ಉಡುಪಿ: ಸಮಾಜರತ್ನ ಕೆ. ಲೀಲಾಧರ ಶೆಟ್ಟಿ (68) ಮತ್ತು ಅವರ ಪತ್ನಿ ವಸುಂಧರಾ ಎಲ್. ಶೆಟ್ಟಿ (59) ಅವರ ಆತ್ಮಹತ್ಯೆ ಪ್ರಕರಣದ ಮುಂದುವರಿದ ಭಾಗವಾಗಿ ಮನೆಯಿಂದ ಕಾಣೆಯಾದ ಅವರ ಸಾಕುಪುತ್ರಿಗಾಗಿ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ. ಸಾಕುಪುತ್ರಿ ಮನೆ ಬಿಟ್ಟು ಹೋದ ವಿಷಯಕ್ಕೆ ನೊಂದು ಈ ದಂಪತಿ ಮಂಗಳವಾರ ರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಲೀಲಾಧರ ಶೆಟ್ಟಿ ದಂಪತಿಯ ಸಾಕು ಮಗಳು ಈ ಹಿಂದೆ ಮನೆ ಕೆಲಸಕ್ಕೆಂದು ಬಂದಿದ್ದಾತನೊಂದಿಗೆ ತೆರಳಿರುವ ಶಂಕೆ ವ್ಯಕ್ತಪಡಿಸಿ ಪೊಲೀಸರಿಗೆ ದೂರು ನೀಡಲಾಗಿತ್ತು. ಅದರಂತೆ ಆಕೆಯ ಪತ್ತೆಗಾಗಿ ಕಾಪು ಪೊಲೀಸರು ತನಿಖೆ ನಡೆಸುತ್ತಿದ್ದು, ಎರಡು ತಂಡಗಳನ್ನು ರಚಿಸಿದ್ದಾರೆ. ಜಿಲ್ಲೆ, ಹೊರ ಜಿಲ್ಲೆ ಮತ್ತು ಹೊರ ರಾಜ್ಯಗಳಲ್ಲೂ ಶೋಧ ಕಾರ್ಯ ಮುಂದುವರಿದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ದಂಪತಿ ಬರೆದ ಡೆತ್ ನೋಟ್‌ನಲ್ಲಿ ಏನಿತ್ತು ?
ಲೀಲಾಧರ ಶೆಟ್ಟಿ ಅವರು ಸಾವಿಗೆ ಮೊದಲು ಡೆತ್ ನೋಟ್ ಬರೆದಿಟ್ಟಿದ್ದಾರೆ ಎನ್ನಲಾಗಿದೆ. ‘ನನ್ನನ್ನು ಕ್ಷಮಿಸಿ, ಪ್ರಾಣಕ್ಕಿಂತ ಮಾನ ಮುಖ್ಯ. ಯಾರ್ಯಾರಿಗೆ ಎಷ್ಟು ಸಾಲ ಕೊಡಬೇಕಿದೆ ಮತ್ತು ಅವರ ದೂರವಾಣಿ ಸಂಖ್ಯೆ ಇಲ್ಲಿದೆ. ಎಲ್‌ಐಸಿ ಕಮೀಷನ್‌ನಿಂದ ಬರುವ ಹಣದಲ್ಲಿ ಸಂದಾಯ ಮಾಡಿ. ತಾನು ಕಲಿತ ಕರಂದಾಡಿ ಶಾಲೆಯನ್ನು ಅಭಿವೃದ್ಧಿ ಪಡಿಸಿ, ಅಲ್ಲಿನ ಮಕ್ಕಳ ಬಗ್ಗೆ ಪ್ರೀತಿ ತೋರಿ. ಬಾಕಿ ಇರುವ ಊರಿನ ವಿವಿಧ ಅಭಿವೃದ್ಧಿ ಕೆಲಸಗಳನ್ನು ಶೀಘ್ರ ಮುಗಿಸಿ’ ಎಂದು ಪತ್ರದಲ್ಲಿ ಬರೆದಿರುವುದಾಗಿ ಮೂಲಗಳಿಂದ ತಿಳಿದು ಬಂದಿದೆ.
Comments are closed.