ಬೆಂಗಳೂರು: ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಅವರನ್ನು ಬಿಜೆಪಿ ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ ಅವರು ಆರು ವರ್ಷಗಳ ಕಾಲ ಪಕ್ಷದಿಂದ ಉಚ್ಚಾಟನೆ ಮಾಡಿ ಸೋಮವಾರ ಆದೇಶಿಸಿದ್ದಾರೆ.
ಪುತ್ರ ಕಾಂತೇಶ್ ಅವರಿಗೆ ಹಾವೇರಿ ಲೋಕಸಭಾ ಟಿಕೆಟ್ ನೀಡದ ಕಾರಣಕ್ಕೆ ಆಕ್ರೋಶಗೊಂಡ ಈಶ್ವರಪ್ಪ ಅವರು ಯಡಿಯೂರಪ್ಪ ಮತ್ತು ಪುತ್ರದ್ವಯರ ವಿರುದ್ಧ ಸಮರಕ್ಕಿಳಿದಿದ್ದರು. ಅಲ್ಲದೆ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಬಿ.ವೈ. ರಾಘವೇಂದ್ರ ವಿರುದ್ಧ ಬಂಡಾಯವಾಗಿ ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದರು. ನಾಮಪತ್ರ ಹಿಂಪಡೆಯಲು ಏ.22 ಅಂತಿಮ ದಿನವಾಗಿದ್ದು ನಾಮಪತ್ರ ವಾಪಾಸ್ ಪಡೆಯದೆ ಚುನಾವಣಾ ಕಣದಿಂದ ಹಿಂದೆ ಸರಿಯದ ಕಾರಣ ಪಕ್ಷದಿಂದ ಉಚ್ಚಾಟನೆ ಮಾಡಲಾಗಿದೆ.
ಆದೇಶದಲ್ಲಿ ಏನಿದೆ..?
“ಪಕ್ಷದ ಸೂಚನೆ ಕಡೆಗಣಿಸಿ ಪ್ರಸಕ್ತ ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಪಕ್ಷದ ಮುಜುಗರಕ್ಕೆ ಕಾರಣರಾಗಿದ್ದೀರಿ. ಇದು ಪಕ್ಷದ ಶಿಸ್ತು ಉಲ್ಲಂಘನೆಯಾಗಿದೆ. ಆದದ್ದರಿಂದ ತಮ್ಮನ್ನು ತಕ್ಷಣದಿಂದ ಜಾರಿಗೆ ಬರುವಂತೆ ಎಲ್ಲಾ ಜವಾಬ್ದಾರಿಗಳಿಂದ ಮುಕ್ತಗೊಳಿಸಿ 6 ವರ್ಷಗಳ ಕಾಲ ಪಕ್ಷದಿಂದ ಉಚ್ಚಾಟಿಸಲಾಗಿದೆ” ಎಂದು ಬಿಜೆಪಿ ರಾಜ್ಯ ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ ಪಾಟೀಲ್ ಉಚ್ಚಾಟನಾ ಆದೇಶದಲ್ಲಿ ತಿಳಿಸಿದ್ದಾರೆ.
ಚುನಾವಣಾ ಆಯೋಗ ಪಕ್ಷೇತರ ಅಭ್ಯರ್ಥಿ ಈಶ್ವರಪ್ಪ ಅವರಿಗೆ ಚುನಾವಣೆ ಚಿಹ್ನೆ ನೀಡಿದೆ. ‘ಕೈ ಕಟ್ಟಿಕೊಂಡ ರೈತ ಮತ್ತು ಎರಡು ಕಬ್ಬುಗಳು’ ಇರುವ ಚಿಹ್ನೆಯನ್ನು ಈಶ್ವರಪ್ಪ ಅವರದ್ದಾಗಿದೆ.
Comments are closed.