ಕರ್ನಾಟಕ

ಬಿಜೆಪಿಯವರೇನು ಸತ್ಯಹರಿಶ್ಚಂದ್ರನ ಮಕ್ಕಳಾ? ಅವರು ಅಧಿಕಾರದಲ್ಲಿದ್ದಾಗ ಏನೆಲ್ಲ ಹಗರಣ ಮಾಡಿದ್ದಾರೆಂದು ಪ್ರಶ್ನಿಸುತ್ತೇವೆ: ಡಿ.ಕೆ ಶಿವಕುಮಾರ್

Pinterest LinkedIn Tumblr

ಬೆಂಗಳೂರು: ಬಿಜೆಪಿ ಹಾಗೂ ಜೆಡಿಎಸ್‌ ಜೊತೆಯಾಗಿ ಸೇರಿ ನಡೆಸುತ್ತಿರುವ ಪಾದಯಾತ್ರೆಗೆ ನಮ್ಮ ಅಭ್ಯಂತರವಿಲ್ಲ. ಆದರೆ ಬೆಂಗಳೂರಿನಲ್ಲಿ ಟ್ರಾಫಿಕ್‌ ಸಮಸ್ಯೆ ಎದುರಾಗುವುದರಿಂದ ಪಾದಯಾತ್ರೆಗೆ ಅವಕಾಶ ನೀಡುತ್ತಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹೇಳಿದರು.

ಸದಾಶಿವನಗರದ ಗೃಹಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬಿಜೆಪಿ ಹಾಗೂ ಜೆಡಿಎಸ್‌ ಹಗರಣಗಳ ಕುರಿತು ನಾಳೆಯಿಂದ ನಮ್ಮ ಸಚಿವರು, ಶಾಸಕರು ಪ್ರಶ್ನೆ ಕೇಳುತ್ತಾರೆ. ಬಿಜೆಪಿ ಹಾಗೂ ಜೆಡಿಎಸ್‌ ನಾಯಕರು ಹೆಜ್ಜೆ ಇಟ್ಟಲ್ಲೆಲ್ಲ ಪ್ರಶ್ನೆ ಕೇಳುತ್ತೇವೆ. ಅವುಗಳಿಗೆ ಅವರು ಉತ್ತರಿಸಿಯೇ ಮುಂದೆ ಹೋಗಬೇಕು. ಈ ಅಭಿಯಾನ ಆಗಸ್ಟ್‌ 2ರಿಂದಲೇ ಆರಂಭವಾಗುತ್ತದೆ. ನಾಳೆ ಬೆಳಗ್ಗೆ 11 ಗಂಟೆಗೆ ಬಿಡದಿಯಲ್ಲಿ ಸಭೆ ಮಾಡುವ ಮೂಲಕ ಪ್ರಶ್ನೆಗಳನ್ನು ಕೇಳುತ್ತೇವೆ. ಇನ್ನು ಆಗಸ್ಟ್‌ 3ರಂದು ರಾಮನಗರ, 4ರಂದು ಚನ್ನಪಟ್ಟಣ, 5ರಂದು ಮದ್ದೂರು, 6ಕ್ಕೆ ಮಂಡ್ಯ, 7 ಹಾಗೂ 9ರಂದು ಮೈಸೂರಿನಲ್ಲಿ ಸಭೆ ನಡೆಸಿ, ಬಿಜೆಪಿ ಹಾಗೂ ಜೆಡಿಎಸ್‌ ನಾಯಕರಿಗೆ ಅವರ ಹಗರಣಗಳ ಕುರಿತು ಪ್ರಶ್ನೆ ಕೇಳುತ್ತೇವೆ. ಅವುಗಳಿಗೆ ಅವರು ಉತ್ತರಿಸಬೇಕು.

ಬಿಜೆಪಿಯವರೇನು ಸತ್ಯಹರಿಶ್ಚಂದ್ರನ ಮಕ್ಕಳಾ? ಅವರು ಅಧಿಕಾರದಲ್ಲಿದ್ದಾಗ ಏನೆಲ್ಲ ಹಗರಣ ಮಾಡಿದರು ಎಂಬುದರ ಕುರಿತು ಪ್ರತಿಯೊಂದು ಸಭೆಯಲ್ಲೂ ಪ್ರಶ್ನೆಗಳನ್ನು ಕೇಳುತ್ತೇವೆ. ಅವರ ಹಗರಣಗಳ ಕುರಿತು ದಾಖಲೆಗಳನ್ನು ಬಿಡುಗಡೆ ಮಾಡುತ್ತೇವೆ. ಪ್ರತಿಯೊಂದು ಸಭೆಯಲ್ಲೂ ಕಾಂಗ್ರೆಸ್‌ ನಾಯಕರು, ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಲಿದ್ದಾರೆ. ನಮ್ಮ ಪ್ರತಿ ಪ್ರಶ್ನೆಗಳಿಗೆ ಅವರು ಉತ್ತರಿಸಿಯೇ ಮುಂದೆ ಹೆಜ್ಜೆ ಇಡಬೇಕು ಎಂದು ತಾಕೀತು ಮಾಡಿದರು.

Comments are closed.