ಕುಂದಾಪುರ: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಯಾರು ಹೆಚ್ಚಿನ ಅಧ್ಯಯನ ಮಾಡುತ್ತಾರೋ ಅವರು ಖಂಡಿತವಾಗಿ ಯಶಸ್ವಿನ ಗುರಿಯನ್ನು ತಲುಪುತ್ತಾರೆ. ಸಿಗುವ ಸಮಯವನ್ನು ಮಕ್ಕಳು ಸದುಪಯೋಗಪಡಿಸಿಕೊಂಡು ಹೆಚ್ಚಿನ ಜ್ಞಾನವನ್ನು ಸಂಪಾದಿಸಿದಾಗ ಉತ್ತಮ ನಾಗರಿಕರಾಗಲು ಸಾಧ್ಯವಾಗುತ್ತದೆ. ಬ್ಯಾಂಕಿಂಗ್, ಹೋಟೆಲ್, ಶಿಕ್ಷಣ, ಷೇರು ಮಾರುಕಟ್ಟೆ ಉದ್ಯಮಗಳಲ್ಲಿ ಮುಂಚೂಣಿಯಲ್ಲಿರುವ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯು ಮಕ್ಕಳ ಕಲಿಕೆಗೆ ಹೆಚ್ಚು ಸಹಕಾರಿಯಾಗಿದೆ ಎಂದು ಉಡುಪಿ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಎಸ್.ಟಿ ಸಿದ್ದಲಿಂಗಪ್ಪ ಹೇಳಿದರು.
ಅವರು ಲಿಟಲ್ ಸ್ಟಾರ್ ಇಂಗ್ಲೀಷ್ ಮೀಡಿಯಂ ಸ್ಕೂಲ್‌ನ ವಿದ್ಯಾರಣ್ಯ ಕ್ಯಾಂಪಸ್‌ನಲ್ಲಿ ನಡೆದ ಈ ಸಾಲಿನ ಶಾಲಾ ವಿದ್ಯಾರ್ಥಿ ಸಂಸತ್ತು ಪದಗ್ರಹಣ ಮತ್ತು ಕಾನೂನು ಅರಿವು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಭಾರತ್ ಸ್ಕೌಟ್ ಮತ್ತು ಗೈಡ್ಸ್ ಉಡುಪಿ ಜಿಲ್ಲಾ ಮುಖ್ಯ ಆಯುಕ್ತರಾದ ಜಯಕರ ಶೆಟ್ಟಿ ಇಂದ್ರಾಳಿ ಮಾತನಾಡಿ, ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ವ್ಯಕ್ತಿತ್ವ ಇಡೀ ಜಗತ್ತಿಗೆ ಮಾದರಿಯಾದದ್ದು. ಮಕ್ಕಳ ಭವಿಷ್ಯದಲ್ಲಿ ಯಶಸ್ಸನ್ನು ಕಾಣಲು ಅವರ ಆದರ್ಶವನ್ನು ಮಾದರಿಯಾಗಿ ಸ್ವೀಕರಿಸಬೇಕು. ಮಕ್ಕಳು ನಮ್ಮ ಕಾನೂನುಗಳನ್ನು ತಪ್ಪದೇ ಪಾಲಿಸಿ, ದೇಶ ಹಾಗೂ ಸಂವಿಧಾನಕ್ಕೆ ಗೌರವ ನೀಡಬೇಕು ಎಂದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಶಾಲಾ ಆಡಳಿತ ಮಂಡಳಿ ಸುಜ್ಞಾನ್ ಎಜುಕಷನಲ್ ಟ್ರಸ್ಟ್ ನ ಅಧ್ಯಕ್ಷ ಡಾ. ರಮೇಶ್ ಶೆಟ್ಟಿ ಮಾತನಾಡಿ, ಶಿಕ್ಷಣ ಕ್ಷೇತ್ರದಲ್ಲಿ ಸಂಪನ್ಮೂಲ ವ್ಯಕ್ತಿಗಳ ಜ್ಞಾನ ಮತ್ತು ವ್ಯಕ್ತಿತ್ವವನ್ನು ಮಕ್ಕಳು ಮಾದರಿಗಾಗಿ ಅನುಸರಿಸಿದರೆ ಒಳ್ಳೆಯ ವ್ಯಕ್ತಿಗಳಾಗಿ ಸಮಾಜದಲ್ಲಿ ಉತ್ತಮ ಸ್ಥಾನ ಹೊಂದಲು ಸಾಧ್ಯ ಎಂದರು.
ವೇದಿಕೆಯಲ್ಲಿ ಶಾಲಾ ಆಡಳಿತ ಮಂಡಳಿ ಸುಜ್ಞಾನ್ ಎಜುಕೇಶನಲ್ ಟ್ರಸ್ಟ್ ನ ಕಾರ್ಯದರ್ಶಿ ಪ್ರತಾಪ್ ಚಂದ್ರ ಶೆಟ್ಟಿ ಉಪಸ್ಥಿತರಿದ್ದರು. ಸ್ಕೌಟ್ ಮತ್ತು ಗೈಡ್ಸ್ ವಿದ್ಯಾರ್ಥಿಗಳ ಪಥ ಸಂಚಲನದ ಮೂಲಕ ಅತಿಥಿಗಳು ಮತ್ತು ವಿದ್ಯಾರ್ಥಿ ಸಂಸತ್ತಿನ ಪದಾಧಿಕಾರಿಗಳನ್ನು ವೇದಿಕೆಗೆ ಕರೆತಂದಿದ್ದು ವಿಶೇಷವಾಗಿ ಗಮನವಾಗಿ ಸೆಳೆಯಿತು. ಸುಜ್ಞಾನ್ ಎಜುಕೇಶನಲ್ ಟ್ರಸ್ಟ್‌ನ ಕೋಶಾಧಿಕಾರಿ ಭರತ್ ಶೆಟ್ಟಿ ಸ್ವಾಗತಿಸಿದರು. ಮುಖ್ಯ ಶಿಕ್ಷಕ ಪ್ರದೀಪ್ ವಿದ್ಯಾರ್ಥಿ ಸಂಸತ್ತಿನ ಪದಾಧಿಕಾರಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಶಿಕ್ಷಕಿಯರಾದ ದೀಕ್ಷಾ ನಿರೂಪಿಸಿ, ಸಪ್ತಮಿ ವಂದಿಸಿದರು.
Comments are closed.