ಕರಾವಳಿ

ಬಿಸಿಯೂಟ ನೌಕರರ ಮುಷ್ಕರ; ನ.7-8 ಉಡುಪಿ ಜಿಲ್ಲಾದ್ಯಂತ ಬಿಸಿಯೂಟ ಬಂದ್

Pinterest LinkedIn Tumblr

ಕುಂದಾಪುರ: ಅ. 30ರಿಂದ ಬಿಸಿಯೂಟ ಬಂದ್ ಮಾಡಲು ಯೋಜಿಸಿ ವಿಧಾನಸೌಧ ಚಲೋ, ಅನಿರ್ದಿಷ್ಟಾವಧಿ ಹೋರಾಟ ನಡೆಸುತ್ತಿರುವ ಬಿಸಿಯೂಟ ನೌಕರರೊಂದಿಗೆ ಉಡುಪಿ ಜಿಲ್ಲಾ ಬಿಸಿಯೂಟ ನೌಕರರು ನ.7 ಹಾಗೂ 8 ರಂದು ಬಿಸಿಯೂಟ ಬಂದ್ ಮಾಡಿ ಬೆಂಗಳೂರಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಭಾಗವಹಿಸುವುದಾಗಿ ಅಕ್ಷರ ದಾಸೋಹ ನೌಕರರ ಸಂಘ (ಸಿಐಟಿಯು) ಜಿಲ್ಲಾಧ್ಯಕ್ಷೆ ಜಯಶ್ರೀ, ಬೈಂದೂರು ತಾಲೂಕು ಅಧ್ಯಕ್ಷೆ ಸಿಂಗಾರಿ ನಾವುಂದ, ಕಾರ್ಯದರ್ಶಿ ನಾಗರತ್ನಾ ತಿಳಿಸಿದ್ದಾರೆ.

