ಕುಂದಾಪುರ: ಧಾರ್ಮಿಕ ಮುಂದಾಳು, ಮಾಜಿ ಶಾಸಕ ಬಿ. ಅಪ್ಪಣ್ಣ ಹೆಗ್ಡೆ ಅವರ 89ನೇ ಹುಟ್ಟುಹಬ್ಬದ ಅಂಗವಾಗಿ ಡಿಸೆಂಬರ್ 24ರಂದು ನಡೆಯುವ ಕಾರ್ಯಕ್ರಮದಲ್ಲಿ ಆಸ್ಮಾ ಬಾನು ಅವರಿಗೆ ಈ ಬಾರಿಯ ಬಿ. ಅಪ್ಪಣ್ಣ ಹೆಗ್ಡೆ ಕೃಷಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ ಎಂದು ಟ್ರಸ್ಟ್‌ನ ಅಧ್ಯಕ್ಷ ಬಿ. ರಾಮಕಿಶನ್ ಹೆಗ್ಡೆಯವರು ತಿಳಿಸಿದ್ದಾರೆ.
ಬಸ್ರೂರು ಅಪ್ಪಣ್ಣ ಹೆಗ್ಡೆ ಪ್ರತಿಷ್ಠಾನದ ವತಿಯಿಂದ ಶ್ರೀ ಶಾರದಾ ಕಾಲೇಜು ಬಸ್ರೂರಿನ ಆವರಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಅನಾರೋಗ್ಯ ಪೀಡಿತರು ಹಾಗೂ ಅಶಕ್ತರಿಗೆ ದತ್ತಿ ನಿಧಿ ವಿತರಿಸಲಾಗುವುದು. ಸಮಾರಂಭದಲ್ಲಿ ಉಡುಪಿ ಅದಮಾರು ಮಠಾಧೀಶ ಶ್ರೀ ಈಶಪ್ರಿಯತೀರ್ಥ ಸ್ವಾಮೀಜಿ ಪ್ರಶಸ್ತಿ ಪ್ರಧಾನ ಮಾಡಿ ಆಶೀರ್ವದಿಸಲಿದ್ದಾರೆ. ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ. ಜಯಪ್ರಕಾಶ್ ಹೆಗ್ಡೆ ಅಧ್ಯಕ್ಷತೆ ವಹಿಸಲಿದ್ದಾರೆ.
ಕಾಯಕವೇ ಕೈಲಾಸ ಎಂದು ದುಡಿಯುತ್ತಿರುವ ಆಸ್ಮ ಬಾನು ಅವರು ಮೂಡುಬಿದ್ರೆಯವರಾಗಿದ್ದು, ದೇಶದ ಬೇರೆ ಬೇರೆ ರಾಜ್ಯಗಳಿಂದ ಅಳಿವಿನಂಚಿನಲ್ಲಿರುವ ಭತ್ತದ ಬೀಜಗಳನ್ನು ಸಂಗ್ರಹಿಸುವ ವಿಶೇಷ ಕೆಲಸವನ್ನು ಮಾಡುತ್ತಿದ್ದಾರೆ. ಈ ವರ್ಷ 840ಕ್ಕೂ ಹೆಚ್ಚಿನ ಭತ್ತದ ತಳಿಗಳನ್ನು ಸಂಗ್ರಹಿಸಿ ಬೆಳೆಸಿದ್ದಾರೆ. ಅಲ್ಲದೆ ಈ ಬೀಜಗಳ ಬಗ್ಗೆ ವಿಶೇಷವಾಗಿ ಅಧ್ಯಯನ ಮಾಡಿ ಅವುಗಳಲ್ಲಿರುವ ಆರೋಗ್ಯಕಾರಿ ವಿಷಯಗಳ ಬಗ್ಗೆ ಜಾಗೃತಿಯನ್ನು ಮೂಡಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಇವರ ಈ ಅಪರೂಪದ ಸಾಧನೆಗಳನ್ನು ಗಮನಿಸಿ ಈ ಬಾರಿಯ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Comments are closed.