆ ನಡೆಸಿದ್ದು ಇಲ್ಲಿಯೂ ತಪಾಸಣೆಗೆ ಒಳಗಾಗಬಹುದು ಎಂದರು.
ಉಡುಪಿ ಜಿಲ್ಲೆಯಲ್ಲಿ ಮಕ್ಕಳೊಂದಿಗೆ ಕೆಲಸ ಮಾಡುವ ಸಂಸ್ಥೆಯಾದ ಸಿಡಬ್ಲ್ಯುಸಿ ವತಿಯಿಂದ ಕುಂದಾಪುರ ಹಾಗೂ ಬೈಂದೂರು ತಾಲೂಕಿನ ವಿವಿಧ ಗ್ರಾಮ ಪಂಚಾಯತ್‌ಗಳಲ್ಲಿ ಅಂಗವೈಕಲ್ಯ ಇರುವ ೧೮ ವರ್ಷದೊಳಗಿನ ಮಕ್ಕಳ ಪರಿಸ್ಥಿತಿಯ ಅವಲೋಕನ ನಡೆಸಿದೆವು. ಅವರ ಪರಿಸ್ಥಿತಿಯ ಬಗ್ಗೆ ತಾಲೂಕು ಮಟ್ಟದಲ್ಲಿ ಕುಂದಾಪುರ ಹಾಗೂ ಬೈಂದೂರು ಕ್ಷೇತ್ರದ ಶಾಸಕರ ಉಪಸ್ಥಿತಿಯಲ್ಲಿ ಸಂಬಂಧಪಟ್ಟ ಅಽಕಾರಿಗಳ ಭಾಗವಹಿಸುವಿಕೆಯಲ್ಲಿ ಅಂಗವಿಕಲತೆಯಿರುವ ಮಕ್ಕಳ ಪೋಷಕರೊಂದಿಗೆ ತಾಲೂಕು ಮಟ್ಟದ ಸಮಾಲೋಚನೆ ಸಭೆಯನ್ನು ಆಯೋಜಿಸಲಾಗಿದೆ ಎಂದು ಸಂಯೋಜಕಿ ಕೃಪಾ ಎಂ. ತಿಳಿಸಿದರು.
ಕುಂದಾಪುರ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಶಶಿಧರ್, ಬೈಂದೂರು ಇಒ ಭಾರತಿ, ಜಿಲ್ಲಾ ಅಂಗವಿಕಲ ಪುನರ್ವಸತಿ ಕೇಂದ್ರದ ನಿರ್ದೇಶಕಿ ರತ್ನಾ, ವಿಕಲಚೇತನ ಇಲಾಖೆ ಉಪನಿರ್ದೇಶಕಿ ಶ್ಯಾಮಲಾ, ಬಸ್ರೂರು ಪಂಚಾಯತ್ ಉಪಾಧ್ಯಕ್ಷೆ ಭಾಗೀರಥಿ ಉಪಸ್ಥಿತರಿದ್ದರು. ಸಿಡಬ್ಲ್ಯುಸಿಯ ಶ್ರೀನಿವಾಸ ಗಾಣಿಗ ಪ್ರಸ್ತಾವಿಸಿದರು. ಕಾರ್ಯಕ್ರಮ ಸಂಯೋಜಕಿ ಕೃಪಾ ಭಟ್ ವಿಕಲಚೇತನ ಮಕ್ಕಳ ವಿವರ ನೀಡಿದರು.
ಸಭೆಯಲ್ಲಿನ ಪ್ರಮುಖ ಬೇಡಿಕೆಗಳು:
ಅಂಗವಿಕಲತೆಗೆ ಅನುಗುಣವಾಗಿ ಮಾಶಾಸನ ಹೆಚ್ಚಳ. ಅಂಗವೈಫಲ್ಯತೆ ಮಕ್ಕಳಿಗೆ ಉಚಿತ ಪ್ಯಾಡ್ ವಿತರಣೆ.
ವಿಶೇಷ ಮಕ್ಕಳಿಗೆ ವಿಶೇಷ ಬಜೆಟ್ ಮಂಡನೆ, ವಿಕಲಚೇತನ ಮಕ್ಕಳಿಗೆ ಮನೆಯಲ್ಲೇ ತರಬೇತಿ ಶಿಕ್ಷಣ. ಆನ್‌ಲೈನ್ ಮೂಲಕ ಶಿಕ್ಷಣ ತರಬೇತಿ ನೀಡಬೇಕು.
