ಶಿವಮೊಗ್ಗ: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿರುವ ಮಧ್ಯಂತರ ಬಜೆಟ್ ಸಕಾಲಿಕವಾಗಿದೆ. ವಾಸ್ತವ ಹಾಗೂ ವಿಕಸಿತ ಭಾರತಕ್ಕೆ ಪೂರಕವಾಗಿದೆ ಎಂದು ಶಿವಮೊಗ್ಗ ಸಂಸದ ಬಿ.ವೈ ರಾಘವೇಂದ್ರ ತಿಳಿಸಿದ್ದಾರೆ.
ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಜನಪ್ರಿಯ ಘೋಷಣೆಗಳ ಮೊರೆ ಹೋಗತ್ತದೆ ಎಂದು ಪ್ರತಿಪಕ್ಷಗಳು ಭಾವಿಸಿದ್ದವು ಆದರೆ ಪ್ರಧಾನಿ ನರೇಂದ್ರ ಮೋದಿ ಜನಪ್ರಿಯ ಘೋಷಣೆಗಳಿಂದ ದೇಶದ ಆರ್ಥಿಕತೆ ಹಾಳಾಗುತ್ತದೆ ಎಂಬುದನ್ನು ಮನಗಂಡು ದೇಶದ ಭವಿಷ್ಯಕ್ಕೆ ಪೂರಕವಾದ ಮಧ್ಯಂತರ ಬಜೆಟ್ ಗೆ ಒತ್ತು ನೀಡಿದ್ದಾರೆ.
ಆರು ದಶಕಗಳಿಗೂ ಹೆಚ್ಚು ಕಾಲದಿಂದ ಬಗೆಹರಿಯದ ತೆರಿಗೆ ಸಂಬಂಧಿತ ವ್ಯಾಜ್ಯಗಳನ್ನು ಪರಿಹರಿಸಲು ಕ್ರಮ ಕೈಗೊಳ್ಳುವುದಾಗಿ ಬಜೆಟ್ ನಲ್ಲಿ ಘೋಷಿಸಲಾಗಿದೆ. 41,000 ರೈಲುಗಳ ಬೋಗಿಗಳನ್ನು ವಂದೇ ಭಾರತ್ ರೈಲಿನ ಭೋಗಿಯ ಗುಣಮಟ್ಟಕ್ಕೆ ವಿಸ್ತರಿಸಲು ಚಿಂತನೆ ನಡೆಸಿರುವುದು ಖುಷಿ ವಿಚಾರ. ಬಂದರುಗಳ ಅಭಿವೃದ್ಧಿ, ಲಕ್ಷದ್ವೀಪ ಪ್ರವಾಸಿ ತಾಣದ ಅಭಿವೃದ್ಧಿ, ಗೂಡ್ಸ್ ರೈಲುಗಳಿಗೆ ಪ್ರತ್ಯೇಕ ಕಾರಿಡಾರ್, ಎರಡು ಹಾಗೂ ಮೂರನೇ ಹಂತದ ನಗರಗಳಿಗೂ ವಿಮಾನಯಾನ ಸೌಕರ್ಯ, 500ಕ್ಕೂ ಹೆಚ್ಚು ಉಡಾನ್ ಮಾರ್ಗಗಳನ್ನು ಗುರುತಿಸಿರುವುದು ಇವುಗಳು ಮೂಲ ಸೌಕರ್ಯದ ವಿಸ್ತರಣೆಯಲ್ಲಿ ಮಹತ್ವದ ಪಾತ್ರ ವಹಿಸಲಿವೆ. ಧಾರ್ಮಿಕ ಪ್ರವಾಸೋದ್ಯಮ ಅಭಿವೃದ್ಧಿಗೆ ಒತ್ತು ನೀಡಿರುವುದು ವಿಶೇಷವಾಗಿದೆ.
ಮನೆಗಳಿಗೆ ಸೋಲಾರ್ ವಿದ್ಯುತ್ ಒದಗಿಸುವುದು, ಹೊಸದಾಗಿ ಎರಡು ಕೋಟಿ ಮನೆಗಳ ನಿರ್ಮಾಣ ಇದೆಲ್ಲವೂ ಜನಪರ ಚಿಂತನೆಗೆ ನಿದರ್ಶನವಾಗಿದೆ. ರಕ್ಷಣಾ ಇಲಾಖೆಗೆ 11 ಲಕ್ಷ ಕೋಟಿ ರೂ. ನಿಗದಿಪಡಿಸಿರುವುದು ದೇಶದ ರಕ್ಷಣೆಗೆ ಕೇಂದ್ರ ಸರ್ಕಾರ ನೀಡಿರುವ ಪ್ರಾಶಸ್ತ್ಯಕ್ಕೆ ನಿದರ್ಶನವಾಗಿದೆ.
ನ್ಯಾನೋ ಯೂರಿಯಾ ಬಳಿಕ ಇದೀಗ ನ್ಯಾನೋ ಡಿಎಪಿ ಒದಗಿಸಲು ಬಜೆಟ್ ನಲ್ಲಿ ನಿರ್ಧರಿಸಲಾಗಿದೆ. ಡೈರಿಗಳಿಗೆ ಶಕ್ತಿ ತುಂಬಲು ಯೋಜನೆ ಘೋಷಣೆಯಾಗಿದೆ. ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತರಿಗೆ ಆರೋಗ್ಯ ವಿಮೆ ಒದಗಿಸಲಾಗಿದೆ. ಒಂದು ಕೋಟಿ ಮನೆಗಳ ಮೇಲೆ ಸೋಲಾರ್ ಪ್ಯಾನೆಲ್ ಅಳವಡಿಕೆಗೆ ನಿರ್ಧರಿಸಲಾಗಿದೆ. ವಿಶ್ವದ ಅನೇಕ ರಾಷ್ಟ್ರಗಳು ಆರ್ಥಿಕ ಹಿನ್ನಡೆ ಅನುಭವಿಸುತ್ತಿರುವ ಸಂದರ್ಭದಲ್ಲಿ ನಮ್ಮ ಆರ್ಥಿಕತೆ ಸದೃಢವಾಗಿದೆ ಇದೇ ಕಾರಣದಿಂದ ಆದಾಯ ತೆರಿಗೆಯಲ್ಲಿ ಹೆಚ್ಚಳ ಮಾಡಿಲ್ಲ.
ಲೋಕಸಭೆ ಚುನಾವಣೆ ಬಳಿಕ ಮತ್ತೆ ಬಿಜೆಪಿಯೇ ಅಧಿಕಾರಕ್ಕೆ ಬರಲಿದ್ದು ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಲಿದ್ದಾರೆ. ಆಗ ಮಂಡನೆಯಾಗುವ ಪೂರ್ಣ ಪ್ರಮಾಣದ ಬಜೆಟ್ ನಲ್ಲಿ ದೇಶಕ್ಕೆ ಇನ್ನಷ್ಟು ಉತ್ತಮ ಕೊಡುಗೆಗಳು ಸಿಗಲಿವೆ.
– ಬಿ.ವೈ ರಾಘವೇಂದ್ರ, ಲೋಕಸಭಾ ಸದಸ್ಯರು
Comments are closed.