ಕರಾವಳಿ

ರಾಮಭಕ್ತರ ಮೇಲೆ ಲಾಠಿಪ್ರಹಾರ ಮಾಡಿಸಿ ಸಿಎಂ ಸಿದ್ದರಾಮಯ್ಯ ಅಧಿಕಾರದ ಪರಾಕಾಷ್ಠೆ ಮೆರೆದಿದ್ದು ಸರಿಯಲ್ಲ: ಕೋಟ ಶ್ರೀನಿವಾಸ ಪೂಜಾರಿ

Pinterest LinkedIn Tumblr

ಕುಂದಾಪುರ: ಮಂಡ್ಯದ ಕೆರೆಗೋಡು ಎಂಬಲ್ಲಿ ಗ್ರಾಮಸ್ಥರು ಟ್ರಸ್ಟ್ ರಚಿಸಿ 30-40 ವರ್ಷಗಳ ಹಿಂದೆ ಕಟ್ಟೆ ಕಟ್ಟಿದ್ದರು. ಖಾಸಗಿ ಕಟ್ಟೆಯನ್ನು ನವೀಕರಣಗೊಳಿಸಲು ಗ್ರಾ.ಪಂ ಸರ್ವಾನುಮತದ ನಿರ್ಣಯ ಮಾಡಿತ್ತು. ಓಂ ಧ್ವಜ ಹಾರಿಸಿದ್ದನ್ನು ಇಳಿಸಿ ಈ ವಿಚಾರವನ್ನು ಸ್ಥಳೀಯ ಶಾಸಕರು ರಾಜಕೀಯಗೊಳಿಸಿ ಪೊಲೀಸರ ಮೂಲಕ ಮುಗ್ದರು, ರಾಮ ಭಕ್ತರ ಮೇಲೆ ಲಾಠಿ ಚಾರ್ಜ್ ಮಾಡಿದ್ದು, ಡಿಸಿ‌ ಈ ಕುಕೃತ್ಯಕ್ಕೆ ಬೆಂಬಲ ನೀಡಿದ್ದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರಕಾರ ಮಾಡಬಾರದ ಕೆಲಸ ಎಂದು ವಿರೋಧ ಪಕ್ಷದ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕುಂದಾಪುರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಜೈಶ್ರೀರಾಮ್, ನಾವೆಲ್ಲಾ ಹಿಂದೂ-ನಾವೆಲ್ಲಾ ಒಂದು ಘೋಷಣೆ ಮಾಡಿದ ಸಿಎಂ ಸಿದ್ದರಾಮಯ್ಯ ಅವರು ಕೊನೆಯಲ್ಲಿ ತಮ್ಮ ಒಳಮನಸ್ಸಿನಲ್ಲಿರುವ ಭಾವನೆಗಳನ್ನು ಅಧಿಕಾರದ ಮೂಲಕ ವ್ಯಕ್ತಪಡಿಸಿ ರಾಮಭಕ್ತರ ಮೇಲೆ ಲಾಠಿಪ್ರಹಾರದಿಂದ ದೌರ್ಜನ್ಯ ಮಾಡಿ ಅಧಿಕಾರದ ಪರಾಕಾಷ್ಠೆ ಅಹಂಕಾರ ಮೆರೆದಿರುವ ಈ‌ ನಿಲುವು ಖಂಡನಾರ್ಹ. ಜನರ ಮನಸ್ಸು‌ಮನೆಗಳಲ್ಲಿ ತುಂಬಿರುವ ರಾಮಭಕ್ತಿಯನ್ನು ನಿಯಂತ್ರಿಸಲು ಸರಕಾರಕ್ಕೆ ಸಾಧ್ಯವಿಲ್ಲ. ಟಿಪ್ಪು ಜಯಂತಿ ಆಚರಿಸಲು ಮುಂದಾಗುವ ಸರಕಾರ ಭಗವಧ್ವಜ, ಹನುಮ ಧ್ವಜ, ಹಿಂದೂ ಧ್ವಜ ಕೆಲಸಗಿಳಿಸುವ ಕೆಲಸ ಮಾಡುತ್ತಿದ್ದು ಮುಂದಿನ ದಿನಗಳಲ್ಲಿದು ರಾಮ ಭಕ್ತರು ಮತ್ತು ಟಿಪ್ಪು ಭಕ್ತರಿಗೂ ಸಂಘರ್ಷವಿರಲಿದೆ ಎಂದು ಎಚ್ಚರಿಕೆ ನೀಡಿದರು.

