ಕುಂದಾಪುರ: ಪೊಲೀಸ್ ಇಲಾಖೆಯಲ್ಲಿ 31 ವರ್ಷಗಳ ಸುದೀರ್ಘ ಕಾಲ ಸೇವೆ ಸಲ್ಲಿಸಿ ಸೇವೆಯಿಂದ ಜು.31ರಂದು ನಿವೃತ್ತಿ ಹೊಂದಿದ ಕುಂದಾಪುರ ಪೊಲೀಸ್ ಠಾಣೆ ಪೊಲೀಸ್ ನಿರೀಕ್ಷಕರಾಗಿದ್ದ ಯು.ಬಿ ನಂದಕುಮಾರ್ ಅವರ ಬೀಳ್ಕೊಡುಗೆ ಸಮಾರಂಭವು ಕುಂದಾಪುರದ ಮೊಗವೀರ ಸಭಾಭವನದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಕುಂದಾಪುರ ಪೊಲೀಸ್ ಉಪಾಧೀಕ್ಷಕ ಬೆಳ್ಳಿಯಪ್ಪ ಕೆ.ಯು., ಪ್ರೊಬೆಷನರಿ ಡಿವೈಎಸ್ಪಿ ಗೀತಾ ಪಾಟೀಲ್, ವೃತ್ತ ನಿರೀಕ್ಷಕ ಜಯರಾಮ ಗೌಡ, ಬೈಂದೂರು ವೃತ್ತನಿರೀಕ್ಷಕ ಸವಿತ್ರತೇಜ್ ಹಾಗೂ ಕುಂದಾಪುರ ಉಪ ವಿಭಾಗದ ವಿವಿಧ ಠಾಣಾಧಿಕಾರಿಗಳು, ಸಿಬ್ಬಂದಿಗಳು ಹಾಜರಿದ್ದರು. ಬೀಳ್ಕೊಡುಗೆ ಸಮಾರಂಭದಲ್ಲಿ ಎಲ್ಲಾ ಅಧಿಕಾರಿ ಮತ್ತು ಸಿಬ್ಬಂದಿ ವರ್ಗದವರು ಸೇವೆಯನ್ನು ಮನ ತುಂಬಿ ಶ್ಲಾಘಿಸಿದರು. ಇದೇ ಸಂದರ್ಭ ನಂದಕುಮಾರ್ ದಂಪತಿಗಳನ್ನು ಸನ್ಮಾನಿಸಲಾಯಿತು.
ಕುಂದಾಪುರ ಠಾಣೆಯಲ್ಲಿ ಯು.ಬಿ ನಂದಕುಮಾರ್ ಅವರು ಒಂದೂವರೆ ವರ್ಷಗಳ ಕಾಲ ಸೇವೆ ಸಲ್ಲಿಸಿದ್ದು ಆ ಸಮಯದಲ್ಲಿ ತುಂಬಾ ಕ್ಲಿಷ್ಟಕರ ಪ್ರಕರಣಗಳನ್ನು ಭೇದಿಸುವಲ್ಲಿ ಮತ್ತು ನೂರಕ್ಕೂ ಹೆಚ್ಚು ಕಳೆದುಕೊಂಡ ಮೊಬೈಲನ್ನು ಪತ್ತೆ ಹಚ್ಚಿ ವಾರಿಸುದಾರರಿಗೆ ಹಿಂದಿರುಗಿಸಿರುವುದು ಶ್ಲಾಘನೀಯ ಕೆಲಸವಾಗಿದೆ. ಇವರು 1993ನೇ ಇಸವಿನಲ್ಲಿ ಪೊಲೀಸ್ ಇಲಾಖೆಗೆ ಸೇರಿ ಗುಪ್ತಚರ, ಕರಾವಳಿ ಕಾವಲು ಪಡೆ ಹಾಗೂ ಮುಂತಾದ ವಿಭಾಗಗಳಲ್ಲಿ ಸೇವೆ ಸಲ್ಲಿಸಿದ್ದು ಇವರ ನಿಸ್ವಾರ್ಥ ಸೇವೆಯನ್ನು ಪರಿಗಣಿಸಿ ರಾಜ್ಯ ಸರ್ಕಾರವು ಮುಖ್ಯಮಂತ್ರಿಗಳ ಪದಕವನ್ನು ನೀಡಿತ್ತು.
ಸಹಾಯಕ ಉಪನಿರೀಕ್ಷಕ ಆನಂದ್ ಸ್ವಾಗತಿಸಿ, ಸಿಬ್ಬಂದಿ ಮಧುಸೂದನ್ ನಿರೂಪಿಸಿ, ಕುಂದಾಪುರ ಠಾಣೆ ಕ್ರೈಮ್ ವಿಭಾಗದ ಪಿಎಸ್ಐ ಪುಷ್ಪ ವಂದಿಸಿದರು.
Comments are closed.