ಪ್ರತಿಭಟನೆಗೆ ಸಹಕಾರ:
ಬಿಸಿಯೂಟ ನೌಕರರು ಹಲವಾರು ವರ್ಷಗಳಿಂದ ಬೇಡಿಕೆಗಳ ಬಗ್ಗೆ ಮನವಿ ನೀಡಲಾಗಿದೆ. ಆ. 16, 17 ರಂದು ಬೆಂಗಳೂರಿನಲ್ಲಿ ನಡೆದ ಹೋರಾಟ, ಕಳೆದ ವರ್ಷ ಡಿ.28ರಂದು ಬೆಳಗಾವಿ ಸುವರ್ಣಸೌಧ ಎದುರು ನಡೆದ ಹೋರಾಟ, ಬೆಂಗಳೂರಿನಲ್ಲಿ ಫೆ. 13, 14, 15ರಂದು ನಡೆದ ಹೋರಾಟದ ಸಂದರ್ಭದಲ್ಲಿ ಈ ಸಮಸ್ಯೆ ಬಗೆಹರಿಸುವುವ ನಿಟ್ಟಿನಲ್ಲಿ ಭರವಸೆ ನೀಡಲಾಗಿತ್ತು. ಆದರೆ ಇದುವರೆಗೂ ಯಾವುದೇ ಸಮಸ್ಯೆಗೆ ಪರಿಹಾರ ಸಿಗದೆ ಇರುವ ಕಾರಣಕ್ಕೆ ಅನಿವಾರ್ಯವಾಗಿ ಅ. 30 ರಿಂದ ಬಿಸಿಯೂಟ ನೌಕರರು ತಮ್ಮ ಕೆಲಸ ಸ್ಥಗಿತಗೊಳಿಸಿ ಬೆಂಗಳೂರಿನಲ್ಲಿ ಅನಿರ್ದಿಷ್ಟಾವಧಿ ಹೋರಾಟ ನಡೆಯುತ್ತಿದೆ. ಉಡುಪಿ ಜಿಲ್ಲೆಯಲ್ಲಿ ನ.7-8 ರಂದು ಜಿಲ್ಲೆಯ ಎಲ್ಲಾ ನೌಕರರು ಬಿಸಿಯೂಟ ಬಂದ್ ಮಾಡಿ ಹೋರಾಟದಲ್ಲಿ ಪಾಲ್ಗೊಳ್ಳುತ್ತಿದ್ದಾರೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಬೇಡಿಕೆಗಳು:
ಅಕ್ಷರ ದಾಸೋಹ ಯೋಜನೆಯನ್ನು ಸಂಪೂರ್ಣವಾಗಿ ಶಿಕ್ಷಣ ಇಲಾಖೆಯಡಿಯಲ್ಲಿಯೇ ನಡೆಯಬೇಕು. ಸಾದಿಲ್ವಾರು ಜಂಟಿ ಖಾತೆ ಜವಾಬ್ದಾರಿಯನ್ನು ಮುಖ್ಯ ಅಡುಗೆ ನೌಕರರಿಂದ ಎಸ್‌ಡಿಎಂಸಿಗೆ ವರ್ಗಾವಣೆ ಮಾಡಿರುವ ಕ್ರಮ ವಾಪಾಸಾಗಬೇಕು.
2022ರಿಂದ 60 ವರ್ಷ ಆಗಿದೆ ಎಂದೂ ಕೆಲಸದಿಂದ ತೆಗೆದಿರುವ ಎಲ್ಲರಿಗೂ 1 ಲಕ್ಷ ಇಡಗಂಟು ಕೊಡಬೇಕು. ಕೆಲಸದ ಸ್ಥಳದಲ್ಲಿ ಮರಣ ಹೊಂದಿದರೆ 25 ಲಕ್ಷ ರೂಗಳ ಪರಿಹಾರ ಕೊಡಬೇಕು. ಬಜೆಟ್‌ನಲ್ಲಿ ಹೆಚ್ಚಳ ಮಾಡಿದ ರೂ. 1000 ವೇತನವನ್ನು ಜನವರಿಯಿಂದ ಅನ್ವಯಿಸಿ ನೀಡಬೇಕು. ಹಾಜರಾತಿ ಆಧಾರದಲ್ಲಿ ಕೆಲಸದಿಂದ ತೆಗೆಯುವ ಕ್ರಮ ನಿಲ್ಲಬೇಕು. ಬಿಸಿಯೂಟ ಯೋಜನೆಯನ್ನು ಖಾಯಂ ಮಾಡಬೇಕು ಖಾಯಂ ಮಾಡುವ ತನಕ 45 ಮತ್ತು 46ನೇ ಭಾರತೀಯ ಕಾರ್ಮಿಕ ಸಮ್ಮೇಳನದ ಶಿಫಾರಸ್ಸಿನಂತೆ ಇವರನ್ನು ಕಾರ್ಮಿಕರೆಂದು ಗುರುತಿಸಬೇಕು. ಬಿಸಿಯೂಟ ಯೋಜನೆಯನ್ನು ಯಾವುದೇ ಖಾಸಗಿ ಸಂಸ್ಥೆಗಳಿಗೆ ಯಾವುದೇ ಸ್ವರೂಪದ ಜವಾಬ್ದಾರಿ ಕೊಡಬಾರದು. ಕೆಲಸದ ಅವಧಿಯನ್ನು ಬದಲಾಯಿಸಬೇಕು. ಬೇಸಿಗೆ ಮತ್ತು ದಸರಾ ರಜೆಗಳ ವೇತನವನ್ನು ಕಡ್ಡಾಯವಾಗಿ ನೀಡಬೇಕು. ಅಪಘಾತದಲ್ಲಿ ಮೃತರಾದ ಅಡುಗೆ ಸಿಬ್ಬಂದಿಗಳ ಕುಟುಂಬದವರಿಗೆ ಕೆಲಸ ನೀಡಬೇಕು. ನಿವೃತ್ತರಾದ ಸಿಬ್ಬಂದಿ ಕುಟುಂಬಕ್ಕೆ ಕೆಲಸ ನೀಡಬೇಕು. ಶಾಲೆಯಲ್ಲಿ ಕನಿಷ್ಟ ಇಬ್ಬರು ಅಡುಗೆಯವರಿರಬೇಕು ಎಂದು ವಿವರಿಸಲಾಗಿದೆ.

Comments are closed.