ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಟಿ ಲೀಲಾವತಿ (86) ಅವರು ವಯೋಸಹಜ ಸಮಸ್ಯೆಯಿಂದ ನಿಧನರಾಗಿದ್ದಾರೆ. ಆರೋಗ್ಯದಲ್ಲಿ ಮತ್ತೆ ಏರುಪೆರು ಕಾಣಿಸಿಕೊಂಡಿದ್ದರಿಂದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಳೆದ ಎರಡು ದಿನಗಳಿಂದ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡಿತ್ತು. ಇಂದು (ಶುಕ್ರವಾರ) ಮಧ್ಯಾಹ್ನ ದಿಢೀರ್ ಅಂತ ಲೋ ಬಿಪಿ ಸಮಸ್ಯೆ ಶುರುವಾಗಿದೆ. ತಕ್ಷಣವೇ ಅವರನ್ನು ನೆಲಮಂಗಲದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಲೀಲಾವತಿ ಅವರು ನಿಧನರಾಗಿದ್ದಾರೆ.
ಹಿರಿಯ ನಟಿ ಲೀಲಾವತಿಯವರ ನಿಧನಕ್ಕೆ ನಟ ಶಿವರಾಜ್‌ಕುಮಾರ್ ಸಂತಾಪ ಸೂಚಿಸಿದ್ದಾರೆ. ಲೀಲಾವತಿ ಅವರ ನಿಧನ ನಮ್ಮ ಚಿತ್ರರಂಗಕ್ಕೆ ದೊಡ್ಡ ನಷ್ಟ ಆಗಿದೆ. ಅಮ್ಮ ಮತ್ತು ಮಗನ ಬಾಂಧ್ಯವವೇ ಬೇರೆ ತರಹ ಇತ್ತು ಎಂದು ಶಿವಣ್ಣ ಭಾವುಕರಾಗಿದ್ದಾರೆ.
ಕಳೆದ ವಾರ ಲೀಲಾವತಿ ಅಮ್ಮನವರನ್ನ ಮಾತನಾಡಿಸಿದೆ. ಇದೀಗಾ ಅವರ ಸಾವಿನಿಂದ ಮನಸ್ಸಿಗೆ ತುಂಬಾ ನೋವಾಗಿದೆ ಎಂದಿದ್ದಾರೆ. ವಿನೋದ್ ಯಾವಾಗಲೂ ಹೇಳುತ್ತಿದ್ದರು ಅವರ ಆರೋಗ್ಯದ ಬಗ್ಗೆ ನಾವೆಲ್ಲಾ ಅವರ ಜೊತೆಗೆ ಇರುತ್ತೀವಿ ಎಂದು ಹೇಳಿದ್ದೆ, ಲೀಲಾವತಿ ಅವರ ಆತ್ಮಕ್ಕೆ ಶಾಂತಿ ಸಿಗಲಿ. ಲೀಲಾವತಿ ಅಮ್ಮನ ವಿನೋದ್ ತುಂಬಾ ಹಚ್ಚಿಕೊಂಡಿದ್ದರು. ಅವರಿಬ್ಬರ ಬಾಂಧವ್ಯವೇ ಬೇರೇ ಥರಹ ಇತ್ತು. ಈಗ ಅದೆನ್ನೆಲ್ಲಾ ಯೋಚನೆ ಮಾಡಿದಾಗ ಬೇಜರಾಗುತ್ತದೆ. ವಿನೋದ್ ಹೇಗೆ ತೆಗೆದುಕೊಳ್ತಾರೋ ಅನಿಸುತ್ತಿದೆ. ಅದಷ್ಟು ವಿನೋದ್ ಜೊತೆ ಮಾತನಾಡಿದ್ದೇವೆ. ವಿನೋದ್ ತಾಯಿನ ಕಳೆದುಕೊಂಡ ನೋವಿನಲ್ಲಿದ್ದಾರೆ. ಇದೆಲ್ಲಾ ಸರಿ ಹೋಗಲಿ ಮತ್ತೆ ವಿನೋದ್ ಅವರನ್ನ ಭೇಟಿ ಮಾಡುತ್ತೇವೆ ಎಂದು ಶಿವಣ್ಣ ಪ್ರತಿಕ್ರಿಯೆ ನೀಡಿದ್ದಾರೆ.
ಲೀಲಾವತಿ ಅವರ ಬಗ್ಗೆ..
ಲೀಲಾವತಿ ದಕ್ಷಿಣ ಭಾರತದ ಖ್ಯಾತ ನಟಿ. ಕನ್ನಡದಲ್ಲಿ ಪ್ರಧಾನವಾಗಿ ನಟಿಸುವುದರೊಂದಿಗೆ ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಗಳ ಸುಮಾರು 600 ಚಿತ್ರಗಳಲ್ಲಿ ನಟಿಸಿದ್ದಾರೆ. ಕರ್ನಾಟಕ ಸರ್ಕಾರ ಚಲನಚಿತ್ರರಂಗದ ಜೀವಮಾನ ಸಾಧನೆಗೆ ನೀಡುವ ಅತ್ತ್ಯುನ್ನತ ಪ್ರಶಸ್ತಿ ಡಾ. ರಾಜಕುಮಾರ್ ಪ್ರಶಸ್ತಿಯನ್ನು 1999-2000ನೇ ಸಾಲಿನಲ್ಲಿ ಪಡೆದ ಲೀಲಾವತಿ ಅವರು, ‘ತುಮಕೂರು ವಿಶ್ವವಿದ್ಯಾಲಯ’ದ ಗೌರವ ಡಾಕ್ಟರೇಟ್ ಪದವಿಯನ್ನು 2008ರಲ್ಲಿ ಪಡೆದರು.
