ಕರ್ನಾಟಕ

ಬೆಂಗಳೂರಿಗೆ ನಾಯಿ ಮಾಂಸ ಸಾಗಾಟ ಆರೋಪ: ಲ್ಯಾಬ್ ವರದಿ ಆಧರಿಸಿ ಕಾನೂನು ಕ್ರಮ- ಆಹಾರ ಇಲಾಖೆ

Pinterest LinkedIn Tumblr

ಬೆಂಗಳೂರು: ಬೆಂಗಳೂರು ರೈಲು ನಿಲ್ದಾಣದಲ್ಲಿ ಭಾರೀ ಪ್ರಮಾಣದ ಮಾಂಸ ಸಾಗಾಟ ಪತ್ತೆಯಾಗಿದ್ದು, ಅದರಲ್ಲಿ ನಾಯಿ ಮಾಂಸ ಬೆರೆಸಲಾಗಿದೆ ಎಂದು ಹಿಂದೂಪರ ಸಂಘಟನೆಯ ಪುನೀತ್ ಕೆರೆಹಳ್ಳಿ ಅವರು ಆರೋಪಿಸಿದ್ದಾರೆ.

ಆರೋಪ ಕೇಳಿಬಂದ ನಂತರ ಕರ್ನಾಟಕ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಶನಿವಾರ ಪಾರ್ಸೆಲ್‌ಗಳಲ್ಲಿ ಪತ್ತೆಯಾದ ಪ್ರಾಣಿಗಳ ಮಾಂಸದ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ತಿಳಿಸಿದೆ.

ಲ್ಯಾಬ್ ವರದಿ ಬಂದ ನಂತರ ವರದಿ ಆಧರಿಸಿ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಕಮಿಷನರೇಟ್ ತಿಳಿಸಿದೆ.

ರೈಲ್ವೆ ಮೂಲಗಳ ಪ್ರಕಾರ, ಶುಕ್ರವಾರ ರಾತ್ರಿ ರೈಲಿನಲ್ಲಿ ಜೈಪುರದಿಂದ ರಟ್ಟಿನ ಪೆಟ್ಟಿಗೆಗಳಲ್ಲಿ ಲೋಡ್ ಮಾಡಲಾದ ಸುಮಾರು ಮೂರು ಟನ್ ತೂಕದ ಮಾಂಸ ಬೆಂಗಳೂರಿಗೆ ಸಾಗಿಸಲಾಗಿದ್ದು, ಪುನೀತ್ ಕೆರೆಹಳ್ಳಿ ನೇತೃತ್ವದಲ್ಲಿ ಕೆಲವು ಹಿಂದೂಪರ ಕಾರ್ಯಕರ್ತರು ಅದರಲ್ಲಿ ನಾಯಿ ಮಾಂಸ ಎಂದು ಆರೋಪಿಸಿದ್ದಾರೆ. ಮಾಂಸ ಸಾಗಾಟ ಮಾಡಿದ ಮಾಂಸದ ವ್ಯಾಪಾರಿ ಅಬ್ದುಲ್ ರಜಾಕ್, ಈ ಆರೋಪವನ್ನು ತಳ್ಳಿಹಾಕಿದರು ಮತ್ತು ಇದು ಕುರಿ ಮಾಂಸ ಎಂದು ಹೇಳಿದ್ದಾರೆ.

ಈ ಬಗ್ಗೆ ಆರೋಗ್ಯ ಸಚಿವ ದಿನೇಶ್ ಗುಂಡುರಾವ್ ಅವರು ಪ್ರಕಟಣೆ ನೀಡಿದ್ದು, ಬೆಂಗಳೂರು ನಗರಕ್ಕೆ ರೈಲುಗಳ ಮೂಲಕ ಪ್ರಾಣಿಗಳ ಮಾಂಸ ಸರಬರಾಜು ಆಗುತ್ತಿರುವ ಕುರಿತು ಬಿತ್ತರವಾಗುತ್ತಿರುವ ಸುದ್ದಿಗಳ ಕುರಿತ ಸ್ಪಷ್ಟನೆ ಇಲ್ಲಿದೆ.

ಈ ಕುರಿತು ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳು & ಪೊಲೀಸರು ತಪಾಸಣೆ ನಡೆಸಿದ್ದು ರಾಜಸ್ಥಾನದಿಂದ ಬಂದಿರುವ ಪಾರ್ಸೆಲ್ ಗಳಲ್ಲಿ ಪ್ರಾಣಿಗಳ ಮಾಂಸವಿರುವುದು ಕಂಡುಬಂದಿದೆ. ಯಾವ ಪ್ರಾಣಿಯ ಮಾಂಸ ಎಂದು ಖಚಿತಪಡಿಸಿಕೊಳ್ಳಲು ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯದ ವಿಶ್ಲೇಷಣೆಗೆ ಕಳುಹಿಸಲಾಗಿದೆ.

ಪಾರ್ಸೆಲ್ ಕಳುಹಿಸಿದವರ & ಸ್ವೀಕರಿಸಿದವರ ವಿವರ ಸಂಗ್ರಹಿಸಲಾಗಿದ್ದು ಪ್ರಯೋಗಾಲಯದ ಪರೀಕ್ಷಾ ಫಲಿತಾಂಶ ಬಂದ ನಂತರ ಲೋಪದೋಷಗಳು ಕಂಡುಬಂದಲ್ಲಿ ಸಂಬಂಧಪಟ್ಟವರ ಮೇಲೆ ಸೂಕ್ತ ಕಾನೂನುಕ್ರಮ ಕೈಗೊಳ್ಳಲಾಗುವುದು. ಸಾರ್ವಜನಿಕರು ಅನಗತ್ಯ ಗೊಂದಲಗಳಿಗೆ ಒಳಗಾಗಬಾರದು ಎಂದು ಈ ಮೂಲಕ ಮನವಿ ಮಾಡುತ್ತೇನೆ ಎಂದಿದ್ದಾರೆ.

Comments are closed.