ಕರ್ನಾಟಕ

ಸಿಎಂ ಆಗಿ ಅಲ್ಪಸಂಖ್ಯಾತರ ಓಲೈಕೆ ಮಾಡ್ತಿರೋದು ತರವಲ್ಲ: ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ

Pinterest LinkedIn Tumblr

ಶಿವಮೊಗ್ಗ: ಮುಸ್ಲಿಂ ಸಮುದಾಯಕ್ಕೆ ಅನುದಾನ ನೀಡುವ ಕುರಿತು ಸಿಎಂ ಸಿದ್ದರಾಮಯ್ಯ ಅವರು ನೀಡಿದ ಹೇಳಿಕೆಯನ್ನು ಮಾಜಿ ಸಿಎಂ ಬಿ.ಎಸ್.​ ಯಡಿಯೂರಪ್ಪ ಅವರು ಟೀಕಿಸಿದ್ದಾರೆ. ರಾಜ್ಯದ ಸಿಎಂ ಆಗಿದ್ದುಕೊಂಡು ಒಂದು ಸಮುದಾಯವನ್ನು ಓಲೈಕೆ ಮಾಡುತ್ತಿರುವುದು ಅವರಿಗೆ ಶೋಭೆ ತರುವುದಿಲ್ಲ ಎಂದು ಹೇಳಿದರು.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಒಬ್ಬ ಮುಖ್ಯಮಂತ್ರಿಯಾಗಿ ಅಲ್ಪಸಂಖ್ಯಾತರರಿಗೆ ಹಣ ಕೊಡಲು ಅಭ್ಯಂತರವಿಲ್ಲ. ಆದರೆ, ಹಣದ ಹೆಸರಲ್ಲಿ ಅಲ್ಪಸಂಖ್ಯಾತರ ಓಲೈಕೆ ಮಾಡ್ತಿರೋದು ತರವಲ್ಲ. ಈ ಹೇಳಿಕೆ ಹಿಂದೂಗಳ ಆಕ್ರೋಶಕ್ಕೆ ಅವಕಾಶ ಮಾಡಿಕೊಡುತ್ತದೆ. ಈ‌ ರೀತಿ ಮಾತುಗಳನ್ನು ಸಿಎಂ ಅವರಿಂದ ನಿರೀಕ್ಷೆ ‌ಮಾಡಿರಲಿಲ್ಲ. ಈಗಾಗಲೇ ಅವರ ಹೇಳಿಕೆಯನ್ನು ಮಠಾಧೀಶರು ಸೇರಿ ಎಲ್ಲೆಡೆಯಿಂದ ಖಂಡನೆ ವ್ಯಕ್ತವಾಗಿದೆ. ಏನಾದರೂ ಹೇಳುವಾಗ ಎಚ್ಚರಿಕೆ ವಹಿಸಬೇಕು ಎಂದು ಸಲಹೆ ನೀಡಿದರು.

ಲೋಕಸಭೆ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ. ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲೇ ಚುನಾವಣೆ ಎದುರಿಸಲಿದ್ದೇವೆ. ಅವರ ಹೆಸರಿನಲ್ಲಿ ನೂರಕ್ಕೆ ನೂರು ಪ್ರತಿಶತ ಗೆಲುವು ಪಡೆಯುತ್ತೇವೆ. ಯಾವುದೇ ಅನುಮಾನ ಬೇಡ ಎಂದು ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದರು.

ಕಾಂಗ್ರೆಸ್​ನವರು ಓಲೈಕೆ ರಾಜಕಾರಣ ಮಾಡುವ ಮೂಲಕ ಚುನಾವಣೆ ಗೆಲ್ಲುತ್ತೇವೆ ಎಂಬ ಭ್ರಮೆಯಲ್ಲಿ ಇದ್ದರೆ, ಅದು ಸಾಧ್ಯವಿಲ್ಲ. ದೇಶದಲ್ಲಿ ಬಿಜೆಪಿ ಮತ್ತು ಮೋದಿ ಪರ ವಾತಾವರಣವಿದೆ. ನಾವು ಎಲ್ಲಾ ಕ್ಷೇತ್ರ ಗೆಲ್ಲಲು ಪ್ರಯತ್ನಿಸುತ್ತೇವೆ ಎಂದರು.ಅಧಿವೇಶನ ನಡೆಯುತ್ತಿರುವ ಬೆಳಗಾವಿಯ ಸುವರ್ಣಸೌಧದಲ್ಲಿ ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ಕರ್ ಅವರ ಪೋಟೋ ತೆಗೆಯುವ ವಿಚಾರ ಸರಿಯಲ್ಲ. ಸಾವರ್ಕರ್ ಭಾವಚಿತ್ರ ತೆಗೆಯುವ ಸಾಹಸಕ್ಕೆ ಸರ್ಕಾರ ಕೈ ಹಾಕಬಾರದು. ಇದು ಹೋರಾಟಗಾರರಿಗೆ ಮಾಡಿದ ಅವಮಾನ. ರಾಜ್ಯದ ಜನ ಸುಮ್ಮನಿರಲ್ಲ ಎಂದರು.

Comments are closed.