ಕರಾವಳಿ

ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದಿಂದ ಪತ್ರಿಕಾ ದಿನಾಚರಣೆ | ಹಿರಿಯ ಪತ್ರಕರ್ತ ಶ್ರೀಪತಿ ಹೆಗ್ಡೆ ಹಕ್ಲಾಡಿಯವರಿಗೆ ಸನ್ಮಾನ

Pinterest LinkedIn Tumblr

ಕುಂದಾಪುರ: ಬದಲಾವಣೆಯಾಗಿರುವ ಮಾಧ್ಯಮ ಜಗತ್ತು ಪ್ರಸರಣ ವಿಭಾಗದ ಅಡಿಯಲ್ಲಿ ಕಾರ್ಯನಿರ್ವಹಿಸುವ ಅನಿವಾರ್ಯತೆ ಸೃಷ್ಠಿಯಾಗಿರುವುದರಿಂದ, ಬದಲಾವಣೆಯ ಕಾಲಘಟ್ಟಕ್ಕೆ ಹೊಂದಿಕೊಂಡಿರುವ ಪತ್ರಕರ್ತರು ಸಂವೇದನಾಶೀಲರಾಗಿ ವೃತ್ತಿ ಬದ್ದತೆಯನ್ನು ಉಳಿಸಿಕೊಳ್ಳುವ ಅನಿವಾರ್ಯತೆ ಹೆಚ್ಚಾಗಿದೆ ಎಂದು ಸಾಮಾಜಿಕ‌ ಚಿಂತಕ, ಜಾದುಗಾರ ಓಂ ಗಣೇಶ್ ಉಪ್ಪುಂದ ಅಭಿಪ್ರಾಯ ವ್ಯಕ್ತಪಡಿಸಿದರು.

ಕುಂದಾಪುರ ಜೆಸಿ ಭವನದಲ್ಲಿ ಶನಿವಾರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ನಡೆದ ಪತ್ರಿಕಾ ದಿನಾಚರಣೆಯನ್ನು ಟೈಪ್ ರೈಟರ್ ನಲ್ಲಿ ಅಕ್ಷರದ ಪಡಿಯಚ್ಚು ಮೂಡಿಸುವ‌ ಮೂಲಕ‌ ಉದ್ಘಾಟನೆಯನ್ನು ಮಾಡಿ ಅವರು‌ ಮಾತನಾಡಿದರು.

