ಉಡುಪಿ: ಒಂದೇ ಕುಟುಂಬದ ನಾಲ್ವರನ್ನು ಹತ್ಯೆ ಮಾಡಿದ ಪ್ರಕರಣದ ತನಿಖೆ ತೀವ್ರಗೊಂಡಿದ್ದು ಆರೋಪಿಗಳ ಪತ್ತೆಗಾಗಿ ಐದು ಪೊಲೀಸ್ ತಂಡಗಳು ತೀವ್ರ ಶೋಧ ಕಾರ್ಯ ನಡೆಸುತ್ತಿದ್ದಾರೆ ಎಂದು ಉಡುಪಿ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಕೆ. ಮಾಹಿತಿ ನೀಡಿದ್ದಾರೆ.
ಮಲ್ಪೆ ಠಾಣೆ ವ್ಯಾಪ್ತಿಯ ನೇಜಾರಿನಲ್ಲಿ ಇಂದು ಬೆಳಗ್ಗೆ ನಡೆದ ನಾಲ್ವರ ಬರ್ಬರ ಹತ್ಯೆ ವೇಳೆ 70 ವರ್ಷದ ವೃದ್ಧೆ ದುಷ್ಕರ್ಮಿ ಆಕ್ರಮಣದಿಂದ ತಪ್ಪಿಸಿಕೊಂಡು ಶೌಚಾಲಯದೊಳಗೆ ತೆರಳಿ ಬಾಗಿಲು ಹಾಕಿಕೊಂಡು ಪ್ರಾಣ ಉಳಿಸಿಕೊಂಡಿದ್ದಾರೆ. ಕೊಲೆಯಾದ ಹಸೀನಾ ಅವರ ಅತ್ತೆ ಹಾಜಿರಾ(70) ಗಾಯಗೊಂಡ ವೃದ್ಧೆ.
ಭಾನುವಾರ ಬೆಳಿಗ್ಗೆ ಸಮಯ ಹಸೀನಾ ಅವರ ಮನೆಗೆ ಬಂದ ಹಂತಕ ಹಸೀನಾ(42) ಹಾಗೂ ಅವರ ಇಬ್ಬರು ಹೆಣ್ಮಕ್ಕಳಾದ ಅಫ್ನಾನ್ (22), ಆಯ್ನಾಝ್ (21) ಎಂಬವರನ್ನು ಹರಿತವಾದ ಆಯುಧದಿಂದ ಇರಿದು ಕೊಲೆಗೈದಿದ್ದಾನೆ. ಬೊಬ್ಬೆ ಕೇಳಿ ಹೊರಗೆ ಅಂಗಳದಲ್ಲಿ ಆಟವಾಡುತ್ತಿದ್ದ ಹಸೀನಾ ಅವರ ಕಿರಿಯ ಪುತ್ರ ಅಸೀಮ್(13) ಮನೆಯೊಳಗೆ ಓಡಿ ಬಂದಿದ್ದು ಆತನನ್ನು ಇರಿದು ಹಂತಕ ಕೊಲೆಗೈದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ವೇಳೆ ಮನೆಯಲ್ಲಿದ್ದ ಹಾಜಿರಾ ಅವರ ಹೊಟ್ಟೆ ಭಾಗಕ್ಕೆ ದುಷ್ಕರ್ಮಿ ಚೂರಿಯಿಂದ ಇರಿದಿದ್ದು ಗಾಯಗೊಂಡ ಅವರು ದುಷ್ಕರ್ಮಿಯಿಂದ ತಪ್ಪಿಸಿಕೊಂಡು ಮನೆಯ ಶೌಚಾಲಯದೊಳಗೆ ತೆರಳಿ ಬಾಗಿಲು ಮುಚ್ಚಿ ಚಿಲಕ ಹಾಕಿಕೊಂಡು ಪ್ರಾಣ ಉಳಿಸಿಕೊಂಡಿದ್ದಾರೆ.
ಸ್ಥಳಕ್ಕಾಗಮಿಸಿದ ಪೊಲೀಸರು ಮನೆಯೊಳಗೆ ತನಿಖೆ ನಡೆಸುತ್ತಿದ್ದ ವೇಳೆ ಒಳಗಡೆಯಿಂದ ಬಾಗಿಲು ಮುಚ್ಚಿರುವ ಶೌಚಾಲಯವನ್ನು ಗಮನಿಸಿದ್ದಾರೆ. ಈ ವೇಳೆ ಬಾಗಿಲು ತೆರೆಯುವಂತೆ ಪೊಲೀಸರು ತಿಳಿಸಿದ್ದು ಹೆದರಿದ್ದ ಹಾಜಿರಾ ಬಾಗಿಲು ತೆರೆಯಲು ಧೈರ್ಯ ಮಾಡಿರಲಿಲ್ಲ. ಕೊನೆಗೆ ಬಾಗಿಲು ಮುರಿದು ಹಾಜಿರಾರನ್ನು ರಕ್ಷಿಸಿದ ಪೊಲೀಸರು ಆಸ್ಪತ್ರೆಗೆ ದಾಖಲಿಸಿದ್ದಾರೆಂದು ತಿಳಿದುಬಂದಿದೆ.
ಹೊಟ್ಟೆಯ ಎಡಭಾಗಕ್ಕೆ ಇರಿತಕ್ಕೊಳಗಾಗಿರುವ ಹಾಜಿರಾ ಅವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.
ಮೃತರಲ್ಲಿ ಹಸೀನಾ ಗೃಹಿಣಿಯಾಗಿದ್ದು ಅಫ್ನಾನ್ ಏರ್ ಇಂಡಿಯಾ ಸಂಸ್ಥೆಯಲ್ಲಿ ಗಗನ ಸಖಯಾಗಿ ಸೇವೆ ಸಲ್ಲಿಸುತ್ತಿದ್ದರು. ಆಯ್ನಾಝ್ (21) ಬಿಕಾಮ್ ಲಾಜಿಸ್ಟಿಕ್ ಕಲಿಯುತ್ತಿದ್ದು, ಅಸೀಮ್ (13) ಎಂಟನೇ ತರಗತಿಯ ವಿದ್ಯಾರ್ಥಿಯಾಗಿದ್ದಾರೆ. ಇನ್ನೊರ್ವ ಮಗ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದು ತಂದೆ ವಿದೇಶದಲ್ಲಿ ಉದ್ಯೋಗದಲ್ಲಿದ್ದಾರೆ.
Comments are closed.