ಕರಾವಳಿ

ಕೆಂಪೇಗೌಡರ ಸಾಧನೆ, ದೂರದೃಷ್ಟಿ ಚಿಂತನೆ ಎಲ್ಲರಿಗೂ ಮಾದರಿ: ಕುಂದಾಪುರ ಎಸಿ ರಶ್ಮೀ ಎಸ್.ಆರ್

Pinterest LinkedIn Tumblr

ಕುಂದಾಪುರ: ನಾಡಪ್ರಭು ಕೆಂಪೇಗೌಡರ ಜನಪರ ಕಾಳಜಿ ಮೆಚ್ಚುವಂತದ್ದು. ಬೆಂಗಳೂರು‌ ನಿರ್ಮಾಣದ ಹೊತ್ತಲ್ಲಿ ಕುಲಕಸುಬುಗಳನ್ನು ಸೃಷ್ಟಿಸಿದ್ದು, ಹೊರೆಗಲ್ಲುಗಳನ್ನು ನಿರ್ಮಿಸಿದ್ದು ಅವರ ದೂರಗಾಮಿ ಚಿಂತನೆ ತೋರಿಸುತ್ತದೆ. ನಾವಿರುವ ವಾತಾವರಣ ನಮ್ಮದು ಎಂಬ ರಕ್ಷಣೆ ಚಿಂತನೆ ಮೂಡಿದಾಗಲೇ ಸುಂದರ ವಾತಾವರಣ ನಿರ್ಮಾಣ ಸಾಧ್ಯ. ಜಯಂತಿಗಳ ಆಚರಣೆ ಮೂಲಕ ಜೀವನದಲ್ಲಿ ಬದಲಾವಣೆಯಾಗಬೇಕೆಂದು ಕುಂದಾಪುರ ಉಪವಿಭಾಗಾಧಿಕಾರಿ ರಶ್ಮೀ ಎಸ್.ಆರ್ ಹೇಳಿದರು.

