ಕುಂದಾಪುರ: ಪತಿ-ಪತ್ನಿ ಕಲಹ ಪ್ರಕರಣ ಪೊಲೀಸ್ ಠಾಣೆಯ ಮೆಟ್ಟಿಲೇರಿ ಪೊಲೀಸರು ಇಬ್ಬರಿಗೂ ಬುದ್ದಿವಾದ ಹೇಳಿ ಕಳಿಸಿದ್ದು ರಿಕ್ಷಾದಲ್ಲಿ ತೆರಳುತ್ತಿದ್ದ ವೇಳೆ
ಪತ್ನಿ ಹಾಗೂ ಮನೆಯವರೆದುರಿಗೆ ಪತಿ ಸೇತುವೆಯಿಂದ ನದಿಗೆ ಹಾರಿದ ಘಟನೆ ಕಂಡ್ಲೂರು ಎಂಬಲ್ಲಿ ಮಂಗಳವಾರ ಮಧ್ಯಾಹ್ನದ ಸುಮಾರಿಗೆ ನಡೆದಿದೆ.
ಕಾಳಾವರ ಜನತಾ ಕಾಲೋನಿ ನಿವಾಸಿ ಹರೀಶ್ (44) ನದಿಗೆ ಹಾರಿದ್ದು ಅವರ ಶೋಧ ಕಾರ್ಯ ರಾತ್ರಿಯವರೆಗೆ ನಡೆದಿದೆ.
ಘಟನೆ ವಿವರ: ವೃತ್ತಿಯಲ್ಲಿ ಛಾಯಾಗ್ರಾಹಕರಾಗಿರುವ ಹರೀಶ್ ಸುಮಾರು 13 ವರ್ಷ ಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದು ಇತ್ತಿಚಿನ ದಿನಗಳಲ್ಲಿ ಇಬ್ಬರ ನಡುವೆ ಗಲಾಟೆಯಾಗುತ್ತಿತ್ತು. ಜು.16ರಂದು ಹರೀಶ್‌ನ ವಿರುದ್ದ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಗೆ ಪತ್ನಿ ದೂರು ಅರ್ಜಿ ಕೊಟ್ಟಿದ್ದರಿಂದ ಪೊಲೀಸರು ಮಗನನ್ನು ಕರೆದುಕೊಂಡು ಬರುವಂತೆ ಹೇಳಿದ್ದರು. ಅದರಂತೆ ಮಗ ಹರೀಶ್, ಮಗಳೊಂದಿಗೆ ಠಾಣೆಗೆ ಬಂದಿದ್ದು ದಂಪತಿಗಳಿಗೆ ಪೊಲೀಸರು ಬುದ್ದಿ ಮಾತನ್ನು ಹೇಳಿ ಮುಂದಕ್ಕೆ ಒಳ್ಳೆಯ ರೀತಿಯಲ್ಲಿ ಜೀವನ ನಡೆಸುವಂತೆ ತಿಳುವಳಿಕೆ ಹೇಳಿ ಕಳುಹಿಸಿಕೊಟ್ಟಿದ್ದರು. ತಾವು ಬಾಡಿಗೆ ಮಾಡಿಕೊಂಡು ಬಂದ ಆಟೋ ರಿಕ್ಷಾದಲ್ಲಿ ತನ್ನ ಮಗ ಹರೀಶ್, ಸೊಸೆ, ಮಗಳು ಹೊರಟಿದ್ದು ಆಟೋ ರಿಕ್ಷಾವು ಕಂಡ್ಲೂರು ಸೇತುವೆಯ ಮೇಲೆ ಸಂಚರಿಸುತ್ತಿರುವಾಗ ಮಗ ಹರೀಶ್‌ನು ರಿಕ್ಷಾ ಚಾಲಕನಲ್ಲಿ ನಿಲ್ಲಿಸುವಂತೆ ಹೇಳಿದ್ದು ಆಟೋ ವೇಗ ಕಡಿಮೆ ಮಾಡಿದಾಗ ಹರೀಶ್‌ನು ಒಮ್ಮೇಲೆ ರಿಕ್ಷಾದಿಂದ ಕೆಳಕ್ಕೆ ಇಳಿದು ಸೇತುವೆಯ ತಡೆಬೇಲಿಯನ್ನು ಹಾರಿ ಕಂಡ್ಲೂರು ವಾರಾಹಿ ನದಿಗೆ ದುಮುಕಿದ್ದು ಹೊಳೆಯ ನೀರಿನಲ್ಲಿ ಮುಳುಗಿ ನಾಪತ್ತೆಯಾಗಿದ್ದಾರೆ. ನಾಪತ್ತೆಯಾದ ಮಗ ಹರೀಶ್‌ನನ್ನು ಪತ್ತೆ ಹಚ್ಚಿಕೊಡಬೇಕೆಂದು ತಂದೆ ದೂರಿನಲ್ಲಿ ತಿಳಿಸಿದ್ದಾರೆ.
ನೀರಿನಲ್ಲಿ ಹಾರಿ ಕಾಣೆಯಾದ ಹರೀಶ್ ಅವರ ಹುಡುಕಾಟಕ್ಕೆ ಪೊಲೀಸರು, ಅಗ್ನಿಶಾಮಕ, ಸ್ಥಳೀಯರು, ಮೀನುಗಾರರು ವ್ಯಾಪಕಶೋಧ ನಡೆಸಿದ್ದು ಮಳೆ ಹಿನ್ನೆಲೆ ನೀರಿನ ಹರಿವು ಹೆಚ್ಚಿರುವ ಕಾರಣ ಸಾಧ್ಯವಾಗಿಲ್ಲ.
ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿದೆ.
Comments are closed.