ಥೆರಫಿ ಇರುವ ಮಕ್ಕಳ ಮನೆಗೆ ಹೋಗಿ ಥೆರಫಿ ಚಿಕಿತ್ಸೆ ನೀಡಬೇಕು. ಅಂಗವಿಕಲ ಮಕ್ಕಳಿಗೆ ವಿವಿಧ ನಮೂನೆ ಥೆರಫಿ ಅವಶ್ಯವಿದ್ದು, ಗ್ರಾಮ ಮಟ್ಟದಲ್ಲಿ ಥೆರಫಿ ಸೆಂಟರ್ ತೆರೆಯಬೇಕು. ಅಲ್ಲದೆ ಪೌಷ್ಟಿಕ ಆಹಾರ ಪೂರೈಕೆ, ನಿರಾಮಯ ವಿಮಾ ಯೋಜನೆ ಮೊತ್ತ ಹೆಚ್ಚಳ, ಎಪಿಎಲ್ ಮಕ್ಕಳಿಗೂ ವೇತನ ನೀಡಬೇಕು.
ವಿಶೇಷ ಚೇತನ ಅಥವಾ ವಿಕಲಾಂಗ ಮಕ್ಕಳ ಪೋಷಕರೊಟ್ಟಿಗೆ ನಡೆದ ಸಮಾಲೋಚನಾ ಸಭೆಯಲ್ಲಿ ಒಬ್ಬೊಬ್ಬ ಪೋಷಕರದ್ದೂ ತಮ್ಮ ಕಣ್ಣಿರ ಕತೆ ವ್ಯಥೆ ಬಿಚ್ಚಿಟ್ಟರು. ಮಗ ವಿಕಲಾಂಗ, ಪತಿ ಮಾನಸಿಕ ಅಸ್ವಸ್ಥ. ೧೦ನೇ ತರಗತಿ ತನಕ ಓದಿದ್ದು ಮಗನಿಗೊಂದು ಉದ್ಯೋಗ ಕೊಟ್ಟರೆ ನಾವು ಹೇಗಾದರೂ ಬದುಕುತ್ತೇವೆ ಎಂದು ಓರ್ವ ಮಹಿಳೆ ಹೇಳಿದರು. ಮಗನಿಗೆ ನಡೆಯಲಾಗಲ್ಲ. ಬಾಡಿಗೆ ಮನೆಯಲ್ಲಿದ್ದು, ಔಷಧ ಖರ್ಚು ತಿಂಗಳಿಗೆ ಸಾವಿರಾರೂ ರೂ. ಆಗುತ್ತಿದ್ದು ಬದುಕು ಕಷ್ಟವಾಗಿತ್ತದೆ ಎಂದು ಹಕ್ಲಾಡಿ ಗ್ರಾಮದ ತಾಯಿ ನೊಂದು ನುಡಿದರು. ನಮ್ಮ ಮಗು ಬೆಳವಣಿಗೆ ಇಲ್ಲ ಅಪ್ಪ ಅಮ್ಮ ಬಿಟ್ಟರೆ ಮಾತು ಬರೋದಿಲ್ಲ ಎಂದು ಕಟ್ಬೇಲ್ತೂರು ತಾಯಿ ನೋವು ಹೊರಹಾಕಿದರು. ನನ್ನ ಮಗುವಿಗೆ ಚಿಕಿತ್ಸೆಗೆ ಕೋಣಂದೂರಿಗೆ ಹೋಗಬೇಕು ವಾಹನ ಬಾಡಿಗೆಯೇ ಸಾವಿರಾರು ರೂ ಆಗುತ್ತೆ. ಸ್ಪೀಚ್ ಥೆರಫಿ ವೈದ್ಯರು ಸಲಹೆ ಮಾಡಿದ್ದು, ಕೆರಾಡಿಯಿಂದ ಆಟೋಬಾಡಿಗೆ ಮಾಡಿಕೊಂಡು ಬರಬೇಕು ವೈದ್ಯರಿದ್ದರಾಯಿತು. ಇಲ್ಲದಿದ್ದರೆ ಬಂದ ಖರ್ಚು ವ್ಯರ್ಥ ಎಂದರು.
Comments are closed.