ಲೀಲಾವತಿ ಅವರು ೧೯೪೯ರಲ್ಲಿ ಶಂಕರ್ ಸಿಂಗ್ ಅವರ ನಾಗಕನ್ನಿಕ ಚಿತ್ರದಲ್ಲಿ ಸಖಿಯ ಪಾತ್ರದ ಮುಖಾಂತರ ಕನ್ನಡ ಚಿತ್ರರಂಗ ಪ್ರವೇಶಿಸಿದರು. ಸುಬ್ಬಯ್ಯ ನಾಯ್ಡು ಅವರ ಸಂಸ್ಥೆಯಲ್ಲಿ ರಂಗಭೂಮಿ ಕಲಾವಿದೆಯಾಗಿದ್ದ ಲೀಲಾವತಿ ಅವರು ಕಯಾದುವಿನ ಸಖಿಯಾಗಿ ಅಭಿನಯಿಸಿದ್ದರು. ಮಹಾಲಿಂಗ ಭಾಗವತರ ನಾಟಕ ಸಂಸ್ಥೆಯನ್ನು ಸೇರಿ ಹಲವಾರು ನಾಟಕಗಳಲ್ಲಿ ಅಭಿನಯಿಸಿದರು. ಸುಬ್ಬಯ್ಯ ನಾಯ್ಡು ಅವರ ‘ಭಕ್ತ ಪ್ರಹ್ಲಾದ’ದಲ್ಲಿ ಕೂಡಾ ಅಭಿನಯಿಸಿದರು. ಹಲವಾರು ಚಿತ್ರಗಳಲ್ಲಿ ಚಿಕ್ಕ ಪಾತ್ರಗಳಲ್ಲಿ ಅಭಿನಯಿಸಿದರು.
ನಾಯಕಿಯಾಗಿ ಅವರು ಅಭಿನಯಿಸಿದ ಮೊದಲ ಚಿತ್ರ ಮಾಂಗಲ್ಯ ಯೋಗ. ಡಾ. ರಾಜ್ ಕುಮಾರ್ ಅವರೊಂದಿಗೆ ನಟಿಸಿದ ಮೊದಲ ಚಿತ್ರ ರಣಧೀರ ಕಂಠೀರವ.
ರಾಣಿ ಹೊನ್ನಮ್ಮ ಚಿತ್ರದ ಯಶಸ್ಸಿನ ನಂತರ ರಾಜ್ ಕುಮಾರ್ ಮತ್ತು ಲೀಲಾವತಿ ಅವರ ಜೋಡಿ ಜನಪ್ರಿಯವಾಯಿತು. ಸಂತ ತುಕಾರಾಂ, ಕಣ್ತೆರೆದು ನೋಡು, ಕೈವಾರ ಮಹಾತ್ಮೆ, ಗಾಳಿ ಗೋಪುರ, ಕನ್ಯಾರತ್ನ, ಕುಲವಧು, ವೀರ ಕೇಸರಿ, ಮನ ಮೆಚ್ಚಿದ ಮಡದಿ ಹೀಗೆ ಹಲವಾರು ಚಿತ್ರಗಳ ನಾಯಕಿಯಾದರು. ಕೆಲಚಿತ್ರಗಳಲ್ಲಿ ನಾಯಕನಟರಿಗಿಂತ ಹೆಚ್ಚಿನ ಸಂಭಾವನೆ ಪಡೆಯುವ ನಾಯಕಿಯಾಗಿ ಗುರುತಿಸಿಕೊಂಡಿದ್ದರು.
70ರ ದಶಕದ ಬಳಿಕ ಪೋಷಕ ಪಾತ್ರಗಳಲ್ಲಿ ಲೀಲಾವತಿಯವರು ತಮ್ಮನ್ನು ತೊಡಗಿಸಿಕೊಂಡರು. ನಾಯಕಿಯಾಗಿ, ಅಮ್ಮನಾಗಿ, ಅಜ್ಜಿಯಾಗಿ ನಾನಾಬಗೆಯ ಪೋಷಕಪಾತ್ರಗಳಲ್ಲಿ ನಟಿಸಿದರು. ಅವುಗಳಲ್ಲಿ ಗೆಜ್ಜೆ ಪೂಜೆ, ಸಿಪಾಯಿ ರಾಮು, ನಾಗರಹಾವು, ಭಕ್ತ ಕುಂಬಾರ ಮುಂತಾದ ಚಿತ್ರಗಳು ಪ್ರಮುಖವಾದವು.
(ಕೃಪೆ: ವಿಕಿಪೀಡಿಯ)
Comments are closed.