ಪ್ರಿಯಾಂಕ್ ಖರ್ಗೆ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ರಾಷ್ಟ್ರದ ವಿಚಾರ ಬಂದಾಗ ಜಾತಿ, ಧರ್ಮಕ್ಕಿಂತ ರಾಷ್ಟ್ರ ಮೊದಲು ಎಂಬ ವಿಚಾರ ಕರಾವಳಿ ಸಹಿತ ರಾಷ್ಟ್ರದಲ್ಲಿದ್ದು ಮಂಡ್ಯಕ್ಕೆ ಮಾತ್ರವಲ್ಲ. ಮಂಡ್ಯದಲ್ಲಿ ನಡೆದ ಘಟನೆ ಬಗ್ಗೆ ಸರಕಾರ ನಿಂತು ಸರಿಪಡಿಸಬೇಕಿತ್ತು ಆದರೆ ಸಮರ್ಥನೆ ಮಾಡುತ್ತಿರುವುದು ದುರದೃಷ್ಟಕರ ಎಂದು ಲೇವಡಿ ಮಾಡಿದರು.

ನಿರುದ್ಯೋಗಿ ಭತ್ಯೆ ವಿಚಾರದಲ್ಲಿ ಇದೀಗಾ ಮಾತು ತಪ್ಪುತ್ತಿದ್ದು ಯುವನಿಧಿ ಯೋಜನೆ ವೈಫಲ್ಯವಾಗಿದೆ. ಮಾತ್ರವಲ್ಲದೆ ಶಕ್ತಿ, ಗೃಹಜ್ಯೋತಿ, ಗೃಹ ಲಕ್ಷ್ಮೀ ಯೋಜನೆಗಳು ವಿಫಲವಾಗುತ್ತಿದ್ದು ಮತಕ್ಕೋಸ್ಕರ ಗ್ಯಾರೆಂಟಿ ಯೋಜನೆ ಘೋಷಣೆ ಮಾಡಿ ವಿಫಲವಾಗುತ್ತಿದ್ದರಿಂದ ಸರಕಾರ ಸಂದಿಗ್ದತೆಗೆ ಸಿಲುಕಿದೆ. 8 ತಿಂಗಳಲ್ಲಿ 8 ಮೀಟರ್ ರಸ್ತೆ ಕೆಲಸ ಮಾಡಲು ಆಗಿಲ್ಲ. ಅಭಿವೃದ್ಧಿಯಲ್ಲಿ ಸಿದ್ದರಾಮಯ್ಯ ಸರಕಾರ ಹಿಂದೆ ಬಿದ್ದಿದೆ ಎಂದು ಆರೋಪಿಸಿದರು. ಜನರಿಗೆ ಗ್ಯಾರೆಂಟಿ ಯೋಜನೆ ಕೊಡಿ ಸುಮ್ಮನೆ ಸುಳ್ಳು ಹೇಳಬೇಡಿ ಎಂದರು. ಲಕ್ಷಾಂತರ ಜನರನ್ನು ಸೇರಿಸಿ ಕಾಂತರಾಜ ವರದಿ ತೆಗೆದುಕೊಳ್ಳಬೇಕೆಂದು ಸರಕಾರ ಭರವಸೆ ನೀಡುವ ಅವಶ್ಯಕತೆ ಏನಿತ್ತು? ಎಂದು ಪೂಜಾರಿ ಪ್ರಶ್ನಿಸಿದರು.

Comments are closed.