ಕರಾವಳಿ

ಕುಂದಾಪುರದಲ್ಲಿ ‘ಸಡಕ್ ಸುರಕ್ಷಾ-ಜೀವನ್ ರಕ್ಷಾ’: ಟ್ರಾಫಿಕ್ ರೂಲ್ಸ್ ಹೇಳಲು ಪೊಲೀಸರೊಂದಿಗೆ ರಸ್ತೆಗಿಳಿದ ಯಮ..!

Pinterest LinkedIn Tumblr

ಕುಂದಾಪುರ: ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ ಅಂಗವಾಗಿ ಉಡುಪಿ ಜಿಲ್ಲಾ ಪೊಲೀಸ್ ವತಿಯಿಂದ ಕುಂದಾಪುರ ನಗರ ಠಾಣೆ ಹಾಗೂ ಸಂಚಾರ ಠಾಣೆ ನೇತೃತ್ವದಲ್ಲಿ ಮಂಗಳವಾರ ಕುಂದಾಪುರ ನಗರದಲ್ಲಿ ಸಂಚಾರ ಜಾಗೃತಿ ಕಾರ್ಯಕ್ರಮವನ್ನು ‘ಸಡಕ್ ಸುರಕ್ಷಾ-ಜೀವನ್ ರಕ್ಷಾ’ ಘೋಷವಾಕ್ಯದಡಿ ವಿಭಿನ್ನವಾಗಿ ಹಮ್ಮಿಕೊಳ್ಳಲಾಗಿತ್ತು.

ಸಂಚಾರಿ ಠಾಣೆಯಿಂದ ಕುಂದಾಪುರದ ಶಾಸ್ತ್ರೀ ವೃತ್ತದವರೆಗೆ ಬೈಕ್ ರ್ಯಾಲಿ ಮೂಲಕ ಆಟೋ ರಿಕ್ಷಾದಲ್ಲಿ ಧ್ವನಿವರ್ಧಕಗಳಿಂದ ಸಂಚಾರ ಜಾಗೃತಿ ಹೇಳುತ್ತಾ ಬಂದ ಪೊಲೀಸರ ಜೊತೆಗೆ ಯಮ ಪಾತ್ರಧಾರಿಯಿದ್ದು ಶಾಸ್ತ್ರೀ ವೃತ್ತದಲ್ಲಿ ದ್ವಿಚಕ್ರ ವಾಹನ ಸವಾರರಿಗೆ ಸಂಚಾರಿ ನಿಯಮಗಳನ್ನು ಮನದಟ್ಟು ಮಾಡಲಾಯಿತು. ಯಮ ಪಾತ್ರಧಾರಿ ಪಾಶವನ್ನು ತೋರಿಸಿ ಅಪಾಯದ ಅರಿವು ಮೂಡಿಸಿದ್ದು ಪೊಲೀಸರು ಸವಾರರಿಗೆ ಗುಲಾಬಿ ಹೂ, ಮಾಹಿತಿಯ ಕರಪತ್ರ ನೀಡಿ ಎಚ್ಚರಿಕೆ ಕೊಟ್ಟು ಕಳಿಸಿದರು.

ಕುಂದಾಪುರ ನಗರ ಠಾಣೆ ಪೊಲೀಸ್ ನಿರೀಕ್ಷಕ ನಂದಕುಮಾರ್ ಯು.ಬಿ, ಉಪನಿರೀಕ್ಷಕ ವಿನಯ್ ಎಂ. ಕೊರ್ಲಹಳ್ಳಿ, ಕ್ರೈಂ ವಿಭಾಗದ ಪಿಎಸ್ಐ ಪ್ರಸಾದ್ ಕುಮಾರ್ ಕೆ., ಸಂಚಾರಿ ಉಪನಿರೀಕ್ಷಕರಾದ ಸುಬ್ಬಣ್ಣ, ಸುದರ್ಶನ್ ಹಾಗೂ ಸಂಚಾರಿ, ನಗರ ಠಾಣೆ ಪೊಲೀಸ್ ಸಿಬ್ಬಂದಿ ಇದ್ದರು‌.

 

Comments are closed.