ಕರ್ನಾಟಕ

ಕೆಆರ್​ಎಸ್​ ಭರ್ತಿ: ಕಾವೇರಿಗೆ ಬಾಗಿನ ಅರ್ಪಿಸಿದ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್

Pinterest LinkedIn Tumblr

ಮಂಡ್ಯ: ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಮವಾರ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೃಷ್ಣರಾಜಸಾಗರ ಜಲಾಶಯ ಭರ್ತಿಯಾಗಿರುವ ಹಿನ್ನೆಲೆಯಲ್ಲಿ ಬಾಗಿನ ಅರ್ಪಿಸಿದರು. ಬೆಳಗ್ಗೆ 11 ಗಂಟೆಯಿಂದ ಆರಂಭವಾದ ಅಭಿಜಿತ್ ಮುಹೂರ್ತದಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಸೇರಿದಂತೆ ಸಚಿವರು, ಶಾಸಕರು ಸೇರಿ ಕಾವೇರಿಗೆ ವಿಶೇಷ ಪೂಜೆ ಸಲ್ಲಿಸಿ, ಬಾಗಿನ ಅರ್ಪಿಸಿದರು.

ಬಳಿಕ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ರೈತರಿಗೆ ಯಾವುದೇ ಸಮಸ್ಯೆಯಾಗಿಲ್ಲ. ಬೇರೆ ಸರ್ಕಾರವಿದ್ದಾಗ ಗೋಲಿಬಾರ್ ನಡೆದು ರೈತರು ಸತ್ತಿದ್ದಾರೆ. ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುತ್ತಿದ್ದೇವೆ. ಕಳೆದ ವರ್ಷ ಭೀಕರ ಬರಗಾಲವಿತ್ತು. ಕೇಂದ್ರ ಸರ್ಕಾರ ಪರಿಹಾರ ಕೊಡಲಿಲ್ಲ. ನಾವು ಸುಪ್ರೀಂಕೋರ್ಟ್ ಮೆಟ್ಟಿಲೇರಿದ ನಂತರ ಪರಿಹಾರ ಸಿಕ್ಕಿತು. ಬೇರೆ ರಾಜ್ಯದವರಿಗೆ ಇನ್ನೂ ಸಿಕ್ಕಿಲ್ಲ. ರಾಜ್ಯದಲ್ಲಿ ಹಣವಿಲ್ಲದೇ ಅಭಿವೃದ್ಧಿ ಆಗುತ್ತಿಲ್ಲ ಅಂತಾರೆ. ಯಾವ ಅಭಿವೃದ್ಧಿ ನಿಂತಿದೆ ಎಂದು ಪ್ರಶ್ನಿಸಿದರು.

ನಮ್ಮ ಸರ್ಕಾರವನ್ನು ಅಸ್ಥಿರಗೊಳಿಸಲು ಬಿಜೆಪಿ, ಜೆಡಿಎಸ್ ಪ್ರಯತ್ನ ನಡೆಸುತ್ತಿವೆ. ರಾಜ್ಯದಲ್ಲಿ 121 ಇಡಿ ಪ್ರಕರಣಗಳಿವೆ. ಅದರಲ್ಲೂ ವಿರೋಧ ಪಕ್ಷದವರದ್ದೇ ಹೆಚ್ಚು. ಜನರು ಇದನ್ನು ಖಂಡಿಸಬೇಕು. ಜನತೆ ನಮ್ಮ ಮೇಲಿಟ್ಟಿರುವ ನಿರೀಕ್ಷೆಯನ್ನು ಈಡೇರಿಸುತ್ತೇವೆ. ಬಿಜೆಪಿ, ಜೆಡಿಎಸ್ ನವರು ಮನೆ ಮುರುಕರು. ಇವರಿಬ್ಬರೂ ಒಟ್ಟಾಗಿದ್ದಾರೆ. ಏನೇ ಪ್ರಕರಣ ನಡೆದರೂ ಸಿಬಿಐಗೆ ಕೊಡಿ ಅಂತಾರೆ. ಇವರ ಆಡಳಿತದಲ್ಲಿ ನಾವು ಸಿಬಿಐಗೆ ಕೊಡಿ ಎಂದಾಗ ಚೋರ್ ಬಚಾವೋ ಇನ್​ಸ್ಟಿಟ್ಯೂಷನ್​ ಎನ್ನುತ್ತಿದ್ದರು. ನಾವು ಇಡಿ ತನಿಖೆಗೆ ಹೆದರಲ್ಲ, ಆದರೆ ಕಾನೂನಿನ ವಿರುದ್ಧ ತನಿಖೆಯಾಗಬಾರದು ಎಂದರು.

ಕನ್ನಂಬಾಡಿ ಕಟ್ಟೆ ನಮ್ಮೆಲ್ಲರ ಅನ್ನದ ತಟ್ಟೆ: ಡಿಸಿಎಂ ಡಿ.ಕೆ. ಶಿವಕುಮಾರ್ ಮಾತನಾಡಿ, ಇಂದು ಸಂಭ್ರಮದ ದಿನ. ಕನ್ನಂಬಾಡಿ ಕಟ್ಟೆ ನಮ್ಮೆಲ್ಲರ ಅನ್ನದ ತಟ್ಟೆ. ಇದು ನಮ್ಮ ಬದುಕಿನ ಜೀವನದಿ. 92 ವರ್ಷವಾದರೂ ನಾವು ಕಾವೇರಿ ತಾಯಿಗೆ ಸಂಭ್ರಮದಿಂದ ನಮನ ಸಲ್ಲಿಸುತ್ತಿದ್ದೇವೆ. ಚಾಮುಂಡೇಶ್ವರಿ ತಾಯಿಗೆ ಮಳೆಗಾಗಿ ಪ್ರಾರ್ಥನೆ ಮಾಡಿದ್ದೆವು. ಆ ತಾಯಿ ಕರುಣಿಸಿದ್ದರಿಂದ ಅಣೆಕಟ್ಟೆ ತುಂಬಿ ಕಾವೇರಿ ಹರಿಯುತ್ತಿದ್ದಾಳೆ. ಕಳೆದ ವರ್ಷ ಬರಗಾಲವಿತ್ತು. ಈ ಬಾರಿ 82 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಲು ನಿರ್ಧರಿಸಲಾಗಿದೆ. ಅನೇಕರು ನಮ್ಮ ಮೇಲೆ ಟೀಕೆ ಟಿಪ್ಪಣಿ ಮಾಡಿದ್ದರು. ಟೀಕೆಗಳು ಸಾಯುತ್ತವೆ, ನಮ್ಮ ಕೆಲಸಗಳು ಉಳಿಯುತ್ತವೆ ಎಂದು ತಿರುಗೇಟು ನೀಡಿದರು.

Comments are closed.