ಪತ್ರಗಳ ಬರವಣಿಗೆಗಳ ಮೂಲಕ‌ ಆರಂಭವಾಗುವ ಪತ್ರಕರ್ತರ ದೈನಂದಿನ ಬದುಕು ಸಹನೆ, ಬದ್ದತೆ ಮತ್ತು ಜವಾಬ್ದಾರಿಯ ಮೂಲಕ ಸಾಗಬೇಕಾಗಿದೆ. ಸಂವಿಧಾನದ ನಾಲ್ಕನೇ ಅಂಗ‌ ಎನ್ನುವ ವ್ಯಾಖ್ಯಾನಕ್ಕೆ ಒಳಗಾಗಿರುವ ಮಾಧ್ಯಮಗಳು ಸಮಾಜದ ಜನರ ಮನಸ್ಥಿತಿಯನ್ನು ತೆರೆದಿಡುವ ಪ್ರಾಮಾಣಿಕ ಕರ್ತವ್ಯವನ್ನು ನಿರ್ವಹಿಸುತ್ತದೆ. ಆದರೆ ಈ ವೃತ್ತಿಪರರಿಗೆ ಕನಿಷ್ಠ ಪ್ರಾಥಮಿಕ‌ ಶಾಲಾ‌ ಶಿಕ್ಷಕರಿಗೆ ದೊರಕುವ ಸೌಲಭ್ಯಗಳಾದರೂ ದೊರಕುತ್ತಿದೆಯೇ ಎಂದು ಪ್ರಶ್ನಿಸುವ ಕಾಲಘಟ್ಟದಲ್ಲಿ‌ ನಾವಿದ್ದೇವೆ. ಚಿಂತನೆಯ ಪ್ರಬುದ್ದತೆಗಳನ್ನೇ ಬಂಡವಾಳವಾಗಿಸಿಕೊಂಡಿರುವ ಮಾಧ್ಯಮ ಮಿತ್ರರು ಸ್ವಂತಕ್ಕೆ ಸತ್ತು ಜಗತ್ತಿಗೆ ಬದುಕು ಎನ್ನುವ ಸ್ವಯಂ ವಾತಾವರಣವನ್ನು ನಿರ್ಮಿಸಿಕೊಂಡಿದ್ದಾರೆ. ಮರ್ಯಾದೆ ಎನ್ನುವ ಅಂಜಿಕೆಯ ಕಾಲಘಟ್ಟದಲ್ಲಿ ಪತ್ರಕರ್ತರ ಲೇಖನಿಗೆ ಇದ್ದ ಪ್ರಭಾವ ಪ್ರಸ್ತುತ ಇಲ್ಲ‌ಎನ್ನುವುದೇ ನೋವಿನ ಸಂಗತಿ. ಪತ್ರಿಕಾ ವರದಿಯ ಕೊನೆಯ ಸಾಲಿನಲ್ಲಿ ಬರುವ ಹೆಸರಿಗಾಗಿ ಕಾತರದಿಂದ ಕಾಯುತ್ತಿದ್ದ ಪತ್ರಿಕೋದ್ಯಮದ ಆ ದಿನಗಳು ಬದಲಾವಣೆಯಾಗಿದ್ದು, ತಂತ್ರಜ್ಞಾನದ ಬೆಳವಣಿಗೆಯ ಜೊತೆ ಪತ್ರಿಕೆಯೊಂದಿಗಿನ‌ ಜನರ ಭಾವನಾತ್ಮಕವಾದ ಸಂಬಂಧಗಳು ಬದಲಾಗುತ್ತಿದೆ ಎಂದರು.

ರೋಟರಿ ಜಿಲ್ಲಾ ಮಾಜಿ ಸಹಾಯಕ ಗವರ್ನರ್ ಕೆ.ಆರ್ ನಾಯ್ಕ್, ಶ್ರೇಷ್ಠ ಹಾಗೂ ಗೌರವದ ಜವಾಬ್ದಾರಿಯನ್ನು ನಿರ್ವಹಿಸುವ ಪತ್ರಕರ್ತರಿಗೆ ಸಮಾಜ ಎಂದೂ ಗೌರವಾಧರಣೆಗಳನ್ನು ನೀಡುತ್ತದೆ. ಎಷ್ಟೇ ತಂತ್ರಜ್ಞಾನಗಳು ಅಭಿವೃದ್ದಿಯಾದರೂ ಮುದ್ರಣ ಮಾಧ್ಯಮದೊಂದಿಗಿನ ಸಂಬಂಧಗಳು ಓದುಗರಲ್ಲಿ ಸದಾ ಜಾಗೃತವಾಗಿರುತ್ತದೆ. ಆಮೀಷ ಹಾಗೂ ಒತ್ತಡಗಳಿಗೆ ಬಲಿಯಾಗದೆ ಪಾರದರ್ಶಕತೆಯ ನೈಜ ವರದಿ ಮಾಡುವ ಬದ್ದತೆಗಳು ಮಾಧ್ಯಮ ಮಿತ್ರರಿಗೆ ಇರಬೇಕು ಎಂದರು.

