ಕರಾವಳಿ

ಹಿಂದೂಸ್ಥಾನಿ ನಾಗೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ‘ಸುವರ್ಣ ಸಂಭ್ರಮ-2024’ ಮತ್ತು ವಿವಿಧ ಕಾಮಗಾರಿಗಳ ಉದ್ಘಾಟನೆ

Pinterest LinkedIn Tumblr

(ವರದಿ- ಯೋಗೀಶ್ ಕುಂಭಾಸಿ)

ಕುಂದಾಪುರ: ಮಕ್ಕಳು ಉತ್ತಮ ಶಿಕ್ಷಣ ಪಡೆದು ಸಮಾಜದಲ್ಲಿ ಉನ್ನತ ಸ್ಥಾನಕ್ಕೇರಲು ಪೋಷಕರು ಹಾಗೂ ಶಿಕ್ಷಕರ ಜವಬ್ದಾರಿಯೂ ಹೆಚ್ಚಿದೆ. ಮಕ್ಕಳಿಗೆ ವಿದ್ಯಾಭ್ಯಾಸ ನೀಡುವುದು ದೇವರ ಸೇವೆ. ಶಿಕ್ಷಣ ಇಲಾಖೆಯಲ್ಲಿ ಕೆಲಸ ಮಾಡುವುದು ಪವಿತ್ರವಾದ ಕಾರ್ಯ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರಾದ ಎಸ್. ಮಧು ಬಂಗಾರಪ್ಪ ಹೇಳಿದರು.

ಗುರುವಾರದಂದು ಬೈಂದೂರು ತಾಲೂಕಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಹಿಂದೂಸ್ಥಾನಿ ನಾಗೂರು ಇಲ್ಲಿನ ‘ಸುವರ್ಣ ಸಂಭ್ರಮ-2024’ ಮತ್ತು ವಿವಿಧ ಕಾಮಗಾರಿಗಳ ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಉತ್ತಮ ಪ್ರಜೆಯಾಗಿ ರೂಪುಗೊಳ್ಳಲು ಡಾ. ಬಿ.ಆರ್ ಅಂಬೇಡ್ಕರ್ ನೀಡಿದ ಸಂವಿಧಾನದಿಂದ ಸಾಧ್ಯ ಎಂಬ ನಿಟ್ಟಿನಲ್ಲಿ ಶಾಲೆಗಳಲ್ಲಿ ಸಂವಿಧಾನ ಪೀಠಿಕೆ ಹೇಳಲಾಗುತ್ತಿದೆ. ಸಂವಿಧಾನ ಅರಿತಾಗ ಮಾತ್ರವೇ ಜಾತಿ-ಧರ್ಮದ ಎಲ್ಲೇ ಮೀರಿ ದೇಶದ ಪ್ರಗತಿಗೆ ಕೊಡುಗೆ ಕೊಡಲು ಮಕ್ಕಳಿಗೆ ಸಾಧ್ಯವಾಗುತ್ತದೆ. ಒಳ್ಳೆ ಪ್ರತಿಭೆಗಳು ಸರಕಾರಿ ಶಾಲೆಗಳಲ್ಲಿ ಸಿಗುತ್ತದೆ. ತಂದೆ ಬಂಗಾರಪ್ಪ ಸಹಿತ ಹಾಲಿ ಸಿಎಂ ಸಿದ್ದರಾಮಯ್ಯ ಮೊದಲಾದವರು ಸರಕಾರಿ ಶಾಲೆಯಲ್ಲಿ ಓದಿ ಮುಖ್ಯಮಂತ್ರಿಗಳಾಗಿದ್ದಾರೆ. ರಾಜ್ಯದಲ್ಲಿ 76 ಸಾವಿರ ಶಾಲೆಗಳು ಶಿಕ್ಷಣ ಇಲಾಖೆಯಡಿ ಬರುತ್ತಿದ್ದು ಸರಕಾರಿ, ಅನಿದಾನಿತ ಹಾಗೂ ಅನುದಾನ ರಹಿತ ಶಾಲೆಯ 1 ಕೋಟಿ 20 ಲಕ್ಷ ವಿದ್ಯೆ ಕಲಿಯುತ್ತಿದ್ದಾರೆ. ಸರಕಾರ ಈ ಬಾರಿ 44 ಸಾವಿರದ 500 ಕೋಟಿ ಅನುದಾನ ಶಿಕ್ಷಣ ಇಲಾಖೆಗೆ ನೀಡಿದ್ದು ವಿದ್ಯಾರ್ಥಿಗಳಿಗಾಗಿ ಹತ್ತು ಹಲವು ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿದೆ. ಸರಕಾರಿ ಶಾಲೆಗಳ ಉಳಿವಿಗೆ ಹಾಗೂ ಬಲವರ್ಧನೆಗೆ ದಾನಿಗಳ ಸಹಕಾರ ಕೂಡ ಅಗತ್ಯವಾಗಿದೆ ಎಂದು ಮಾಹಿತಿ ನೀಡಿದರು.

ಸುವರ್ಣ ಮಹೋತ್ಸವ ಸಮಿತಿ ಅಧ್ಯಕ್ಷ ಅಬ್ದುಲ್ ರೆಹಮಾನ್ ಅವರು ತಂದೆ-ತಾಯಿ ಹೆಸರಿನಲ್ಲಿ ಕಟ್ಟಿಸಿಕೊಟ್ಟ ರಂಗಮಂದಿರವನ್ನು ಸಚಿವರು ಉದ್ಘಾಟಿಸಿದರು‌. ಇದೇ ಸಂದರ್ಭ ಅಂದಾಜು 1 ಕೋಟಿ ವೆಚ್ಚದ ಕಾಮಗಾರಿಗಳ ಉದ್ಘಾಟನೆ ನಡೆಯಿತು.

