ಕರ್ನಾಟಕ

ಎಚ್.ಡಿ ರೇವಣ್ಣ, ಪ್ರಜ್ವಲ್‌ ರೇವಣ್ಣ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌ ದಾಖಲು!

Pinterest LinkedIn Tumblr

ಹಾಸನ: ಹಾಸನ ಜಿಲ್ಲೆ‌ಸಹಿತ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದ ಲೈಂಗಿಕ ದೌರ್ಜನ್ಯದ ವೀಡಿಯೋಗಳ ಪ್ರಕರಣ ಈಗ ಹೊಸ ತಿರುವು ಪಡೆದುಕೊಂಡಿದ್ದು ಮಾಜಿ ಸಚಿವ, ಶಾಸಕ ಎಚ್‌.ಡಿ. ರೇವಣ್ಣ ಮತ್ತು ಸಂಸದ ಪ್ರಜ್ವಲ್‌ ರೇವಣ್ಣ ವಿರುದ್ಧ ಹೊಳೆನರಸೀಪುರ ಪೊಲೀಸ್‌ ಠಾಣೆಯಲ್ಲಿ ರವಿವಾರ ಪ್ರಕರಣ ದಾಖಲಾಗಿದೆ.

47 ವರ್ಷದ ಮಹಿಳೆಯೊಬ್ಬರು ಲೈಂಗಿಕ ದೌರ್ಜನ್ಯದ ದೂರು ನೀಡಿದ್ದು, ಪೊಲೀಸರು ಐಪಿಸಿ 1860 (ಯು/ಎಸ್‌ 354 (ಎ), 354(ಡಿ), 506, 509ರ ಪ್ರಕಾರ ಪ್ರಕರಣ ದಾಖಲಿಸಿದ್ದಾರೆ. ಪ್ರಕರಣದಲ್ಲಿ ಎಚ್‌.ಡಿ. ರೇವಣ್ಣ ಅವರನ್ನು ಪ್ರಥಮ (ಎ 1)ಆರೋಪಿ, ಪ್ರಜ್ವಲ್‌ ರೇವಣ್ಣ ಅವರನ್ನು ದ್ವಿತೀಯ (ಎ 2) ಆರೋಪಿಗಳು.

ದೂರಿನಲ್ಲಿ ಏನಿದೆ?
ಹಾಸ್ಟೆಲ್‌ನಲ್ಲಿ ಅಡುಗೆ ಕೆಲಸ ಮಾಡಿಕೊಂಡಿದ್ದ ಮಹಿಳೆಯನ್ನು ರೇವಣ್ಣ ಅವರು ತಮ್ಮ ಮೊದಲ ಮಗನ ಮದುವೆ ಸಂದರ್ಭದಲ್ಲಿ ಮನೆಯ ಕೆಲಸಕ್ಕೆ ಕರೆಯಿಸಿಕೊಂಡಿದ್ದರು.‌ಆಕೆ ರೇವಣ್ಣ ಅವರ ಮನೆಯಲ್ಲಿ ಮೂರೂವರೆ ವರ್ಷ ಕೆಲಸ ಮಾಡಿಕೊಂಡಿದ್ದರು. ಕೆಲಸಕ್ಕೆ ಸೇರಿದ 4 ತಿಂಗಳ ಅನಂತರ ರೇವಣ್ಣ ಅವರು ಆ ಮಹಿಳೆಯನ್ನು ತಮ್ಮ ಕೊಠಡಿಗೆ ಬರುವಂತೆ ಕರೆಯುತ್ತಿದ್ದರು. ಭವಾನಿ ಅವರು ಮನೆಯಲ್ಲಿ ಇಲ್ಲದಿದ್ದಾಗ ಸ್ಟೋರ್‌ ರೂಂನಲ್ಲಿ ತನ್ನ ಕೈ ಹಿಡಿದೆಳೆದು ಹಣ್ಣು ಕೊಡುವ ನೆಪದಲ್ಲಿ ಮೈ ಮುಟ್ಟುತ್ತಿದ್ದರು. ಸೀರೆ ಕಿತ್ತು ಲೈಂಗಿಕ ದೌರ್ಜನ್ಯ ನಡೆಸುತ್ತಿದ್ದರು ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ಮಹಿಳೆ ವಿವರಿಸಿದ್ದಾರೆ.

ಹಲವಾರು ಬಾರಿ 2019ರಿಂದ 2022ರ ವರೆಗೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ದೂರಿನಲ್ಲಿ ವಿವರಿಸಿದ್ದಾರೆ.ರೇವಣ್ಣ ತನ್ನ ಮಗಳಿಗೆ ಹಲವು ಬಾರಿ ವೀಡಿಯೋ ಕರೆ ಮಾಡಿ ಅಸಭ್ಯ ಸಂಭಾಷಣೆ ಮೂಲಕ ಪ್ರಚೋದನೆ ಮಾಡುತ್ತಿದ್ದು, ಹೆದರಿದ್ದ ತನ್ನ ಮಗಳು ನಂಬರ್‌ ಬ್ಲಾಕ್‌ ಮಾಡಿದ್ದಳು ಎಂದು ದೂರಿನಲ್ಲಿ ವಿವರಿಸಿದ್ದಾರೆ.

ಪ್ರಜ್ವಲ್‌ ರೇವಣ್ಣ ಅವರದ್ದು ಎನ್ನಲಾದ ವೀಡಿಯೋಗಳು ಇತ್ತೀಚೆಗೆ ಜಾಲತಾಣಗಳಲ್ಲಿ ಹರಿದಾಡುತ್ತಿದ್ದುದರಿಂದ ಮಾನಸಿಕ ಹಿಂಸೆ ಆಗುತ್ತಿದೆ. ಹೀಗಾಗಿ ತನ್ನ ಮತ್ತು ನನ್ನ ಮಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಎಚ್‌.ಡಿ. ರೇವಣ್ಣ ಮತ್ತು ಪ್ರಜ್ವಲ್‌ ರೇವಣ್ಣ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ಮಹಿಳೆ ಮನವಿ ಮಾಡಿದ್ದಾರೆ.

Comments are closed.