ತಾಲೂಕು ಆಡಳಿತ ಕುಂದಾಪುರ, ಕನ್ನಡ‌ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಕುಂದಾಪುರ ಸರಕಾರಿ ಪದವಿಪೂರ್ವ ಕಾಲೇಜಿನ ಆವರಣದಲ್ಲಿರುವ ಶ್ರೀ ಲಕ್ಷ್ಮೀ ನರಸಿಂಹ ಕಲಾಮಂದಿರಲ್ಲಿ ಗುರುವಾರ ನಡೆದ ನಾಡಪ್ರಭು ಶ್ರೀ ಕೆಂಪೇಗೌಡ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕೋಟೇಶ್ವರ ಸರಕಾರಿ ಪ್ರಥಮದರ್ಜೆ ಕಾಲೇಜಿನ ಉಪನ್ಯಾಸಕಿ ಶರಾವತಿ ಅವರು ಉಪನ್ಯಾಸ ನೀಡಿ ಮಾತನಾಡಿ, ಕೆಂಪೇಗೌಡ ಅವರು ಬಾಲ್ಯದಿಂದಲೇ ಮಹತ್ವಾಕಾಂಕ್ಷೆಯ ಯೋಜನೆಗಳನ್ನು ಹೊಂದಿದ್ದರು. ಬೆಂಗಳೂರು ನಿರ್ಮಾಣಕ್ಕೆ 1514 ಜನವರಿ 14 ರಂದು ಗುದ್ದಲಿ ಪೂಜೆ ಇಂದಿನ ರಾಜಾ ಸರ್ಕಲ್ ಎಂಬಲ್ಲಿ ನಡೆದಿದ್ದು ಅಂದಿನಿಂದ ಇಂದಿನವರೆಗೆ ಬೆಂಗಳೂರು ಬೆಳೆಯುತ್ತಿದ್ದು ಜಗದಗಲದೆತ್ತರಕ್ಕೆ‌ ಕೀರ್ತಿ ವಿಸ್ತರಿಸಿದೆ. ಜನರುಗಳು ನಾಡ ದೊರೆಯ ಕ್ಷೇಮಕ್ಕೆ ಹರಕೆ ಹೊತ್ತ ಶಾಸನವಿರುವುದು ಕೆಂಪೇಗೌಡರದ್ದು ಮಾತ್ರ. ದುಡಿಯುವ ಕನಸು ಹೊತ್ತವರನ್ನು ಬೆಂಗಳೂರು ಕೈಬಿಡುವುದಿಲ್ಲ. ಎಲ್ಲಾ ಕುಲಕಸುಬುಗಳು ಇಲ್ಲಿರಬೇಕೆಂಬ ದೂರದೃಷ್ಟಿ ಚಿಂತನೆ ಹೊಂದಿದ್ದರು. ಕೋಟೆಗಳು, ಕೆರೆಗಳು ಹಾಗೂ ಪೇಟೆಗಳು, ಕಾವಲು ಗೋಪುರಗಳ ನಿರ್ಮಿಸಿದ್ದರು. ರೈತರಿಗೆ, ವ್ಯಾಪಾರಿಗಳಿಗಾಗಿ ಕೆಂಪೇಗೌಡರು ನೀಡಿದ ಸಹಕಾರ ಅಪಾರ. ನ್ಯಾಯದಾನದಲ್ಲೂ ಇವರನ್ನು‌ ಮೀರಿಸಲು ಆಗಿಲ್ಲ. ಬೆಂಗಳೂರು ನಿರ್ಮಾತೃ ಜನಾನುರಾಗಿ ವ್ಯಕ್ತಿತ್ವದ ಕೆಂಪೇಗೌಡರ ಇತಿಹಾಸ ರೋಚಕವಾದದ್ದು. ಧರ್ಮಭೀರು, ನ್ಯಾಯಭೀರು ನಾಡ ಪ್ರಭು ಕೆಂಪೇಗೌಡರ ಜೀವನವೇ ಆದರ್ಶಪ್ರಾಯವಾಗಿದೆ. ಕುಂದಾಪುರಗರಿಂದ ಹಿಡಿದು ಅಸಂಖ್ಯಾತ ಹಳ್ಳಿಗಳಿಂದ ಬರುವ ಜನರಿಗೆ ಬದುಕು ಕಟ್ಟಿಕೊಟ್ಟಿದ್ದು ನಮ್ಮ ಹೆಮ್ಮೆಯ ರಾಜಧಾನಿ ಬೆಂಗಳೂರು ಎಂದರು.

ಕುಂದಾಪುರ ತಹಶಿಲ್ದಾರ್ ಶೋಭಾಲಕ್ಷ್ಮಿ ಎಚ್.ಎಸ್ ಪ್ರಸ್ತಾವನೆಗೈದರು.

ಡಿವೈಎಸ್ಪಿ ಬೆಳ್ಳಿಯಪ್ಪ ಕೆ.ಯು., ಪುರಸಭೆ ಮುಖ್ಯಾಧಿಕಾರಿ ಮಂಜುನಾಥ್ ಆರ್., ಕುಂದಾಪುರ ಸರಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ರಾಮಕೃಷ್ಣ ಬಿ.ಜಿ., ಉಪಪ್ರಾಂಶುಪಾಲ ಕಿರಣ ಹೆಗ್ಡೆ ಇದ್ದರು.

ಉಪತಹಶಿಲ್ದಾರ್ ವಿನಯ್ ಸ್ವಾಗತಿಸಿದರು. ದೈಹಿಕಶಿಕ್ಷಣ ಶಿಕ್ಷಕ ಚಂದ್ರಶೇಖರ ಬೀಜಾಡಿ ಕಾರ್ಯಕ್ರಮ ನಿರೂಪಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಶೋಭಾ ಶೆಟ್ಟಿ ವಂದಿಸಿದರು.

Comments are closed.