ಕಿರಿಮಂಜೇಶ್ವರ ಗ್ರಾ.ಪಂ ಅಧ್ಯಕ್ಷ ಶೇಖರ್ ಖಾರ್ವಿ ಧ್ವಜಾರೋಹಣಗೈದರು. ಸದಸ್ಯ ಸುಬ್ಬಣ್ಣ ಶೆಟ್ಟಿ ಪುರಮೆರವಣಿಗೆಗೆ ಚಾಲನೆ ನೀಡಿದರು‌. ಎಸ್.ಡಿ.ಎಂ.ಸಿ ಅಧ್ಯಕ್ಷ ದಿನೇಶ್‌ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು.

ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ, ನಿವೃತ್ತ ಪೊಲೀಸ್ ಅಧಿಕಾರಿ ಜಿ.ಎ ಬಾವಾ, ಕಿರಿಮಂಜೇಶ್ವರ ಗ್ರಾಪಂ ಸದಸ್ಯರಾದ ರಾಜು ದೇವಾಡಿಗ, ಈಶ್ವರ ದೇವಾಡಿಗ, ಮಾಜಿ ಜಿಪಂ ಅಧ್ಯಕ್ಷ ಎಸ್. ರಾಜು ಪೂಜಾರಿ, ಮಾಜಿ ಸದಸ್ಯೆ ಗೌರಿ ದೇವಾಡಿಗ, ಶಿಕ್ಷಣ ಇಲಾಖೆ ಉಪನಿರ್ದೇಶಕ ಗಣಪತಿ ಕೆ., ಬೈಂದೂರು ಕ್ಷೇತ್ರ ಶಿಕ್ಷಣಾಧಿಕಾರಿ ನಾಗೇಶ್‌ ಕೆ. ನಾಯ್ಕ್, ಅಕ್ಷರ ದಾಸೋಹ ಕುಂದಾಪುರ ತಾಲೂಕು ಸಹಾಯಕ ನಿರ್ದೇಶಕ ಅರುಣ್ ಕುಮಾರ್ ಶೆಟ್ಟಿ, ಉದ್ಯಮಿಗಳಾದ ಮನಮೋಹನ್ ಕುಮಾರ್, ಪ್ರಕಾಶ್ ಶೆಟ್ಟಿ, ಪ್ರವೀಣ್ ಶೆಟ್ಟಿ, ಬಬ್ರುದ್ದಿನ್,‌ ಶೇಖರ್ ಪೂಜಾರಿ, ನಾಗೂರು ರಿಕ್ಷಾ ಟೆಂಪೋ ಮಾಲಕ-ಚಾಲಕರ ಸಂಘದ ಅಧ್ಯಕ್ಷ ಪ್ರವೀಣಚಂದ್ರ ಶೆಟ್ಟಿ, ಹಳೆ ವಿದ್ಯಾರ್ಥಿ ಸಂಘದ ಆದ್ಯಕ್ಷ ಮಹಮ್ಮದ್ ಮುಸ್ಸದ್ಧಿಕ್, ಮಾಜಿ ಅಧ್ಯಕ್ಷ ಮಹಮ್ಮದ್ ಅಶ್ರಫ್ ಮೊದಲಾದವರು ಇದ್ದರು.

ಸ.ಹಿ.ಪ್ರಾ. ಶಾಲೆ ಹಿಂದೂಸ್ಥಾನಿ ನಾಗೂರು ಇಲ್ಲಿನ ಮುಖ್ಯಶಿಕ್ಷಕ ವಿಶ್ವನಾಥ ಪೂಜಾರಿ ಸ್ವಾಗತಿಸಿ, ಪ್ರಸ್ತಾವನೆಗೈದರು.

‘ನಮ್ಮ ಶಾಲೆ ನಮ್ಮ ಜವಬ್ದಾರಿ’
ಸರಕಾರಿ ಶಾಲೆಯಲ್ಲಿ ಉಚಿತವಾಗಿ ಓದಿದವರು ಆ ಶಾಲೆಗಳನ್ನು‌ ಮರೆಯದೆ ತಮ್ಮ ಕೈಯಲ್ಲಾದ ಸಹಕಾರ ನೀಡಬೇಕು ಎಂಬ ನಿಟ್ಟಿನಲ್ಲಿ ‘ನಮ್ಮ ಶಾಲೆ ನಮ್ಮ ಜವಬ್ದಾರಿ’ ಎಂಬ ವಿನೂತನ ಚಿಂತನೆ ಸದ್ಯದಲ್ಲಿ ಆರಂಭವಾಗಲಿದೆ. ಈ ಮೂಲಕ ಹಳೆ ವಿದ್ಯಾರ್ಥಿಗಳನ್ನು ಒಂದುಗೂಡಿಸಿ ಅವರಿಂದ ಶಾಲೆಯ ಅಭ್ಯುದಯಕ್ಕೆ ಸಹಕಾರ ಪಡೆಯಲಾಗುತ್ತದೆ.
– ಎಸ್. ಮಧು ಬಂಗಾರಪ್ಪ (ಸಚಿವರು)

Comments are closed.