ಸನ್ಮಾನ ಸ್ವೀಕರಿಸಿ‌ ಮಾತನಾಡಿದ ಹಿರಿಯ ಪತ್ರಕರ್ತ ಶ್ರೀಪತಿ ಹೆಗ್ಡೆಯವರು, ಅನುಭವಗಳೇ ಜೀವನಪಾಠವಾಗುತ್ತದೆ. ಹಿಂದೆ ಕೃಷಿಯಂತೆ ವೃತ್ತಿಯನ್ನು ಹಸನು ಮಾಡಲು ಅವಕಾಶವಿದ್ದ ಪತ್ರಿಕೋದ್ಯಮ ಇಂದು ಪತ್ರಿಕಾರಂಗವಾಗಿದೆ‌.‌ ಬರಹಗಳ‌ ಮೂಲಕ ಪತ್ರಕರ್ತರು ಓದುಗರಿಗೆ ಹತ್ತಿರವಾಗಬೇಕು. ಘರ್ಷಣೆಯ ಮೂಲಕ ಬೆಳೆದ ಸಂಬಂಧಗಳು ಶಾಶ್ವತವಾಗಿರುತ್ತದೆ. ಸಂಘ-ಸಂಸ್ಥೆಗಳು ಸದಸ್ಯರ ಹಿತರಕ್ಷಣೆ ಹಾಗೂ ವೃತ್ತಿ ಬದ್ದತೆಯನ್ನು ಗೌರವಿಸುವ ಕೆಲಸ ಮಾಡಬೇಕು. ಪ್ರತಿಯೊಬ್ಬರ ಜೀವನದಲ್ಲಿಯೂ ಬದುಕಿನ‌ ಬದ್ದತೆಗಳನ್ನು ಅಳವಡಿಸಿಕೊಂಡಾಗ ಸ್ವತಂತ್ರ ಬದುಕನ್ನು‌ ಕಟ್ಟಿಕೊಳ್ಳಲು ಸಾಧ್ಯ ಎಂದರು.

ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ನಾಗರಾಜ ರಾಯಪ್ಪನಮಠ ಅಧ್ಯಕ್ಷತೆ ವಹಿಸಿದ್ದರು. ಕುಂದಾಪುರ ಅಂಚೆ ಇಲಾಖೆಯ ಸಹಾಯಕ ಅಧೀಕ್ಷಕ ಸತೀಶ್ ಇಲಾಖೆಯ ಗ್ರಾಹಕಸ್ನೇಹಿ ಯೋಜನೆಗಳ ಕುರಿತು ಹಾಗೂ ವಿಮಾ ಯೋಜನೆಗಳ ಕುರಿತು ಮಾಹಿತಿ ನೀಡಿದರು‌. ತಾಲೂಕು ಸಂಘದ ಉಪಾಧ್ಯಕ್ಷ ಚಂದ್ರಮ ತಲ್ಲೂರು, ಕೋಶಾಧಿಕಾರಿ ಟಿ. ಲೋಕೇಶ್ ಆಚಾರ್ಯ ವೇದಿಕೆಯಲ್ಲಿದ್ದರು.

ಆಕಾಶ್ ನಿತ್ಯಾನಂದ ಗಾಣಿಗ ತೆಕ್ಕಟ್ಟೆ ಹಾಗೂ ಶ್ರೀದೇವಿ ಇನ್‌ಸ್ಟಿಟ್ಯೂಟ್‌ನ ನಿಖಿಲ್ ಅವರನ್ನು ಗೌರವಿಸಲಾಯಿತು.

ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ‌ ಕಾರ್ಯದರ್ಶಿ ಗಣೇಶ್ ಐಶ್ವರ್ಯ ಬೀಜಾಡಿ ಸ್ವಾಗತಿಸಿದರು. ಪ್ರಶಾಂತ ಪಾದೆ ಸನ್ಮಾನ ಪತ್ರ ವಾಚಿಸಿದರು. ಕಾರ್ಯಕಾರಿ‌ ಮಂಡಳಿಯ ಸದಸ್ಯ ಶ್ರೀಕಾಂತ ಹೆಮ್ಮಾಡಿ ನಿರೂಪಿಸಿದರು.

Comments are closed.